For the best experience, open
https://m.samyuktakarnataka.in
on your mobile browser.

ರಾಜ್ಯದಲ್ಲಿ ಬಿಸಿಗಾಳಿ ಎಚ್ಚರಿಕೆ

10:42 PM Mar 28, 2024 IST | Samyukta Karnataka
ರಾಜ್ಯದಲ್ಲಿ ಬಿಸಿಗಾಳಿ ಎಚ್ಚರಿಕೆ

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಜನರು ಮನೆಯಿಂದ ಹೊರಗಡೆ ಕಾಲಿಡಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಭಾರತೀಯ ಹವಾಮಾನ ಇಲಾಖೆ ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮುಂದಿನ ಐದು ದಿನಗಳ ಕಾಲ ತಾಪಮಾನದಲ್ಲಿ ಏರಿಕೆಯಾಗಲಿದ್ದು, ಬಿಸಿಗಾಳಿ ಇರಲಿದೆ ಎಂದು ಮುನ್ಸೂಚನೆ ನೀಡಿದೆ.
ಹೆಚ್ಚಿನ ಸ್ಥಳಗಳಲ್ಲಿ ತಾಪಮಾನವು ೨ ರಿಂದ ೩ ಡಿಗ್ರಿ ಸೆಲ್ಸಿಯಸ್‌ನಷ್ಟು ಏರುತ್ತದೆ. ಆದರೆ ಉತ್ತರ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ೪ರಿಂದ ೫ ಡಿಗ್ರಿ ಸೆಲ್ಸಿಯಸ್‌ಗಳಷ್ಟು ಹೆಚ್ಚಾಗುತ್ತವೆ ಎಂದು ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದಿನ ಐದು ದಿನಗಳ ಕಾಲ ರಾಜ್ಯದಾದ್ಯಂತ ಗರಿಷ್ಠ ತಾಪಮಾನದಲ್ಲಿ ಏರಿಕೆಯಾಗುವ ಮುನ್ಸೂಚನೆಯನ್ನು ಅಧಿಕಾರಿಗಳು ನೀಡಿದ್ದಾರೆ. ಅಲ್ಲದೆ ಜನರು ಹಗಲಿನ ವೇಳೆ ಮನೆಯೊಳಗೆ ಇರುವಂತೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಒಂದು ವೇಳೆ ಜನರು ಹೊರಗಡೆ ಹೋಗುವಾಗ ನೀರು ಅಥವಾ ತಂಪು ಪಾನೀಯಗಳನ್ನು ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಕಲಬುರಗಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಪಮಾನವು ಸಾಮಾನ್ಯ ದಿನಗಳಿಗಿಂತ ೨ರಿಂದ ೩ ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ. ಇನ್ನು ತುಮಕೂರು, ಬಾಗಲಕೋಟೆ ಮತ್ತು ಚಿತ್ರದುರ್ಗದ ಕೆಲವು ಭಾಗಗಳಲ್ಲಿ ತಾಪಮಾನವು ೩.೧-೫ ಡಿಗ್ರಿ ಸೆಲ್ಸಿಯಸ್ ಮತ್ತು ಮಂಡ್ಯ, ದಾವಣಗೆರೆ, ಬಳ್ಳಾರಿ ಮತ್ತು ಕೊಪ್ಪಳದಲ್ಲಿ ೧.೬-೬ ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಏಪ್ರಿಲ್‌ನಲ್ಲಿ ತಾಪಮಾನವು ಮಾರ್ಚ್ಗಿಂತ ಹೆಚ್ಚಾಗಿರುತ್ತದೆ ಎಂದು ತಿಳಿಸಿದೆ.
ಇದರ ನಡುವೆಯೂ ರಾಜ್ಯದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.