ರಾಜ್ಯದಲ್ಲಿ ನಾಲ್ಕು ದಿನ ಮಳೆ
ಬೆಂಗಳೂರು: ಬಂಗಾಳಕೊಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಒಳನಾಡಿನಲ್ಲಿ ಜಿಟಿಜಿಟಿ ಮಳೆ ಆರಂಭವಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ.
ಮಂಗಳವಾರದಿಂದ ಮೂರ‍್ನಾಲ್ಕು ದಿನಗಳ ಕಾಲ ಕೆಲವು ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದು, ಬಂಗಾಳದ ಉಪಸಾಗರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ಪಾಂಡಿಚೇರಿ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಭಾನುವಾರದಿಂದ ರಾಜ್ಯದಲ್ಲಿ ಸಾಧಾರಣ ಪ್ರಮಾಣದ ಮಳೆಯಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳಿವೆ ಎಂದಿದ್ದಾರೆ.
ಮಳೆ ಹೆಚ್ಚಾಗುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ನಾಳೆಯಿಂದ ಮಳೆ ಹೆಚ್ಚಲಿದ್ದು, ಅ. ೧೭ರಂದು ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಗಳಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಬಲವಾದ ಮೇಲ್ಮೈ ಗಾಳಿ ಕೆಲವೆಡೆ ಬೀಸಲಿದ್ದು, ಗುಡುಗು ಮಿಂಚಿನಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಇನ್ನು ಕೆಲವೆಡೆ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಆಗಾಗ್ಗೆ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.