ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ
ಬಾಗಲಕೋಟೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ನೇಹಾ, ಅಂಜಲಿ ಹತ್ಯೆ ಪ್ರಕರಣದಿಂದ ಚನ್ನಗಿರಿ ಪೊಲೀಸ್ ಠಾಣೆಗೆ ಕಲ್ಲು ತೂರಾಟದವರೆಗೂ ಗಮನಿಸಿ ನೋಡಿ. ಇವೆಲ್ಲ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿ ಹೇಳಿಕೆಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಹೇಳಿಕೆ ನೀಡಿದ್ರೆ, ಗೃಹ ಸಚಿವ ಪರಮೇಶ್ವರ ಒಂದು ಹೇಳಿಕೆ ಕೊಡ್ತಾರೆ. ರಾಜ್ಯದಲ್ಲಿ ಏನೇ ಅನಾಹುತ ಆದರೂ ವೋಟ್ ಬ್ಯಾಂಕ್‌ಗಾಗಿ ಬೇಜವಾಬ್ದಾರಿತನದ ಹೇಳಿಕೆಗಳನ್ನ ನೀಡುತ್ತಾರೆ ಎಂದರು.
ಚನ್ನಗಿರಿ ಲಾಕಪ್ ಡೆತ್ ಪ್ರಕರಣ ಸಂಬಂಧಪಟ್ಟಂತೆ ಮೃತ ಆದಿಲ್ ತಂದೆಯೇ ಎರಡು ಹೇಳಿಕೆ ನೀಡಿದ್ದಾರೆ. ಒಂದು ಕಡೆ ಲೋ ಬಿಪಿ ಇತ್ತು ಅಂತಾ ಹೇಳಿದ್ರೆ, ಮತ್ತೊಂದು ಕಡೆ ಲಾಕಪ್ ಡೆತ್ ಅಂತಿದ್ದಾರೆ. ಆದರೆ, ಮುಸ್ಲಿಂ ಅಂದೊಡನೇ ಪರಿಹಾರ ಘೋಷಣೆ ಮಾಡುವ ಕಾಂಗ್ರೆಸ್ ಸರ್ಕಾರ ಇದುವರೆಗೆ ಪರಿಹಾರ ಕೊಟ್ಟಿಲ್ಲ ಅನ್ನೋದೇ ಆಶ್ಚರ್ಯವಾಗಿದೆ ಎಂದರು.