ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಸೃಷ್ಟಿಸಿದ ಕಾಂಗ್ರೆಸ್
ಹುಬ್ಬಳ್ಳಿ: ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾಂಗ್ರೆಸ್ ಸರ್ಕಾರ ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ಏಳೇ ತಿಂಗಳಲ್ಲಿ ಸರ್ಕಾರಕ್ಕೆ ಅಧಿಕಾರದ ಮದ ಏರಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾವಿ ಕ್ಷೇತ್ರದ ತಡಸದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲು ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.
ಇದು ಸರ್ಕಾರ ದಬ್ಬಾಳಿಕೆಯ ಸರ್ಕಾರ. ಮುಖ್ಯಮಂತ್ರಿಗಳು, ಮಂತ್ರಿಗಳ ಭಾಷೆ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತಿದೆ. ಅನ್ಯಾಯದ ವಿರುದ್ದ ಹೋರಾಟ ಮಾಡಿದರೆ ಅವರ ವಿರುದ್ಧ ಕೇಸ್ ಹಾಕುತ್ತಿದ್ದಾರೆ. ಈ ಸರ್ಕಾರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣ ಇದೆ. ಕರ್ನಾಟಕದಲ್ಲಿ ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ ನಡೆಯುತ್ತಿದೆ. ಅದರಲ್ಲಿ ಶ್ರೀಕಾಂತ್ ಪೂಜಾರಿ ಕೇಸ್ ಒಂದು. ಅವರ ವಿರುದ್ದ ಯಾವುದೇ ಪ್ರಕರಣ ಇಲ್ಲದಿದ್ದರೂ, ಅವರನ್ನು ಒಳಗಡೆ ಹಾಕಿದರು. ಇದು ಎಮರ್ಜೆನ್ಸಿಯಲ್ಲಿ ಮಾತ್ರ ಸಾಧ್ಯ ಎಂದರು.
ಶ್ರೀಕಾಂತ ಪೂಜಾರಿ ಅವರನ್ನು ಒಳಗಡೆ ಹಾಕಿದ ಅಧಿಕಾರಿ, ಮಂತ್ರಿಗಳು ಕ್ಷಮೆ ಕೇಳಲಿಲ್ಲ. ಇದನ್ನು ಜನರು ಗಮನಸುತ್ತಿದ್ದಾರೆ. ಏಳೇ ತಿಂಗಳಲ್ಲಿ ಈ ಸರ್ಕಾರಕ್ಕೆ ಅಧಿಕಾರದ ಮದ ಏರಿದೆ. ಸರ್ಕಾರದ ದಾಷ್ಟ್ಯ ಹೆಚ್ಚಾಗಿದೆ. ಈ ಸರ್ಕಾರದ ವಿರುದ್ದ ನಾವು ಹೋರಾಟ ಮಾಡುತ್ತೇವೆ ಎಂದರು.
ನಾಳೆ (ಸೋಮವಾರ) ಪಕ್ಷದ ಚಿಂತನ ಮಂಥನ ಇದೆ, ಅಲ್ಲಿ ಪಕ್ಷದ ಎಲ್ಲ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ನವರಿಗೆ ರಾಮ ಮಂದಿರ ಆಗಬಾರದು ಅನ್ನುವ ಆಸೆ ಇತ್ತು. ಆದರೆ, ಭವ್ಯವಾದ ರಾಮಮಂದಿರ ನಿರ್ಮಾಣವಾಗಿದೆ. ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಗೋಧ್ರಾ ಮಾದರಿಯ ಗಲಾಟೆ ನಡೆಯುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ. ಅದೇ, ರೀತಿ ಇಂಡಿಯಾ ಒಕ್ಕೂಟದ ನಾಯಕರೂ ರೈಲಿನಲ್ಲಿ ಪ್ರಯಾಣ ಮಾಡಬೇಡಿ ಎಂದು ಜನರಿಗೆ ಹೇಳುತ್ತಿದ್ದಾರೆ. ದೇಶದಲ್ಲಿ ಮೋದಿಯವರು ಪ್ರಧಾನಿಯಾಗಿದ್ದಾರೆ. ಯಾವುದೇ ರೀತಿಯ ಸಣ್ಣ ಗಲಭೆಗೂ ಅವಕಾಶ ಕೊಡುವುದಿಲ್ಲ. ಸುರಕ್ಷಿತವಾಗಿ, ಬ
ವೈಭವಯುತವಾಗಿ ರಾಮಮಂದಿರ ಉದ್ಘಾಟನೆಯಾಗಲಿದೆ ಎಂದರು.
ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಸಂದರ್ಭ ಬಂದರೆ ಹರಿಪ್ರಸಾದ್ ಅವರಿಂದ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಗಲಭೆಯಾದ ಮೇಲೆ ಮಾಹಿತಿ ಪಡೆದುಕೊಳ್ಳುತ್ತಾರಾ ಇವರು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಅಕಸ್ಮಾತ್ ಏನಾದರೂ ಆದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದರು
ಪುನೀತ್ ಕೆರೆಹಳ್ಳಿ ಬಳಸಿ ಕೋಮು ಗಲಭೆಗೆ ಬಿಜೆಪಿ ಪತ್ವಾ ಹೊರಡಿಸಿದೆ ಎಂದು ಆರೋಪಿಸಿರುವ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಪುನಿತ್ ಕೆರೆ ಹಳ್ಳಿ ಸೇರಿದಂತೆ ಯಾರದೇ ಪ್ರಕರಣದಲ್ಲಿ ಕಾಂಗ್ರೆಸ್ ಜನರಲ್ಲಿ ಕೋಮು ಭಾವನೆ ಹುಟ್ಟು ಹಾಕುವ ಕೆಲಸ ಮಾಡುತ್ತಿದೆ. ಬಿಜೆಪಿ ಯನ್ನು ಕೋಮುವಾದಿ ಎಂದು ಆರೋಪಿಸುವ ಕಾಂಗ್ರೆಸ್ ನಿಜವಾದಿ ಕೋಮುವಾದಿ ಎಂದು ಆರೋಪಿಸಿದರು.