ರಾಜೀಸೂತ್ರಕ್ಕೆ ಶರಣಾಗಿ ಏಕೈಕ ಉಪ ಮುಖ್ಯಮಂತ್ರಿ ಸ್ಥಾನ
ಬೆಂಗಳೂರು: ಹೈಕಮಾಂಡ್ ರಾಜೀಸೂತ್ರಕ್ಕೆ ಶರಣಾಗಿ ಏಕೈಕ ಉಪ ಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಂಡರೂ, ಇದರ ಬೆನ್ನಲೇ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳಿಗಾಗಿ ಅಷ್ಟ ದಿಕ್ಕುಗಳಿಂದಲೂ ಒತ್ತಾಯದ ದಾಳಿ ನಡೆಯಿತು. ಇದು ಕನಕಪುರ ಬಂಡೆಯನ್ನು ಕುಗ್ಗಿಸುವ ಪಿತೂರಿ ಎಂಬುದು ಅಂಗೈ ಹುಣ್ಣಿನಷ್ಟೇ ಸತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಜನ ಪೂರ್ಣಾವಧಿ ಅಧಿಕಾರ ಕೊಟ್ಟು 8 ತಿಂಗಳು ಕಳೆಯುತ್ತಿದೆ, ಈವರೆವಿಗೂ ಒಂದೇ ಒಂದು ಅಭಿವೃದ್ಧಿ ಕಾರ್ಯದತ್ತ ಹೆಜ್ಜೆ ಇಡಲಾಗದ ಸರ್ಕಾರ, ಮೊದಲ ದಿನದಿಂದಲೂ ಮುಖ್ಯಮಂತ್ರಿ ಗಾದಿಯ ಅವಧಿ ಸುತ್ತ ಗಿರಕಿ ಹೊಡೆಯುವ ಮೂಲಕ ಜನರಲ್ಲಿ ಅಸ್ಥಿರ ಸರ್ಕಾರದ ಭಾವ ಮೂಡಿಸುತ್ತಿದೆ.
'ಕಾಂಗ್ರೆಸ್ ಅಧಿಕಾರಕ್ಕೆ ತರಲು ಬಂಡೆಯಂತೆ ನಿಂತು ಹೋರಾಟ ಮಾಡಿದ್ದೇನೆ ಮುಖ್ಯಮಂತ್ರಿ ಪದವಿಗೆ ನನ್ನನ್ನು ಪರಿಗಣಿಸಲೇ ಬೇಕು' ಎಂದು ಕಾಂಗ್ರೆಸ್ ಹೈಕಮಾಂಡ್ ಮುಂದೆ ಹಕ್ಕೊತ್ತಾಯ ಮಂಡಿಸಿದ್ದ ಡಿ. ಕೆ. ಶಿವಕುಮಾರ ಅವರು ಗತ್ಯಂತರ ವಿಲ್ಲದೇ ಹೈಕಮಾಂಡ್ ರಾಜೀಸೂತ್ರಕ್ಕೆ ಶರಣಾಗಿ ಏಕೈಕ ಉಪ ಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಂಡರೂ, ಇದರ ಬೆನ್ನಲೇ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳಿಗಾಗಿ ಅಷ್ಟ ದಿಕ್ಕುಗಳಿಂದಲೂ ಒತ್ತಾಯದ ದಾಳಿ ನಡೆಯಿತು. ಇದು ಕನಕಪುರ ಬಂಡೆಯನ್ನು ಕುಗ್ಗಿಸುವ ಪಿತೂರಿ ಎಂಬುದು ಅಂಗೈ ಹುಣ್ಣಿನಷ್ಟೇ ಸತ್ಯ. ಈ ನಡುವೆ ಸಿದ್ದರಾಮಯ್ಯನವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದು ಅವರ ಹಿಂಬಾಲಕರ ಮೂಲಕ ಹೇಳಿಸಿ, ಉಪ ಮುಖ್ಯಮಂತ್ರಿಗಳನ್ನು ಮುಜುಗರಕ್ಕೆ ಸಿಲುಕಿಸುತ್ತಿದ್ದ ಮುಖ್ಯಮಂತ್ರಿಗಳು ಇದೀಗ ತಮ್ಮ ಪುತ್ರ ಡಾ.ಯತೀಂದ್ರ ಅವರ ಮೂಲಕ 'ತಂದೆಯವರ ಪೂರ್ಣಾವಧಿ ಮುಖ್ಯಮಂತ್ರಿ ಸ್ಥಾನ ಅಬಾಧಿತ' ಎಂದು ಹೇಳಿಕೆ ಕೊಡಿಸಿದ್ದಾರೆ.
ಇದರಿಂದ ವಿಚಲಿತಗೊಂಡು ಬಂಡೆಯಂತೆ ಆರ್ಭಟಿಸಬೇಕಿದ್ದ ಡಿ. ಕೆ. ಶಿವಕುಮಾರ ಅವರ ಮೆದು ಮಾತುಗಳ ಪ್ರತಿಕ್ರಿಯೆ ಗಮನಿಸಿದರೆ ಅವರನ್ನು ರಾಜಕೀಯ ಹತಾಶೆ ಮುತ್ತಿದಂತೆ ಕಾಣುತ್ತಿದೆ, ಸ್ವಪಕ್ಷೀಯ ವೀರೋಧಿಗಳ ದಾಳ ಅವರಲ್ಲಿ ರಾಯಕೀಯ ಪಲಾಯನದ ಮಾತನಾಡಿಸುತ್ತಿರುವಂತಿದೆ. ಕಾಂಗ್ರೆಸ್ಸಿಗರ ಆಂತರಿಕ ಕಚ್ಚಾಟ ಏನೇ ಇರಲಿ ಇದರಿಂದ ಸರ್ಕಾರದ ಆಡಳಿತದ ಮೇಲೆ ಉಂಟಾಗುತ್ತಿರುವ ಪರಿಣಾಮದಿಂದ ಜನತೆ ಸಂಕಷ್ಟಕ್ಕೆ ಸಿಲುಕುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಬರೆದುಕೊಂಡಿದ್ದಾರೆ.