ರಾಜಧಾನಿಯಲ್ಲಿ ಗರಂ ಹವಾ
ರಾಷ್ಟ್ರದ ರಾಜಧಾನಿ ದೆಹಲಿ ಹಲವಾರು ದೃಷ್ಟಿಕೋನದಿಂದ ಮಹತ್ವ ಪಡೆಯಲು ಕಾರಣವಾಗಿರುವುದು ಕೇವಲ ಹಿಮಾಲಯ ಪರ್ವತದ ತಪ್ಪಲಿಗೆ ಸಮೀಪವಿದೆ ಎಂದೇನೂ ಅಲ್ಲ. ಐತಿಹಾಸಿಕ ಘಟನಾವಳಿಗಳ ಹಿನ್ನೆಲೆಯಲ್ಲಿ ಪರಕೀಯರ ದುರಾಕ್ರಮಣದ ಪರಿಣಾಮವಾಗಿ ಉತ್ತರದ ಭಾಗದಲ್ಲಿ ವಿಶಾಲ ಬಯಲಿನ ಪಟ್ಟಣವೊಂದು ಸಾಮ್ರಾಜ್ಯದ ಆಡಳಿತಕ್ಕೆ ಸೂಕ್ತ ಎಂಬ ನಿರ್ಣಯಕ್ಕೆ ಸುಲ್ತಾನರು ಹಾಗೂ ರಾಜಮಹಾರಾಜರು ತೀರ್ಮಾನಿಸಲು ಇದ್ದ ಇನ್ನೊಂದು ಬಹುಮುಖ್ಯ ಕಾರಣವೆಂದರೆ ಯಮುನಾ ನದಿಯ ದಂಡೆಯಲ್ಲಿರುವುದರಿಂದ ನೀರಿನ ಪೂರೈಕೆ ಸುಗಮ ಎಂಬುದಾಗಿತ್ತು. ಹಾಗೆ ನೋಡಿದರೆ ದೆಹಲಿಯಲ್ಲಿ ಯಾವಾಗಲೂ ಅತಿರೇಕದ ಹವಾಮಾನ. ಚಳಿಗಾಲದಲ್ಲಿ ಮೈನಸ್ ಡಿಗ್ರಿ ಉಷ್ಣಾಂಶವಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇನ್ನು ಬೇಸಿಗೆಯಲ್ಲಂತೂ ನಲವತ್ತೈದು ಡಿಗ್ರಿ ಉಷ್ಣಾಂಶವನ್ನು ದಾಟುವುದು ಸ್ವಾಭಾವಿಕವಾದ ಹವಾಮಾನ. ಇನ್ನು ಮಳೆಯ ಆರ್ಭಟವಂತೂ ಹೇಳುವಂತಿಲ್ಲ. ಇದರ ಜೊತೆಗೆ ಬರಗಾಲ ಯಾವಾಗ ತಲೆದೋರುತ್ತದೆ ಎಂಬುದನ್ನು ತಜ್ಞರೂ ತಿಳಿಯದಂತಹ ಸ್ಥಿತಿ. ಇಂತಹ ಹುಚ್ಚು ಸ್ವಭಾವದ ನವದೆಹಲಿಯಲ್ಲಿ ಭಾರತದ ರಾಜಧಾನಿಯಾಗಿ ಮಾರ್ಪಟ್ಟ ನಂತರ ಸಾಕಷ್ಟು ಪ್ರಮಾಣದಲ್ಲಿ ಸುಧಾರಣೆಗಳು ಆಗಿದ್ದರೂ, ಹವಾಗುಣ ಹಾಗೂ ಪಟ್ಟಣದ ಶುದ್ಧೀಕರಣ ಮಾತ್ರ ಯಾವುದೇ ದೃಷ್ಟಿಕೋನದಿಂದಲೂ ಸುಧಾರಿಸಿಲ್ಲ ಎಂಬುದಕ್ಕೆ ಜಾಗತಿಕ ಸಂಸ್ಥೆಯೊಂದು ಕೈಗೊಂಡ ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಅಂಕಿಅಂಶಗಳೇ ಆಧಾರ. ಸ್ವೀಸ್ ತಂತ್ರಜ್ಞಾನ ಸಂಸ್ಥೆ ಕೈಗೊಂಡ ಐಕ್ಯೂಎ ಎಂಬ ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಅಂಕಿಅಂಶಗಳ ಪ್ರಕಾರ ದೆಹಲಿ ಅತ್ಯಂತ ಮಲಿನ ರಾಜಧಾನಿ ಎಂದು ಗುರುತಿಸಲಾಗಿದೆ. ಇದಷ್ಟೇ ಅಲ್ಲ, ಜಗತ್ತಿನ ಪೈಕಿ ಭಾರತದಲ್ಲಿ ಕೆಟ್ಟ ಗಾಳಿ ಇರುವ ಮೂರನೆಯ ರಾಷ್ಟ್ರ ಎಂದು ಸೂಚಿಸಲಾಗಿದೆ. ಇದರ ಜೊತೆಗೆ ಬಿಹಾರದ ಬೆಗುಸರಾಯ್ ಪಟ್ಟಣ ಜಾಗತಿಕವಾಗಿ ಅತ್ಯಂತ ಕೊಳಕು ನಗರ ಎಂದು ಗುರುತಿಸಿಕೊಂಡಿದೆ. ಸಮಾಧಾನದ ಸಂಗತಿಯೆಂದರೆ ನೆರೆಯ ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಗಳು ಜಗತ್ತಿನ ಮಾಲಿನ್ಯ ಪಟ್ಟಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿವೆ.
ನವದೆಹಲಿಯ ಹವಾಮಾನ ಸುಧಾರಣೆಗೆ ಹಲವಾರು ಸಂದರ್ಭಗಳಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಅದರ ಪರಿಣಾಮ ಏನೆಂಬುದು ದೆಹಲಿ ವಾಸಿಗಳಿಗಷ್ಟೇ ಗೊತ್ತು. ದೀಪಾವಳಿ ಹಬ್ಬದ ಸಂದರ್ಭದಲ್ಲಂತೂ ಉಸಿರುಗಟ್ಟುವ ಸ್ಥಿತಿ ಈ ಪಟ್ಟಣದಲ್ಲಿ ತಲೆದೋರುತ್ತದೆ. ಇದರ ನಿವಾರಣೆಗೆ ದೆಹಲಿ ಸರ್ಕಾರ ವಾಹನ ಸಂಚಾರದ ಮೇಲೆ ಸರಿ-ಬೆಸದ ನಿಯಮವನ್ನು ಜಾರಿಗೊಳಿಸಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ. ನ್ಯಾಯಾಲಯದಲ್ಲಿಯೂ ಕೂಡಾ ಹಲವಾರು ಬಾರಿ ಈ ಪಟ್ಟಣದ ದಯನೀಯ ಸ್ಥಿತಿ ಮಾರ್ದನಿಗೊಂಡಿದೆ. ದೆಹಲಿ ಸರ್ಕಾರ ಹಾಗೂ ತಜ್ಞರು ಹೇಳುವಂತೆ ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಕಬ್ಬಿನ ಕೊಳೆಯನ್ನು ಸುಟ್ಟು ಭಸ್ಮ ಮಾಡುವುದರಿಂದ ತಲೆದೋರುವ ದಟ್ಟ ಹೊಗೆಯಿಂದಾಗಿ ದೆಹಲಿಯ ಹವಾಮಾನ ಹದಗೆಡುತ್ತದೆ, ಇದನ್ನು ನಿಯಂತ್ರಿಸಲು ಆಯಾ ರಾಜ್ಯ ಸರ್ಕಾರಗಳು ಹಿಂದೇಟು ಹಾಕುವ ಪರಿಣಾಮದಿಂದ ದೆಹಲಿಯ ಜನ ನರಳಬೇಕಾಗಿದೆ.
ಅದೇನೇ ಇರಲಿ, ರಾಷ್ಟçದ ರಾಜಧಾನಿ ಎನಿಸಿಕೊಂಡ ಮೇಲೆ ಮಾಲಿನ್ಯ ನಿಯಂತ್ರಣದ ಮೂಲಕ ಹವಾಮಾನದ ಪರಿಸ್ಥಿತಿ ಸುಧಾರಿಸುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಇದು ಕೇವಲ ತಾತ್ಪೂರ್ತಿಕ ಕ್ರಮಗಳಿಂದ ಆಗುವಂಥದ್ದಲ್ಲ. ದೂರದೃಷ್ಟಿಯ ಮೂಲಕ ಶಾಶ್ವತವಾಗಿ ಹವಾಮಾನ ರಕ್ಷಣೆಗೆ ಯೋಜನೆಗಳನ್ನು ರೂಪಿಸಿ ಕಾರ್ಯಗತ ಮಾಡಿದರಷ್ಟೇ ನಿರೀಕ್ಷಿತ ಪರಿಹಾರ ಸಾಧ್ಯ. ಅಧಿಕಾರಸ್ಥ ರಾಜಕಾರಣಿಗಳು ಬಹಿರಂಗವಾಗಿ ಶಾಶ್ವತ ಯೋಜನೆಗಳ ಬಗ್ಗೆ ಮಾತನಾಡಿದರೂ, ವಾಸ್ತವವಾಗಿ ರಾಜಕೀಯ ಧಾಟಿಯಲ್ಲಿ ಪ್ರತಿಪಕ್ಷಗಳ ಮೇಲೆ ಆರೋಪ ಹೊರಿಸುವ ಪ್ರವೃತ್ತಿ ನಿಜಕ್ಕೂ ಅರ್ಥವಾಗದ ಸಂಗತಿ.
ದೆಹಲಿ ರಾಜಧಾನಿಯಾಗಿರುವ ಪರಿಣಾಮವಾಗಿ ಎಲ್ಲಾ ರಾಜ್ಯಗಳ ಜನರು ಒಂದಲ್ಲಾ ಒಂದು ಕಾರಣಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಇದೆ. ಕೇಂದ್ರ ಸರ್ಕಾರದ ಆಡಳಿತದ ಕೇಂದ್ರಬಿಂದು, ಸುಪ್ರೀಂಕೋರ್ಟ್, ಸಂಸತ್ ಹಾಗೂ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ಕಾರ್ಯಾಲಯಗಳು ಇರುವುದು ಇಲ್ಲೇ. ಹೀಗಾಗಿ ದೆಹಲಿಯ ಸಂಪರ್ಕವನ್ನು ನಿರಾಕರಿಸುವ ಪರಿಸ್ಥಿತಿ ಜನರಿಗೆ ಇಲ್ಲ. ಮೊಘಲ್ ದೊರೆ ಮಹಮದ್ಬಿನ್ ತೊಘಲಕ್ ತನ್ನ ಆಳ್ವಿಕೆಯ ಕಾಲದಲ್ಲಿ ಹವಾಗುಣ ಹಾಗೂ ಭೌಗೋಳಿಕ ಕಾರಣಗಳಿಗಾಗಿ ರಾಜಧಾನಿಯನ್ನು ದೆಹಲಿಯಿಂದ ದೌಲತಾಬಾದ್ಗೆ ಸ್ಥಳಾಂತರಿಸಲು ಹೊರಟು ಮತ್ತೆ ದೆಹಲಿಗೆ ರಾಜಧಾನಿಯನ್ನು ಮರು ಸ್ಥಳಾಂತರಿಸಿದ ಕಥೆಯ ಹಿಂದಿರುವುದು ರಾಜಕೀಯ ಶಕ್ತಿಗಳ ಧ್ರುವೀಕರಣ. ಬಹುಶಃ ಭಾರತದಲ್ಲಿ ರಾಜಕೀಯ ಶಕ್ತಿಗಳ ಧ್ರುವೀಕರಣದ ಕೇಂದ್ರ ಎಂದರೆ ದೆಹಲಿ. ಈ ನಗರ ರಾಜಕಾರಣವನ್ನೇ ಉಸಿರಾಡಿ ಅದನ್ನೇ ಹೊದ್ದು ಮಲಗುವ ಸ್ಥಿತಿಯಲ್ಲಿದೆ. ಹೀಗಾಗಿ ದೆಹಲಿಯ ವಾತಾವರಣ ಹದಗೆಡುತ್ತಿದ್ದರೂ, ದಂತಗೋಪುರದಲ್ಲಿರುವ ರಾಜಕಾರಣಿಗಳ ಕಣ್ಣು, ಕಿವಿ ಸೇರಿದಂತೆ ಪಂಚೇಂದ್ರಿಯಗಳಿಗೆ ಅನುಭವವಾಗದೇ ಇರುವುದು ಜನರ ಮಟ್ಟಿಗೆ ವಿಚಿತ್ರ ಆದರೂ ನಿಜ.
ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಹವಾನಿಯಂತ್ರಿತ ನಗರ ಎಂಬ ಹೆಗ್ಗಳಿಕೆ ಇದ್ದದ್ದು ನಿಜ. ಆದರೆ ಈಗದು ಕಾಂಕ್ರೀಟ್ ಕಾಡು. ಉದ್ಯಾನವನ ಹಾಗೂ ಕೆರೆಗಳನ್ನು ಕಟ್ಟಡ ನಿರ್ಮಾಣಕ್ಕಾಗಿ ನುಂಗಿ ನೀರು ಕುಡಿದಿರುವ ಪರಿಣಾಮವಾಗಿ ಬೆಂಗಳೂರಿನಲ್ಲಿ ಈಗ ಚಳಿಗಾಲದಲ್ಲಿಯೂ ಬೇಸಿಗೆಯ ಅನುಭವವಾಗುವ ದಿನಗಳೇ ಹೆಚ್ಚು. ಇನ್ನು ಬೇಸಿಗೆಯಲ್ಲಂತೂ ಬದುಕು ನಿಜಕ್ಕೂ ಕಷ್ಟ. ಸರ್ಕಾರಗಳು ಈಗಲಾದರೂ ಬೆಂಗಳೂರಿನ ಬೆಳವಣಿಗೆಗೆ ಕಡಿವಾಣ ಹಾಕುವ ಜೊತೆಗೆ ದಿನದಿಂದ ದಿನಕ್ಕೆ ಮಿತಿಮೀರುತ್ತಿರುವ ವಲಸೆಯ ಪ್ರಮಾಣವನ್ನು ನಿಯಂತ್ರಿಸದಿದ್ದರೆ ಬೆಂಗಳೂರಿಗೂ ದೆಹಲಿಯ ಗತಿ ತಪ್ಪಿದ್ದಲ್ಲವೇನೋ?