ರಾಜ್ಯದ ಮಣ್ಣಿನ ಮಕ್ಕಳು ಸಂಕಲ್ಪ ತೊಡುವುದು ಅನಿವಾರ್ಯ
ಅಲಾವುದ್ದೀನ್ ಖಿಲ್ಜಿಯ ಆದೇಶದ ಮೇಲೆ ದಕ್ಷಿಣದ ಕರ್ನಾಟಕದವರೆಗೂ ಮಲ್ಲಿಕಾಫೂರ್ ನಡೆಸಿದ ದುರಾಕ್ರಮಣ ನೆನಪಾಗುತ್ತಿದೆ
ಬೆಂಗಳೂರು: ಕರ್ನಾಟಕದ ಸದ್ಯದ ಬೆಳವಣಿಗೆಯನ್ನು ನೋಡಿದರೆ 'ಅಲಾವುದ್ದೀನ್ ಖಿಲ್ಜಿ- ಮಲ್ಲಿಕಾಫೂರ್ ಜೋಡಿಯ ಕರಾಳ ಇತಿಹಾಸ' ನೆನಪಿಸಿಕೊಳ್ಳುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕಾಂಗ್ರೆಸ್ ಸರ್ಕಾರ ಈವರೆಗಿನ ಆಡಳಿತದಲ್ಲಿ ಸಂಕಷ್ಟಿತ ರೈತರಿಗಾಗಿ ಯಾವುದೇ ಪರಿಹಾರವನ್ನೂ ನೀಡಲಿಲ್ಲ, ರೈತ ಕಲ್ಯಾಣಕ್ಕಾಗಿ ಒಂದೇ ಒಂದು ಕಾರ್ಯಕ್ರಮವನ್ನೂ ಕೊಡಲಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ವಿಜಯಪುರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿಯ ಹೆಸರಿನಲ್ಲಿ ರೈತರ ಭೂಮಿಯನ್ನು ಆಕ್ರಮಿಸಿಕೊಳ್ಳಲು ಹೊರಟಿದೆ.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ಸಂಬಂಧ ನಿರ್ದೇಶನ ನೀಡಿರುವುದನ್ನು ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಡೆದ ಸಭಾ ನಡವಳಿಯಲ್ಲಿ ಉಲ್ಲೇಖವಾಗಿದೆ. ಅಲ್ಪಸಂಖ್ಯಾತರನ್ನು ತುಷ್ಟೀಕರಿಸುವ ಅಮಲು ಏರಿಸಿಕೊಂಡಿರುವ ಸಿದ್ದರಾಮಯ್ಯನವರು ತಮ್ಮ ಬಂಟ ಸಚಿವ ಜಮೀರ್ ಅಹ್ಮದ್ ಅವರ ಮೂಲಕ ವಕ್ಫ್ ಆಸ್ತಿ ಹೆಸರಿನಲ್ಲಿ ತಲೆತಲಾಂತರದಿಂದ ಭೂಮಿಯನ್ನೇ ನಂಬಿಕೊಂಡು ಅನ್ನ ಬೆಳೆದುಕೊಡುತ್ತಿದ್ದ ರೈತರ ಬದುಕಿಗೆ ಕೊಳ್ಳಿ ಇಡಲು ಹೊರಟಿದ್ದಾರೆ.
ಕರ್ನಾಟಕದ ಸದ್ಯದ ಬೆಳವಣಿಗೆಯನ್ನು ನೋಡಿದರೆ 'ಅಲಾವುದ್ದೀನ್ ಖಿಲ್ಜಿ- ಮಲ್ಲಿಕಾಫೂರ್ ಜೋಡಿಯ ಕರಾಳ ಇತಿಹಾಸ' ನೆನಪಿಸಿಕೊಳ್ಳುವಂತಾಗಿದೆ. ಅಲಾವುದ್ದೀನ್ ಖಿಲ್ಜಿಯ ಆದೇಶದ ಮೇಲೆ ದಕ್ಷಿಣದ ಕರ್ನಾಟಕದವರೆಗೂ ಮಲ್ಲಿಕಾಫೂರ್ ನಡೆಸಿದ ದುರಾಕ್ರಮಣ ನೆನಪಾಗುತ್ತಿದೆ. ಸದ್ಯ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಲಾವುದ್ದೀನ್ ಖಿಲ್ಜಿ-ಮಲ್ಲಿಕಾಫೂರ್ ಅಟ್ಟಹಾಸ ಹಿಮ್ಮೆಟ್ಟಿಸಲು ಈ ರಾಜ್ಯದ ಮಣ್ಣಿನ ಮಕ್ಕಳು ಸಂಕಲ್ಪ ತೊಡುವುದು ಅನಿವಾರ್ಯವಾಗಿದೆ. ಕರ್ನಾಟಕ ಬಿಜೆಪಿ ಮಣ್ಣಿನ ಮಕ್ಕಳ ಪರವಾಗಿ ದನಿಯೆತ್ತಿ ನಿಲ್ಲಲಿದೆ ಎಂದಿದ್ದಾರೆ.