ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಅಲ್ಲ, ಬಡಿದಾಟ ನಡೆಯುತ್ತಿದೆ
ಗದಗ(ಶಿರಹಟ್ಟಿ): ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಅಲ್ಲ, ಬಡಿದಾಟ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿಧ್ಧರಾಮಯ್ಯ ಅವರ ಪರಿಸ್ಥಿತಿ ನೋಡಿದರೆ ನನಗೆ ಕೆಟ್ಟ ಅನಿಸತ್ತದೆ. ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಇರುವಾಗಲೇ ಎಲ್ಲರೂ ಸಿಎಂ ಟಾವೆಲ್ ಹಾಕುವುದು, ನಾನು ಸಿಎಂ, ನಾನು ಸಿಎಂ ಅಂತಾ ಪೈಪೋಟಿ ಮಾಡುತ್ತಿದ್ದಾರೆ. ಒಬ್ಬ ನಾಯಕನ ಬಗ್ಗೆ ಅವಿಶ್ವಾಸ ಏನಿದೆ ಅನ್ನುವುದು ಇದರಿಂದ ಗೊತ್ತಾಗತ್ತದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಮೊದಲು ತಮ್ಮ ಸಚಿವ ಸಂಪುಟ ಸರಿ ಮಾಡಿಕೊಳ್ಳಬೇಕು. ಆಮೇಲೆ ತನ್ನಿಂದ ತಾನೇ ಆಡಳಿತ ಬಿಗಿಯಾಗತ್ತದೆ. ಒಬ್ಬ ಮಂತ್ರಿಯೂ ಅಭಿವೃದ್ಧಿ ಬಗ್ಗೆ ಗಮನ ಹರಿಸ್ತಿಲ್ಲ. ಬರೀ ರಾಜಕಾರಣ, ಅಧಿಕಾರ ಹಿಡಿಯುವಂತಹ ವ್ಯಾಮೋಹದಲ್ಲಿದ್ದಾರೆ ಎಂದರು.
ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಆಗಿ ರೈತರು ಸಂಕಷ್ಟದಲ್ಲಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆ ಇದೆ, ಹುದ್ದೆಗಳ ಭರ್ತಿ ಸರಿಯಾಗ್ತಾ ಇಲ್ಲ. ಪರೀಕ್ಷೆಗಳು ಸರಿ ಆಗುತ್ತಿಲ್ಲ, ಅಂಗನವಾಡಿಯವರಿಗೆ ಸಂಬಳ ಸಿಕ್ಕಿಲ್ಲ. ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರ ಸರಿಯಾಗಿ ಸಿಗುತ್ತಿಲ್ಲ. ರಾಜ್ಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದ್ಯಾವುದಕ್ಕೂ ಸರ್ಕಾರದ ಮಂತ್ರಿಗಳು ಲಕ್ಷ್ಯ ಕೊಡುತ್ತಿಲ್ಲ. ಸಿಎಂ ಸ್ಥಾನಕ್ಕೆ ಪೈಪೋಟಿ ಅಲ್ಲ ಬಡಿದಾಟ ಇದೆ ಎಂದು ಹೇಳಿದರು.