ರಾಜ್ಯದಲ್ಲಿ ಈ ಬಾರಿ ನಡುಗಿಸುವ ಚಳಿ
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮಳೆ ಹೆಚ್ಚು ಪ್ರಮಾಣದಲ್ಲಿ ಸುರಿದಿದೆ. ಇದರಿಂದ ವಾತಾವರಣ ತಂಪಾಗಿದ್ದು ಇದರಿಂದ ಈ ವರ್ಷ ಚಳಿ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ನವೆಂಬರ್ ತಿಂಗಳ ಅಂತ್ಯದಿಂದ ರಾಜ್ಯದಲ್ಲಿ ಚಳಿಯು ಹೆಚ್ಚಲಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಮುಂಜಾನೆ ಇಬ್ಬನಿ ಬೀಳುತ್ತಿದ್ದು, ಸಂಜೆ ಚಳಿಯ ಅನುಭವವಾಗುತ್ತಿದೆ. ತಿಂಗಳಾಂತ್ಯಕ್ಕೆ ಕೊರೆಯುವ ಚಳಿ ಜನರನ್ನು ಕಾಡಲಿದೆ.
ಮುಂಗಾರು ಅವಧಿ (ಜೂನ್-ಸೆಪ್ಟೆಂಬರ್)ಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಆದ್ದರಿಂದ ಮಣ್ಣು ಮತ್ತು ವಾತಾವರಣ ಹೆಚ್ಚು ತೇವಾಂಶಗೊಂಡಿದೆ. ಇನ್ನೂ ಹಲವು ಕಾರಣಗಳಿಂದಾಗಿ ಈ ಬಾರಿ ಚುಮು ಚುಮು ಚಳಿ ಜನರನ್ನು ಕಾಡಲಿದೆ. ಆಗಾಗ ಮೋಡ ಕವಿದ ವಾತಾವರಣ ಇದ್ದರೂ ಸಂಜೆ ಹಾಗೂ ರಾತ್ರಿ ವೇಳೆ ಚಳಿ ಪ್ರಮಾಣ ಮತ್ತಷ್ಟು ಹೆಚ್ಚಳವಾಗಲಿದೆ.
ಇನ್ನೆರಡು ತಿಂಗಳ ಕಾಲ ಕನಿಷ್ಠ ಮತ್ತು ಗರಿಷ್ಠ ತಾಪಮಾನಕ್ಕಿಂತ ಉಷ್ಣಾಂಶ ಸರಾಸರಿ ೩ರಿಂದ ೪ ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಹವಾಮಾನ ಇಲಾಖೆ ತಜ್ಞರ ಪ್ರಕಾರ ರಾಜ್ಯದಲ್ಲಿ ಚಳಿ ಹೆಚ್ಚಾಗಲು ಎಲ್-ನಿನಾ ಸಹ ಕಾರಣವಾಗಲಿದೆ. ಪೂರ್ವ, ಮಧ್ಯ ಪೆಸಿಫಿಕ್ ಮಹಾಸಾಗರದಲ್ಲಿ ಉಷ್ಣಾಂಶ ಕಡಿಮೆಯಾದಾಗ ಎಲ್-ನಿನಾ ಉಂಟಾಗಲಿದೆ.
ಈ ಕುರಿತು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿ, ಕಳೆದ ವರ್ಷ ಮಳೆ ಕಡಿಮೆಯಾಗಿತ್ತು. ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಇದರಿಂದ ತಾಪಮಾನ ಇಳಿಮುಖವಾಗಿದೆ. ಇನ್ನೆರಡು ತಿಂಗಳ ಕಾಲ ಮತ್ತಷ್ಟು ತಾಪಮಾನ ಇಳಿಮುಖವಾಗಲಿದೆ ಎಂದಿದ್ದಾರೆ.
ಉತ್ತರ ಭಾರತದ ರಾಜ್ಯಗಳಲ್ಲಿ ಈಗ ಚಳಿಯ ವಾತಾವರಣ ಆರಂಭವಾಗಿದೆ. ಆ ಕಡೆಯಿಂದ ಬೀಸುವ ಗಾಳಿಯ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಾತಾವರಣದಲ್ಲಿ ಬದಲಾವಣೆಯಾಗಲಿದೆ. ಈ ಬಾರಿ ಅತಿ ಹೆಚ್ಚು ಮಳೆಗೆ ಸಾಕ್ಷಿಯಾಗಿದ್ದ ಜನರು ಈಗ ನಡುಗುವ ಚಳಿಯನ್ನು ಎದುರಿಸಬೇಕಾಗಿದೆ.
ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಡಿಸೆಂಬರ್ ಹಾಗೂ ಜನವರಿಯಲ್ಲಿ ಕನಿಷ್ಠ ಉಷ್ಣಾಂಶ ೮ ರಿಂದ ೧೦ ಡಿಗ್ರಿ ದಾಖಲಾಗುವ ಸಾಧ್ಯತೆಗಳಿವೆ. ಬೆಂಗಳೂರು ಮತ್ತಿತರ ಜಿಲ್ಲೆಗಳಲ್ಲಿ ೧೨ ರಿಂದ ೧೪ ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಚಳಿಗಾಲದಲ್ಲಿ ನಸುಕಿನ ಜಾವ ೪ ಗಂಟೆಯಿಂದ ಬೆಳಗ್ಗೆ ೮ ಗಂಟೆಯವರೆಗೂ ಶೀತದ ವಾತವರಣ ಇರಲಿದ್ದು, ಶೀತ-ಜ್ವರದ ಆತಂಕವೂ ಕಾಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.