For the best experience, open
https://m.samyuktakarnataka.in
on your mobile browser.

ರಾಜ್ಯದ ಎಲ್ಲಾ ಜನರ ಅಭಿವೃದ್ಧಿಗೆ ಪೂರಕ ಬಜೆಟ್

02:41 PM Feb 16, 2024 IST | Samyukta Karnataka
ರಾಜ್ಯದ ಎಲ್ಲಾ ಜನರ ಅಭಿವೃದ್ಧಿಗೆ ಪೂರಕ ಬಜೆಟ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆಯ 15ನೇ ಹಾಗೂ 2024-25ನೇ ಸಾಲಿನ ಬಜೆಟ್ ಅನ್ನು ಮಂಡಿಸಿರುವುದು, ರಾಜ್ಯದ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಸ್. ಸುರೇಶ(ಬೈರತಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಸರ್ವ ಜನರ ಆರ್ಥಿಕ ಮತ್ತು ಸಾಮಾಜಿಕ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ್ದಾರೆ.
2023ರ ವಿಧಾನ ಸಭಾ ಚುನಾವಣೆ ವೇಳೆ ನಮ್ಮ ಕಾಂಗ್ರೆಸ್ ಪಕ್ಷ ನೀಡಿದ್ದ ಪಂಚ ಗ್ಯಾರೆಂಟಿಗಳನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜಾರಿಗೊಳಿಸಿದ್ದ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ಬೈರತಿ ಸುರೇಶ ಅವರು ಹೇಳಿದ್ದಾರೆ.
ರಾಜ್ಯದ ರಾಜಧಾನಿ ಬೆಂಗಳೂರನ್ನು ಅಭಿವೃದ್ಧಿ ಪಡಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣ, ಮೆಟ್ರೋ ರೈಲು ಮಾರ್ಗ ವಿಸ್ತರಣೆ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು 2024-25ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ರಾಜಧಾನಿ ಬೆಂಗಳೂರು ಮತ್ತಷ್ಟು ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ ಎಂದು ಸಚಿವರಾದ ಬೈರತಿ ಸುರೇಶ ತಿಳಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ನಗರಗಳ ಅಭಿವೃದ್ಧಿಗೆ 2024-25 ಸಾಲಿನ ಬಜೆಟ್ ನಲ್ಲಿ 18155 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ರಾಜ್ಯದ ಇತರೆ ಹತ್ತು ಮಹಾನಗರ ಪಾಲಿಕೆಗಳ ಅಭಿವೃದ್ಧಿಗಾಗಿ 200 ಕೋಟಿ ರೂಪಾಯಿಗಳನ್ನು ಘೋಷಿಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವರಾದ ಬೈರತಿ ಸುರೇಶ ಅಭಿ‌ನಂದಿಸಿದ್ದಾರೆ.
ಮೈಸೂರು, ‌ಮಂಗಳೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಕಲಬುರಗಿ, ಕೆಜಿಎಫ್, ತುಮಕೂರಿನ ವಸಂರನರಸಾಪುರ, ಬಳ್ಳಾರಿ ನಗರಗಳ ಸಮೀಪ ಇಂಟಿಗ್ರೇಟೆಡ್‌ ಟೌನ್ ಶಿಪ್ ನಿರ್ಮಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ಸ್ವಾಗತಾರ್ಹ ಎಂದು ಸಚಿವರಾದ ಬೈರತಿ ಸುರೇಶ ಹೇಳಿದ್ದಾರೆ.
ಮೈಸೂರು ಮಹಾನಗರದ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಪೆರಿಫಿರಲ್ ರಿಂಗ್ ರೋಡ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಮೈಸೂರು ನಗರದ ಲ್ಯಾನ್ಸಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ.
ರಾಜ್ಯದ ನಗರ ಪ್ರದೇಶಗಳಲ್ಲಿ ವಾಸಿಸುವ ಜನರ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ 2024-25 ನೇ ಸಾಲಿನಲ್ಲಿ ‌7.5 ಲಕ್ಷ ಮನೆಗಳಿಗೆ 200 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಗುರಿ ಹೊಂದಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಇತರೆ 10 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯ ಮತ್ತು ವ್ಯಾಪಾರ ವಹಿವಾಟು ಉತ್ತೇಜಿಸುವ ಸಲುವಾಗಿ ಬೆಳಗಿನ ಜಾವ ಒಂದು ಗಂಟೆ ವರೆಗೆ ತೆರೆಯಲು ವಿಸ್ತರಿಸಲಾಗಿದೆ.
ಸಾಮಾಜಿಕ ಸಮಾನತೆ, ಆರ್ಥಿಕ ಶಿಸ್ತು, ರಾಜಸ್ವ, ಸಂಪನ್ಮೂಲ ಕ್ರೋಡೀಕರಣಕ್ಕೆ ಆದ್ಯತೆ ನೀಡುವ ಮೂಲಕ ಜನಮನ್ನಣೆಯನ್ನು ಗಳಿಸುವ ವಿಶಿಷ್ಠವಾದ ಆಯವ್ಯಯ ಇದಾಗಿದೆ ಎಂದು ಸಚಿವರಾದ ಬೈರತಿ ಸುರೇಶ ತಿಳಿಸಿದ್ದಾರೆ.