For the best experience, open
https://m.samyuktakarnataka.in
on your mobile browser.

ರಾಜ್ಯದಲ್ಲೀಗ ಅನ್ಯಾಯವನ್ನು ಸಹಿಸಬೇಕು, ಪ್ರತಿಭಟಿಸುವಂತಿಲ್ಲ : ಶಾಸಕ ಕಾಮತ್ ಆಕ್ರೋಶ

09:48 PM May 22, 2024 IST | Samyukta Karnataka
ರಾಜ್ಯದಲ್ಲೀಗ ಅನ್ಯಾಯವನ್ನು ಸಹಿಸಬೇಕು  ಪ್ರತಿಭಟಿಸುವಂತಿಲ್ಲ   ಶಾಸಕ ಕಾಮತ್ ಆಕ್ರೋಶ

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಬಿಜೆಪಿ ಕಾರ್ಯಕರ್ತನನ್ನು ರಾಜಕೀಯ ಪ್ರೇರಿತ ಸುಳ್ಳು ಪ್ರಕರಣದಡಿ ಬಂಧಿಸಿದ ಸರ್ಕಾರ ಹಾಗೂ ಸರ್ಕಾರದ ವ್ಯವಸ್ಥೆ ವಿರುದ್ದ ಪ್ರತಿಭಟಿಸಿದ ಕಾರಣಕ್ಕೆ ಸ್ಥಳೀಯ ಶಾಸಕ ಹರೀಶ್ ಪೂಂಜಾರನ್ನೇ ಬಂಧಿಸಲು ಪೊಲೀಸರನ್ನು ಕಳುಹಿಸಿರುವುದು ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಈಗ ಸರ್ಕಾರದ ದಬ್ಬಾಳಿಕೆಯನ್ನು ಅನುಭವಿಸಬೇಕು ಇಲ್ಲವೇ ಸಹಿಸಿಕೊಂಡು ಬದುಕಬೇಕು. ಅಪ್ಪಿತಪ್ಪಿಯೂ ಪ್ರತಿಭಟಿಸುವಂತಿಲ್ಲ ಎನ್ನುವ ಅಘೋಷಿತ ವಾತಾವರಣವನ್ನು ಸೃಷ್ಟಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರವೊಂದು ತಾನು ಆಡಿದ್ದೇ ಆಟ, ಮಾಡಿದ್ದೇ ಕಾನೂನು ಎಂಬಂತೆ ನಡೆದುಕೊಳ್ಳುವುದು ಶೋಭೆಯಲ್ಲ. ಕರಾವಳಿ ಭಾಗದಲ್ಲಿ ಈವರೆಗೆ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡಲು ಆರಂಭಿಸಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಬಿಜೆಪಿ ಶಾಸಕರನ್ನು ಸಹ ಬಂಧಿಸುವ ಹಂತಕ್ಕೆ ಹೋಗಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ನಾವೆಲ್ಲರೂ ಒಂದು ತತ್ವ-ಸಿದ್ಧಾಂತಕ್ಕೆ ಕಟಿಬದ್ಧರಾಗಿರುವವರು. ಅನ್ಯಾಯದ ವಿರುದ್ಧ ಹೋರಾಟ ನಡೆಸಿಯೇ ನಮ್ಮ ಹಿರಿಯರು ಈ ಪಕ್ಷವನ್ನು ಅಸ್ತಿತ್ವಕ್ಕೆ ತಂದಿರುವುದು. ಹೀಗಾಗಿ ಮತ್ತೊಮ್ಮೆ ಸ್ಪಷ್ಟ ಪಡಿಸುತ್ತೇವೆ, ಅನ್ಯಾಯವನ್ನು ನಾವು ಸಹಿಸುವುದಿಲ್ಲ, ಅನ್ಯಾಯದ ವಿರುದ್ಧ ಪ್ರತಿಭಟಿಸಲು ಹೆದರುವುದಿಲ್ಲ. ಸಿದ್ಧಾಂತವೇ ನಮ್ಮ ಆದರ್ಶ. ಕಾರ್ಯಕರ್ತರೇ ನಮ್ಮ ಆಸ್ತಿ. ಕಾಂಗ್ರೆಸ್ಸಿನ ಇಂತಹ ದಬ್ಬಾಳಿಕೆಯನ್ನು ನಾವೆಲ್ಲರೂ ಒಟ್ಟಾಗಿ ಎದುರಿಸುತ್ತೇವೆ, ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದರು.