ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ
ತುಮಕೂರು: ನಮ್ಮ ಐದಕ್ಕೆ ಐದೂ ಗ್ಯಾರಂಟಿಗಳು ಮತ್ತು ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳು ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಸೇರಿವೆ. ನಾವು ಸಕಲರ ಅಭಿವೃದ್ಧಿ ರೂಪಿಸಿದ್ದರಿಂದಲೇ ರಾಜ್ಯದ ಆರ್ಥಿಕತೆ ವೇಗ ಪಡೆದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಸರ್ಕಾರದ ನಾನಾ ಯೋಜನೆಗಳ 750 ಕೋಟಿ ರೂಪಾಯಿ ಮೊತ್ತದ 23,000ಕ್ಕೂ ಅಧಿಕ ಮಂದಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ, ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇಡೀ ದೇಶದಲ್ಲಿ ರಾಜ್ಯದ GDP ನಂಬರ್ ಒನ್ ಆಗಿದೆ. ದೇಶದ GDP ಇನ್ನೂ 8 ಇದೆ. ಆದರೆ ರಾಜ್ಯದ GDP 10ಕ್ಕೆ ತಲುಪಿದೆ. ವಿದೇಶಿ ಬಂಡವಾಳ ಆಕರ್ಷಣೆ ಮತ್ತು ಕೇಂದ್ರಕ್ಕೆ ತೆರಿಗೆ ಪಾವತಿಸುವುದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇದು ಸಾಧ್ಯವಾಗಿದ್ದು ರಾಜ್ಯದ ಎಲ್ಲಾ ಜಾತಿ ಮತ್ತು ಎಲ್ಲಾ ಧರ್ಮದವರ ಒಟ್ಟಾರೆ ಕೊಡುಗೆಯಿಂದ ಎಂದು ವಿವರಿಸಿದರು.
ತುಮಕೂರು ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ಇಂದು ನೇರವಾಗಿ ತಲುಪಿವೆ. ಪ್ರತೀ ಜಿಲ್ಲೆಯಲ್ಲೂ ಲಕ್ಷ ಲಕ್ಷ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ತಲುಪುತ್ತಲೇ ಇವೆ ಎಂದರು.
ರಾಜ್ಯದ ಪ್ರತಿಯೊಬ್ಬರಿಗೂ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ನಾವು ಕೊಡುತ್ತಲೇ ಹೋಗುತ್ತೇವೆ. ಜೊತೆಗೆ ಹಿಂದುಳಿದವರ, ದುರ್ಬಲರ ಏಳಿಗೆಗೆ ವಿಶೇಷ ಯೋಜನೆಗಳನ್ನೂ ರೂಪಿಸುತ್ತೇವೆ. scp/tsp ಕಾಯ್ದೆಯನ್ನು ಜಾರಿ ಮಾಡಿದ್ದು ನಮ್ಮ ಸರ್ಕಾರ ಮಾತ್ರ.
ಆದ್ದರಿಂದ ನಮ್ಮ ಸರ್ಕಾರ ಮಹಿಳೆಯರ ಪರವಾದ ಸರ್ಕಾರ. ನಮ್ಮ ಸರ್ಕಾರ ಎಲ್ಲಾ ಜಾತಿಯ ಬಡವರ, ಹಿಂದುಳಿದವರ, ದಲಿತರ ಪರವಾಗಿರುವ ಸರ್ಕಾರ ಎಂದರು.
ಹಳ್ಳಿಗಳ, ತಾಲ್ಲೂಕುಗಳ, ಜಿಲ್ಲೆಗಳ ಅಭಿವೃದ್ಧಿಯಿಂದ ಮಾತ್ರ ರಾಜ್ಯದ, ದೇಶದ ಅಭಿವೃದ್ಧಿ ಸಾಧ್ಯ.
ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ GDP ಪ್ರಗತಿ ಕಾಣಲು ಸಾಧ್ಯ. ಎಲ್ಲಾ ಧರ್ಮದ, ಎಲ್ಲಾ ಜಾತಿಯ ಜನರು ಆರ್ಥಿಕವಾಗಿ ಪ್ರಗತಿ ಹೊಂದಿದರೆ ಮಾತ್ರ ದೇಶದ ಜಿಡಿಪಿ ಬೆಳವಣಿಗೆಯಾಗುತ್ತದೆ ಎಂದರು.
ಹೀಗಾಗಿ ನಮ್ಮ ಸರ್ಕಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವಾಗ ಎಲ್ಲಾ ಜಾತಿ, ಎಲ್ಲಾ ಧರ್ಮ, ಎಲ್ಲಾ ವರ್ಗದವರನ್ನೂ ಒಳಗೊಳ್ಳುವಂತೆ ರೂಪಿಸುತ್ತೇವೆ. ನಮ್ಮ ಐದಕ್ಕೆ ಐದೂ ಗ್ಯಾರಂಟಿಗಳು ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಸೇರಿದ್ದಾಗಿದೆ. ಈ ರೀತಿ ಸಕಲರ ಅಭಿವೃದ್ಧಿ ರೂಪಿಸಿದ್ದರಿಂದಲೇ ರಾಜ್ಯದ ಆರ್ಥಿಕತೆ ವೇಗ ಪಡೆದುಕೊಂಡಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಎನ್. ರಾಜಣ್ಣ, ಬೈರತಿ ಸುರೇಶ್, ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಸೇರಿ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.