For the best experience, open
https://m.samyuktakarnataka.in
on your mobile browser.

ರಾಜ್ಯದಲ್ಲಿ ಜನರ ಹಣ ಲೂಟಿ: ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ

09:19 PM Dec 04, 2024 IST | Samyukta Karnataka
ರಾಜ್ಯದಲ್ಲಿ ಜನರ ಹಣ ಲೂಟಿ  ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ

ನವದೆಹಲಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ನಾನಾ ಹಗರಣ, ಭ್ರಷ್ಟಾಚಾರದ ಮೂಲಕ ಜನರ ಹಣ ಲೂಟಿ ಹೊಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರೇ ಖುದ್ದು ಮುಡಾ ಹಗರಣದಲ್ಲಿ ಭಾಗಿ ಆಗಿದ್ದಾರೆ. ಇಂಥವರಿಂದ ರಾಜ್ಯ ಮತ್ತು ಸಾಮಾಜಿಕ ಅಭಿವೃದ್ಧಿ ನಿರೀಕ್ಷಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬರೀ ಹಗರಣಗಳಲ್ಲೇ ತೊಡಗಿದೆ. ಮುಡಾ, ವಾಲ್ಮೀಕಿ, ಅಬಕಾರಿ ಹೀಗೆ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿ ಜನರ ಹಣ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಸಾಮಾಜಿಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುತ್ತಿಲ್ಲ, ರಾಜ್ಯದ ಅಭಿವೃದ್ಧಿಗೂ ಗಮನ ಹರಿಸುತ್ತಿಲ್ಲ. ಬದಲಾಗಿ ಬರೀ ಹಗರಣಗಳಿಗೆ ಸೀಮಿತವಾಗಿದೆ ಎಂದು ಜೋಶಿ ದೂರಿದರು. ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲೇ ಅಧಿಕಾರಕ್ಕೆ ಬರಲಿ ಭ್ರಷ್ಟಾಚಾರಕ್ಕೆ ಇಳಿಯುತ್ತದೆ. ಕರ್ನಾಟಕವೇ ಇದಕ್ಕೊಂದು ನಿದರ್ಶನ ಎಂದು ಹೇಳಿದರು.
ಯುಪಿಯಲ್ಲಿ ಕಾನೂನು ಸುವ್ಯವಸ್ಥೆ ಧಕ್ಕೆ ಬೇಡ:
ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ಎಲ್ಲರೂ ಕೈ ಜೋಡಿಸಲಿ. ಅದು ಬಿಟ್ಟು ಅಹಿತಕರ ಘಟನೆಗಳಿಗೆ ಕುಮ್ಮಕ್ಕು ನೀಡುವುದಲ್ಲ ಎಂದು ಸಮಾಜವಾದಿ ಪಾರ್ಟಿ ನಾಯಕರಿಗೆ ಸಚಿವ ಜೋಶಿ ಚಾಟಿ ಬೀಸಿದರು. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಸರ್ಕಾರ ಇದ್ದಾಗಲೂ ಇದಕ್ಕಿಂತ ತೀವ್ರ ಸ್ವರೂಪದ ಗಲಾಟೆ, ಹಿಂಸಾಚಾರ ನಡೆದಿವೆ. ಅವನ್ನೊಮ್ಮೆ ಮೆಲುಕು ಹಾಕಲಿ. ಆಮೇಲೆ ನಮಗೆ ಪಾಠ ಹೇಳಲು ಬರಲಿ ಎಂದು ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ನಾಯಕರಿಗೆ ಜೋಶಿ ತಿರುಗೇಟು ನೀಡಿದರು.