ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರಾಜ್ಯದಲ್ಲಿ ನಕ್ಸಲ್‌ಗೆ ವಿದಾಯ

02:30 AM Nov 21, 2024 IST | Samyukta Karnataka

ಕರ್ನಾಟಕದಲ್ಲಿ ನಕ್ಸಲ್‌ವಾದ ಬೆಳಕಿಗೆ ಬಂದಿದ್ದೇ ಸಾಕೇತ್ ರಾಜನ್ ಕಾಲದಲ್ಲಿ. ಪಶ್ಚಿಮಬಂಗಾಲದಿಂದ ಪಶ್ಚಿಮ ಘಟ್ಟಗಳ ಮೂಲಕ ಇದನ್ನು ಕರ್ನಾಟಕಕ್ಕೆ ತಂದರೂ ಜನಮನ್ನಣಿ ಪಡೆಯುವುದು ಕಷ್ಟವಾಯಿತು. ಇತ್ತೀಚೆಗೆ ಪೊಲೀಸರ ಗುಂಡಿಗೆ ಬಲಿಯಾದ ವಿಕ್ರಂ ಗೌಡ ಅವರಿಂದ ಹಿಡಿದು ಎಲ್ಲ ನಾಯಕರು ವೈಚಾರಿಕವಾಗಿ ಬಹಳ ಪ್ರಜ್ಞಾವಂತರು. ಅವರ ಸಾಮಾಜಿಕ ಕಳಕಳಿಯನ್ನು ಯಾರೂ ಪ್ರಶ್ನಿಸಲು ಬರುವುದಿಲ್ಲ. ನಕ್ಸಲ್‌ವಾದ ದೂರದಿಂದ ನಿಂತು ನೋಡುವುದಕ್ಕೆ ಆಕರ್ಷಕವಾಗಿ ಕಾಣುತ್ತದೆ. ಆದರೆ ಅದರ ಕಾರ್ಯಾಚರಣೆ ಒಪ್ಪುವುದು ಕಷ್ಟ. ಅದರಲ್ಲೂ ಪ್ರಜಾಪ್ರಭುತ್ವದಲ್ಲಿ ಯಾವುದೇ ಹಿಂಸಾತ್ಮಕ ಆಂದೋಲನ ಹೆಚ್ಚು ದಿನ ಉಳಿಯುವುದಿಲ್ಲ. ನಕ್ಸಲರನ್ನು ಕೇಂದ್ರ ಸರ್ಕಾರ ಉಗ್ರವಾದಿಗಳು ಎಂದು ಪರಿಗಣಿಸಿದ ಮೇಲೆ ನಕ್ಸಲ್ ನಾಯಕರ ಎನ್‌ಕೌಂಟರನ್ನು ವಿರೋಧಿಸುವುದು ಕಷ್ಟವಾಗಿದೆ. ಈಗ ವಿಕ್ರಂ ಗೌಡ ಪೊಲೀಸರ ಗುಂಡಿಗೆ ಬಲಿಯಾದರೂ ಯಾರೂ ಪ್ರತಿಭಟಿಸುವ ಶಕ್ತಿ ಹೊಂದಿಲ್ಲ. ಸಾಮಾಜಿಕ ಬದಲಾವಣೆ ಬರಬೇಕೆಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ನಕ್ಸಲರು ಅನುಸರಿಸಿದ ರಕ್ತ ಕ್ರಾಂತಿ ಮಾರ್ಗವನ್ನು ಯಾರೂ ಒಪ್ಪುವುದಿಲ್ಲ. ಅದರಲ್ಲೂ ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶ ಇಲ್ಲವೇ ಇಲ್ಲ. ರಕ್ತರಹಿತ ಸಾಮಾಜಿಕ ಬದಲಾವಣೆ ಒಪ್ಪಿದ ಕಮ್ಯೂನಿಷ್ಟರು ಈಗಲೂ ಪ್ರಜಾಪ್ರಭುತ್ವದಲ್ಲಿ ಉಳಿದುಕೊಳ್ಳುವುದಕ್ಕೆ ಇದೇ ಕಾರಣ.
ಕರ್ನಾಟಕದಲ್ಲಿ ಸಾಕೇತ್ ರಾಜನ್, ವಿಕ್ರಂ ಗೌಡ ಚಿಕ್ಕಮಗಳೂರು ಅರಣ್ಯದಿಂದ ಹಿಡಿದು ಉಡುಪಿ ಮತ್ತಿತರ ಜಿಲ್ಲೆಗಳಿಗೆ ಅರಣ್ಯ ಮೂಲಕವೇ ನಕ್ಸಲ್‌ವಾದವನ್ನು ತೆಗೆದುಕೊಂಡು ಹೋದರು. ಆಂಧ್ರದ ಪ್ರಭಾವದಿಂದ ರಾಯಚೂರು ಜಿಲ್ಲೆಯಲ್ಲೂ ಕಾಣಿಸಿಕೊಂಡಿದ್ದು. ನಿಜ, ಸ್ವಾತಂತ್ರ್ಯ ಬಂದ ಮೇಲೂ ಗ್ರಾಮೀಣ ಪ್ರದೇಶದಲ್ಲಿ ಬದಲಾವಣೆ ತ್ವರಿತಗತಿಯಲ್ಲಿ ನಡೆಯಲಿಲ್ಲ. ರೈತರು-ಭೂಮಾಲೀಕರ ನಡುವೆ ಸಂಘರ್ಷ ನಡೆಯುತ್ತಲೇ ಇತ್ತು. ಅದರ ಪ್ರಭಾವದಿಂದ ನಕ್ಸಲ್‌ವಾದ ಅದಿವಾಸಿಗಳ ಮೂಲಕ ಬೆಳೆಯಿತು. ಆದರೆ ಭೂಸುಧಾರಣೆ ಕಾಯ್ದೆಯಂತೆ ಹಲವು ಕಾಯ್ದೆಗಳು ಜಾರಿಗೆ ಬಂದಿದ್ದರಿಂದ ನಕ್ಸಲ್‌ವಾದಕ್ಕೆ ಹೊಡೆತ ಬಿದ್ದಿತು. ಜನ ರಕ್ತರಹಿತ ಕ್ರಾಂತಿ ಬಯಸಿದರು.
ಸಾಕೇತ್‌ರಾಜನ್ ಹಾಗೂ ವಿಕ್ರಂ ಗೌಡ ಮತ್ತಿತರ ನಾಯಕರಿಗೆ ತಮ್ಮ ಹೋರಾಟವನ್ನು ಕೈಬಿಟ್ಟು ಮುಖ್ಯವಾಹಿನಿಗೆ ಬರಲು ಅವಕಾಶವಿತ್ತು. ಆದರೆ ಅವರು ಬಂದೂಕ ತ್ಯಜಿಸಲು ಸಿದ್ಧರಿರಲಿಲ್ಲ. ಹೀಗಾಗಿ ಪೊಲೀಸರ ಗುಂಡೇಟಿಗೆ ಬಲಿಯಾಗುವುದು ಅನಿವಾರ್ಯವಾಯಿತು. ವಿಕ್ರಂ ಗೌಡ ಹೋದ ಮೇಲೆ ಉಳಿದವರು ೮ ಜನ ಮಾತ್ರ ಎಂದು ತಿಳಿದುಬಂದಿದೆ. ಪೊಲೀಸರು ಎನ್‌ಕೌಂಟರ್ ನಡೆಸುವುದನ್ನು ಯಾರೂ ಬೆಂಬಲಿಸುವುದಿಲ್ಲ. ಹಿಂಸಾಮಾರ್ಗ ತ್ಯಜಿಸಿ ಬರಲು ಅವಕಾಶ ನೀಡಿದ ಮೇಲೂ ಬಾರದೇ ಹೋದಲ್ಲಿ ಬಲಪ್ರಯೋಗ ಅನಿವಾರ್ಯವಾಗಲಿದೆ. ಕರ್ನಾಟಕ ಸರ್ಕಾರ ಶರಣಾಗುವ ನಕ್ಸಲೀಯರಿಗೆ ಕ್ಷಮಾದಾನ ನೀಡಿ ಆರ್ಥಿಕ ನೆರವನ್ನೂ ಕೊಟ್ಟು ಮುಖ್ಯವಾಹಿನಿಯಲ್ಲಿ ಸೇರ್ಪಡೆಗೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ನಕ್ಸಲ್ ದುರ್ಬಲಗೊಳ್ಳಲು ಮತ್ತೊಂದು ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಶಾಂತಿಮಾರ್ಗವನ್ನು ಕೈಬಿಟ್ಟಿಲ್ಲ. ಅದಕ್ಕೆ ಜಗ್ಗಲಿಲ್ಲ ಎಂದಾಗ ಪೊಲೀಸ್ ಬಲ ಬಳಸುವುದು ಅನಿವಾರ್ಯ.
ಸಾಕೇತ್ ರಾಜನ್ ಮತ್ತು ವಿಕ್ರಂಗೌಡ ಸಮಾಜದಲ್ಲಿ ಬದಲಾವಣೆ ತರಲು ದೃಢಮನಸ್ಸಿನಿಂದ ದುಡಿದರೂ ಅವರು ಅನುಸರಿಸಿದ ಮಾರ್ಗ ಅವರ ಕುಟುಂಬದ ಸದಸ್ಯರಿಗೇ ನೆಮ್ಮದಿ ನೀಡಲಿಲ್ಲ. ಅವರ ಕುಟುಂಬದ ಸದಸ್ಯರು ದೂರ ಸರಿಯುವುದು ಅನಿವಾರ್ಯವಾಯಿತು. ಅವರ ಮನೆಯವರೇ ನಮ್ಮವನಲ್ಲ ಎಂದು ಹೇಳುವ ಪರಿಸ್ಥಿತಿ ಬಂದಿತು. ಹೀಗಿರುವಾಗ ಅವರ ವೈಚಾರಿಕ ಬದ್ಧತೆಗೆ ಸಮಾಜದ ಅಭಯ ಸಿಗುವುದು ಕಷ್ಟವಾಯಿತು. ಪ್ರಜಾಪ್ರಭುತ್ವಕ್ಕೆ ನಕ್ಸಲ್‌ವಾದಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿದೆ ಎಂಬುದು ಸ್ಪಷ್ಟ. ಜನಮನ್ನಣೆ ಇಲ್ಲದ ಸಂಘಟನೆ ಉಳಿಯುವುದಿಲ್ಲ. ನಕ್ಸಲೀಯರು ಯಾವ ಅಸಮಾನತೆಯ ವಿರುದ್ಧ ಹೋರಾಟ ಆರಂಭಿಸಿದರೋ ಅದೆಲ್ಲವನ್ನೂ ಪ್ರಜಾಪ್ರಭುತ್ವ ರೀತಿಯಲ್ಲೇ ಬಗೆಹರಿಸಿಕೊಳ್ಳಬಹುದು ಎಂಬುದು ಜನರಿಗೆ ಗೊತ್ತಾದ ಕೂಡಲೇ ಅವರು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡರು. ಸರ್ಕಾರಗಳು ನಕ್ಸಲ್‌ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಲಿಲ್ಲ. ನಕ್ಸಲರು ತಮ್ಮ ವಿಚಾರಧಾರೆಯನ್ನು ಇಟ್ಟುಕೊಂಡೇ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಕೆಲಸ ಮಾಡಲು ಈಗಲೂ ಅವಕಾಶ ನೀಡಿದೆ. ಹೀಗಾಗಿ ರಕ್ತಸಹಿತ ನಕ್ಸಲ್‌ವಾದ ನಂಬಿದವರು ಅದನ್ನು ಕೈಬಿಟ್ಟು ಹೊಸ ಜೀವನ ನಡೆಸಲು ಅವಕಾಶ ಇದ್ದೇ ಇದೆ. ಕಮ್ಯೂನಿಸ್ಟ್ ವಿಚಾರಧಾರೆಯವರು ಪ್ರಜಾಪ್ರಭುತ್ವದ ಚೌಕಟ್ಟನ್ನು ಒಪ್ಪಿಕೊಂಡಿದ್ದರಿಂದ ಅವರು ಮುಖ್ಯವಾಹಿನಿಯಲ್ಲಿ ಉಳಿಯಲು ಸಾಧ್ಯವಾಗಿದೆ. ನಕ್ಸಲ್ ಸಂಘರ್ಷ ಅಧಿಕಗೊಂಡಾಗ ವಿಶೇಷ ಕಾರ್ಯಪಡೆ ನೇರ ಕ್ರಮ ಕೈಗೊಳ್ಳುತ್ತಿದ್ದರೆ, ಕೇಂದ್ರ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿಗಳ ಮೂಲಕ ಸಂಧಾನ ನಡೆಸುವ ಕೆಲಸವನ್ನೂ ಕೈಗೊಂಡಿದೆ.

Next Article