ರಾಜೀವ್ ಗೌಡರಿಗೆ 50 ಸಾವಿರಕ್ಕೂ ಹೆಚ್ಚಿನ ಲೀಡ್
ಬೆಂಗಳೂರು: ಉತ್ತರ ಲೋಕಸಭಾ ಕ್ಷೇತ್ರದ ಪ್ರೊ. ರಾಜೀವ್ ಗೌಡ ಅವರು ಪಾರ್ಲಿಮೆಂಟಿನಲ್ಲಿ ಸಮರ್ಥವಾಗಿ ನಾಡಿನ ಪರವಾಗಿ, ಕ್ಷೇತ್ರದ ಜನರ ಪರವಾಗಿ ಧ್ವನಿ ಎತ್ತುತ್ತಾರೆ ಎಂದು ಸಿ.ಎಂ ಸಿದ್ದರಾಮಯ್ಯ ಅವರು ಭರವಸೆಯ ಮಾತುಗಳನ್ನು ಆಡಿದರು.
ಉತ್ತರ ಲೋಕಸಭಾ ಕ್ಷೇತ್ರದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜೀವ್ ಗೌಡರ ಪರವಾಗಿ ನಡೆದ ಬೂತ್ ಮುಖಂಡರು ಮತ್ತು ಬ್ಲಾಕ್ ಮುಖಂಡರುಗಳ ಬೃಹತ್ ಸಭೆಯನ್ನು ಹಾಗೂ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಗೆ ನೀವು ಮತ ಹಾಕಲು ಕಾರಣಗಳೇ ಇಲ್ಲ. ಅವರು ಸಂಸದರಾಗಿ ನಾಡಿನ ಜನತೆಗೆ ಆದ ಅನ್ಯಾಯಗಳು ಬಗ್ಗೆ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಲಿಲ್ಲ. ಶೋಭಾ ಕರಂದ್ಲಾಜೆ ಅವರನ್ನು ಉಡುಪಿ-ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರೇ ಗೋ-ಬ್ಯಾಕ್ ಎಂದು ಓಡಿಸಿದ್ದಾರೆ. ತನ್ನನ್ನು ಗೆಲ್ಲಿಸಿದ ಕ್ಷೇತ್ರದ ಕಾರ್ಯಕರ್ತರೇ ಅವರನ್ನು ಗೋ ಬ್ಯಾಕ್ ಎಂದು ಕಳುಹಿಸಿದ್ದಾರೆ. ಆದ್ದರಿಂದ ಇಲ್ಲಿ ಅವರಿಗೆ ಮತಹಾಕಲು ಕಾರಣಗಳೇ ಇಲ್ಲ ಎಂದರು.
ಶೋಭಾ ಕರಂದ್ಲಾಜೆ ಅವರು ಸಂಸದರಾಗಿ ಜನರ ಕೆಲಸ ಮಾಡಲಿಲ್ಲ. ಈ ಕಾರಣಕ್ಕೇ ಮೋದಿಯವರ ಮುಖನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ. ಬಿಜೆಪಿಯವರೂ ಸರ್ಕಾರ ನಡೆಸಿ ಜನರ ಕೆಲಸ ಮಾಡದೆ ತಿರಸ್ಕೃತಗೊಂಡರು. ಹೀಗಾಗಿ ಇವರೂ ಮೋದಿ ಮುಖ ನೋಡಿ ಮತ ಹಾಕಲು ಕೇಳುತ್ತಿದ್ದಾರೆಯೇ ಹೊರತು ತಮ್ಮ ಸಾಧನೆಗಳ ಮೇಲೆ ಕೇಳುತ್ತಿಲ್ಲ.
ಕೇಂದ್ರ ಸರ್ಕಾರ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟು ಯೋಜನೆಗೆ ಅನುಮತಿ ಕೊಡಲಿಲ್ಲ. ಮೋದಿಯವರೂ ಬೆಂಗಳೂರಿನ ಜನತೆಗೆ ಕುಡಿಯುವ ನೀರು ಕೊಡುವ ಯೋಜನೆಗೆ ಬೆಂಬಲ ಘೋಷಿಸುತ್ತಿಲ್ಲ. ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ ಮೋದಿಯವರು 15 ರೂಪಾಯಿಯನ್ನೂ ಹಾಕಿಲ್ಲ. ಮೋದಿಯವರು ಹೇಳಿದ ಯಾವುದನ್ನೂ ಜಾರಿ ಮಾಡಿಲ್ಲ. ಹೀಗಾಗಿ ಅವರ ಮುಖ ನೋಡಿ ಮತ ಹಾಕಿದರೆ ನಿಮ್ಮಮತಕ್ಕೆ ಗೌರವ ಬರುತ್ತದಾ ಎಂದು ಪ್ರಶ್ನಿಸಿದರು.
ನುಡಿದಂತೆ ನಡೆದು ನಿಮ್ಮ ಮತಗಳಿಗೆ ಘನತೆ ತರುವ ಕೆಲಸವನ್ನು ನಾವು ಮಾಡಿದ್ದೇವೆ. ನಮಗೆ ಶಕ್ತಿ ತುಂಬಿ ಎಂದು ಕರೆ ನೀಡಿದರು.