For the best experience, open
https://m.samyuktakarnataka.in
on your mobile browser.

ರಾಜ್ಯದ ೪೦ ಕಡೆ ಲೋಕಾ ದಾಳಿ

11:37 PM Jan 31, 2024 IST | Samyukta Karnataka
ರಾಜ್ಯದ ೪೦ ಕಡೆ ಲೋಕಾ ದಾಳಿ

ಬೆಂಗಳೂರು: ರಾಜ್ಯದ ೪೦ ಕಡೆಗಳಲ್ಲಿ ೧೦ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ದಾಳಿ ವೇಳೆ ಆಸ್ತಿ ದಾಖಲೆ ಪತ್ರಗಳು, ನಗದು, ಚಿನ್ನ, ಬೆಳ್ಳಿ ಆಭರಣ, ವಾಹನಗಳು ಹಾಗೂ ಉಡುಗೊರೆಗಳು ಪತ್ತೆಯಾಗಿವೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಬೆಂಗಳೂರು, ಮಂಡ್ಯ, ಬಳ್ಳಾರಿ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಕೊಪ್ಪಳ, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಮಂಗಳೂರು ಗಂಗಾವತಿ ಸೇರಿದಂತೆ ೪೦ ಕಡೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಮಂಡ್ಯದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಹರ್ಷ ಅವರ ಕಚೇರಿ, ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಮನೆ, ಮಂಡ್ಯ ಜಿಲ್ಲೆಯಲ್ಲಿರುವ ಸಂಬಂಧಿಕರ ಮನೆಗಳು, ಕಲ್ಲಹಳ್ಳಿಯಲ್ಲಿರುವ ಮಾವನ ಮನೆ, ನಾಗಮಂಗಲದಲ್ಲಿರುವ ಫಾರ್ಮ್ಹೌಸ್‌ನಲ್ಲಿ ವಿವಿಧ ದಾಖಲೆಗಳು ಪತ್ತೆಯಾಗಿದ್ದು ಪರಿಶೀಲನೆ ನಡೆಸತ್ತಿದ್ದಾರೆ. ಹಾಸನದ ಆಹಾರ ನೀರಿಕ್ಷಕ ಜಗನ್ನಾಥ್ ನಿವಾಸದಲ್ಲಿ ತಪಾಸಣೆ ನಡೆಸಿದರು. ಜಗನ್ನಾಥ್ ಸಹೋದರ ರಿಯಲ್ ಎಸ್ಟೇಟ್ ಉದ್ಯಮಿ ಕಿರಣ್ ನಿವಾಸ ಹಾಗೂ ಕಚೇರಿ ಮೇಲೂ ದಾಳಿ ನಡೆದಿದೆ. ಲೋಕಾಯುಕ್ತ ಎಸ್ಪಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ತಿರುಮಲೇಶ್, ಇನ್ಸ್ಪೆಕ್ಟರ್‌ಗಳಾದ ಬಾಲು, ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ನೇತ್ರಾವತಿ ಮನೆ ಮೇಲೆ ಲೋಕಾಯುಕ್ತ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು. ೧೩ ವರ್ಷದಿಂದ ಅಧಿಕ ಅಸ್ತಿ ಹೊಂದಿರುವ ಆರೋಪದಡಿಯಲ್ಲಿ ಲೋಕಾಯುಕ್ತ ಇನ್ಸ್ ಸ್ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವ ತಂಡ ದಾಖಲೆಗಳನ್ನು ಪರಿಶೀಲನೆ ನಡೆಸಿತು.
ಮುಡಾ ಇಂಜಿನಿಯರ್ ಯಜ್ಞೇಂದ್ರ ಮೈಸೂರಿನ ಜೆ.ಪಿ .ನಗರದ ಮನೆ, ವಿಜಯನಗರದ ಅಪಾರ್ಟ್ಮೆಂಟ್, ಕೆ.ಆರ್.ನಗರ ತಾಲೂಕಿನ ಮಿರ್ಲೆ ಗ್ರಾಮದಲ್ಲಿರುವ ಯಜ್ಞೇಂದ್ರ ಸಹೋದರನ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ತುಮಕೂರಿನ ಕೆಆರ್‌ಡಿಎಲ್ ಇಂಜಿನಿಯರ್ ಹನುಮಂತರಾಯಪ್ಪ ಮನೆ ಮೇಲೆ ದಾಳಿ ನಡೆದಿದೆ. ತುಮಕೂರಿನ ಶಿರಾ ಗೇಟ್ ಬಳಿಯಿರುವ ಅವರ ಮನೆಯಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.