ರಾಜ್ಯದಲ್ಲಿರುವುದು ಕಾಂಗ್ರೆಸ್ ಆಡಳಿತವೋ...
ರಾಜ್ಯದಲ್ಲಿ ಕಾಂಗ್ರೆಸ್ ಪ್ರೇರಿತ ಅರಾಜಕತೆ ಸೃಷ್ಟಿಯಾಗಿದ್ದು ಇತ್ತೀಚಿಗೆ ಬೀದಿಗಳಲ್ಲಿ ನಡೆಯುತ್ತಿದ್ದ ರೌಡಿಸಂ, ಗೂಂಡಾರಾಜ್ ಇದೀಗ ಬೆಳಗಾವಿಯ ಸುವರ್ಣಸೌಧಕ್ಕೂ ಕಾಲಿಟ್ಟಿದೆ. ಅದಕ್ಕೆ ರಾಜ್ಯದ ಮಾಜಿ ಸಚಿವರು ಹಾಗೂ ಹಾಲಿ ಬಿಜೆಪಿ ಶಾಸಕರಾದ ಸಿ.ಟಿ ರವಿಯವರ ಮೇಲೆ ಸುಳ್ಳು ಆರೋಪ ಹೊರಿಸಿ ಕಾಂಗ್ರೆಸ್ ಬೆಂಬಲಿಗರು ಹಲ್ಲೆ ಹಾಗೂ ಕೊಲೆ ಯತ್ನ ನಡೆಸಿರುವುದೇ ಸಾಕ್ಷಿ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ದೇಗುಲವೆಂದೇ ಕರೆಯಲಾಗುವ ಸುವರ್ಣ ಸೌಧದಲ್ಲಿ ಯಾವುದೇ ಭಯವಿಲ್ಲದೇ ಜನಪ್ರತಿನಿಧಿಯೊಬ್ಬರ ಮೇಲೆ ಕಾಂಗ್ರೆಸ್ಸಿಗರು ಈ ಪರಿ ಗೂಂಡಾಗಿರಿ ನಡೆಸುತ್ತಾರೆಂದರೆ ರಾಜ್ಯದ ಸಾಮಾನ್ಯ ಜನರ ಗತಿಯೇನು? ಸದನದೊಳಗೆ ಸ್ಪೀಕರ್, ಸಭಾಪತಿಗಳೇ ಸುಪ್ರೀಂ. ಅಲ್ಲಿ ನಡೆಯುವ ಯಾವುದೇ ಘಟನೆಗಳಿಗೆ ಅವರೇ ನಿರ್ಧಾರ ಕೈಗೊಳ್ಳುತ್ತಾರೆ ಹೊರತು ರಾಜ್ಯದ ಈವರೆಗಿನ ಇತಿಹಾಸದಲ್ಲಿ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡು ಯಾವುದೇ ಒಬ್ಬ ಶಾಸಕರನ್ನು ಬಂಧಿಸಿದ ಇತಿಹಾಸವಿಲ್ಲ. ಹಾಗಿರುವಾಗ ನಿಯಮಬಾಹಿರವಾಗಿ ಸುಳ್ಳು ಆರೋಪದಡಿ ಸಿಟಿ ರವಿಯವರನ್ನು ಬಂಧಿಸಿ ಇಡೀ ರಾತ್ರಿ ಪೊಲೀಸ್ ಜೀಪಿನಲ್ಲಿ ತಿರುಗಾಡಿಸಿ ಮಾನಸಿಕ ಹಿಂಸೆ ನೀಡಿದ ಕಾಂಗ್ರೆಸ್ ಸರ್ಕಾರದ ಕ್ರಮಕ್ಕೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.
ಅಷ್ಟಕ್ಕೂ ಸುಳ್ಳು ಆರೋಪ ಮಾಡುತ್ತಿರುವವರು, ಸದನದೊಳಗೆ ಹತ್ತಾರು ಕ್ಯಾಮರಾಗಳು ಪ್ರತಿಯೊಂದು ಚಲನವಲನಗಳನ್ನು ಆಡಿಯೋ ಸಮೇತ ಸೆರೆ ಹಿಡಿಯುತ್ತಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಕಾಂಗ್ರೆಸ್ಸಿಗರ ಸುಳ್ಳು ಆರೋಪದ ವಿರುದ್ಧ ಸ್ವತಃ ಸಿ.ಟಿ ರವಿ ಯವರೇ ಸತ್ಯಾಸತ್ಯತೆ ಪರಿಶೀಲನೆ ನಡೆಸಿ ಎಂದು ಸವಾಲು ಹಾಕಿದ್ದರೂ ಕಾಂಗ್ರೆಸ್ ಹಿಂದೇಟು ಹಾಕುತ್ತಿರುವುದು ಯಾಕೆ?. ಈ ಎಲ್ಲಾ ಘಟನೆಗಳಿಂದ ಜನಸಾಮಾನ್ಯರಿಗೆ ಕಾನೂನಿನ ಮೇಲೆ ನಂಬಿಕೆಯೇ ಹೊರಟು ಹೋಗುವಂತಾಗಿದೆ. ಹಾಗಾಗಿ ಕೂಡಲೇ ಕಾಂಗ್ರೆಸ್ಸಿನ ಎಲ್ಲಾ ಗೂಂಡಾಗಳನ್ನು ಕಠಿಣ ಕಾನೂನು ಕ್ರಮಗಳಡಿ ಬಂಧಿಸಿ ಜೈಲಿಗಟ್ಟುವ ಮೂಲಕ ಮತ್ತೆ ಕಾನೂನಿನ ಬಗ್ಗೆ ಎಲ್ಲರಲ್ಲಿ ಗೌರವ ಮೂಡಿಸುವ ಕೆಲಸವಾಗಬೇಕು ಎಂದು ಶಾಸಕರು ಸರ್ಕಾರವನ್ನು ಆಗ್ರಹಿಸಿದರು.