ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರಾಜ್ಯದ ೯ ಜಿಲ್ಲೆಯ ೨೯ ತಾಲೂಕುಗಳಲ್ಲಿ ಕುಡಿವ ನೀರಿನ ಹಾಹಾಕಾರ

05:12 PM Apr 22, 2024 IST | Samyukta Karnataka

ಕಡೂರು: ರಾಜ್ಯದ ಒಂಬತ್ತು ಜಿಲ್ಲೆಗಳ ೨೯ ತಾಲೂಕುಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗಿದೆ. ತಮ್ಮ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರವನ್ನು ಎಂದು ನೋಡಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡ ಹೇಳಿದರು
ಬೀರೂರಿನ ಕೆ.ಎಲ್.ಕೆ.ಕಾಲೇಜು ಮೈದಾನದಲ್ಲಿ ಸೋಮವಾರ ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣನವರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಾ ರಾಜ್ಯದಲ್ಲಿ ನೀರಾವರಿ ಯೋಜನೆಗಳು ಸ್ಥಗಿತವಾಗಿವೆ. ರಸ್ತೆ ಕಾಮಗಾರಿಗಳು ನಡೆಯುತ್ತಿಲ್ಲ. ಅಭಿವೃದ್ಧಿ ಕೆಲಸಗಳು ಮರೀಚಿಕೆಯಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಎತ್ತಿನಹೊಳೆ ಯೋಜನೆ ಕುರಿತಂತೆ ಮಾತನಾಡಿದ ಅವರು, ಇದರಲ್ಲಿ ಏನೇನು ಅಕ್ರಮ ನಡೆದಿದೆ ಎಂದು ಪ್ರಸ್ತಾಪಿಸಲು ಹೋಗುವುದಿಲ್ಲ. ಎಂಟು ಸಾವಿರ ಕೋಟಿ ಯೋಜನೆಯು ಇಂದು ೨೧ಸಾವಿರ ಕೋಟಿಗೆ ಏರಿಕೆಯಾಗಿದೆ. ದುರ್ದೈವ ಎಂದರೆ ಕೋಲಾರ, ಚಿಕ್ಕಬಳ್ಳಾಪುರ, ಮುಂತಾದೆಡೆ ಈ ಯೋಜನೆಯ ನೀರು ಸಿಗುವುದಿಲ್ಲ ಎಂದರು.
ರಾಜ್ಯದ ಸವಲತ್ತನ್ನು ಲೂಟಿ ಮಾಡಿ ಇಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ಛತ್ತೀಸ್ ಘಡ, ಮಧ್ಯಪ್ರದೇಶ, ರಾಜಸ್ಥಾನ ಮುಂತಾದ ರಾಜ್ಯಗಳ ಚುನಾವಣೆಗಳಿಗೆ ಬಳಸುತ್ತಿದೆ. ೧೦ವರ್ಷ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮೋದಿ ಅವರ ಬಗ್ಗೆ ಸರ್ಕಾರದ ಮುಖಂಡರುಗಳು ಲಘುವಾಗಿ ಮಾತನಾಡುತ್ತಾರೆ. ಇದನ್ನು ಬೇರು ಸಮೇತ ಕಿತ್ತೋಗೆಯಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾವು ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮೀ ಯೋಜನೆ ನಿಂತು ಹೋಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ೬ ಸಾವಿರ ಕೇಂದ್ರ ಸರ್ಕಾರ ನೀಡಿದರೆ, ೪ ಸಾವಿರ ರಾಜ್ಯ ಸರ್ಕಾರ ನೀಡಬೇಕು. ಅದಕ್ಕೂ ಈ ಸರ್ಕಾರ ಎಳ್ಳು-ನೀರು ಬಿಟ್ಟಿದೆ. ರೈತರ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿರುವ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಯಾವುದೇ ಯೋಜನೆಗಳು ಮತ್ತು ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಗ್ಯಾರಂಟಿ ನೆಪದಲ್ಲಿ ಜನರ ಹಗಲು ದರೋಡೆಯಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದರು.
ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಕಡೂರು ಕ್ಷೇತ್ರದ ಜನ ಭೀಮನ ಬಲ ಮತ್ತು ಬುದ್ದಿಯ ಬಲ ಎರಡನ್ನು ಪಡೆದು ಧನ್ಯರಾಗಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಅವರು ಎನ್.ಡಿ.ಎ ಅಭ್ಯರ್ಥಿಯನ್ನು ನೂರಕ್ಕೆ ನೂರು ಬೆಂಬಲಿಸುತ್ತಾರೆಂದು ತಿಳಿಸಿದರು.
ಭೀಮನ ಬಲ ಬೆಳ್ಳಿಪ್ರಕಾಶ್ ಅವರಿಂದ ಸಿಕ್ಕರೆ ಬುದ್ದಿಯ ಬಲ ವೈ.ಎಸ್.ವಿ ದತ್ತಾ ಅವರಿಂದ ಸಿಗುತ್ತಿದೆ. ಈ ಎರಡು ಶಕ್ತಿಗಳು ಒಂದಾದರೇ ಎದುರಾಳಿಗಳು ತರಗರಲೆಯಂತೆ ಉರುಳಿಹೋಗುವುದು ದಿಟ ಸತ್ಯ ಎಂದ ಅವರು, ಕಾಂಗ್ರೆಸ್ ಪಕ್ಷ ಗ್ಯಾರಂಟಿ ಎನ್ನುವ ಎರೆಹುಳು ಸಿಗಿಸಿ ನಿಮ್ಮ ಮತಕ್ಕೆ ಗಾಳ ಹಾಕುತ್ತಾ, ದೇಶವನ್ನು ಬಲಿಕೊಡುವ ಕೆಟ್ಟ ರಾಜಕಾರಣ ಮಾಡುತ್ತಿದೆ. ನಿಮಗೆ ರಾಮ ರಾಜ್ಯ ಬೇಕೋ? ಅಥವಾ ತಾಲಿಬಾನ್ ಆಡಳಿತ ಬೇಕೋ ನೀವೇ ತೀರ್ಮಾನಿಸಬೇಕು. ಕಾಂಗ್ರೆಸ್‌ನವರಿಗೆ ಭಾರತ ಮಾತೆಗೆ ಜೈ ಎನ್ನಲು ಹಿರಿಯ ನಾಯಕರ ಅನುಮತಿ ಪಡೆಯುವ ಪರಿಸ್ಥಿತಿ ಇದೆ.ತಾಲಿಬಾನ್ ಆಡಳಿತ ಕೊನೆಯಾಗಬೇಕಾದ್ರೇ ನೀವು ಮೋದಿ ಕೈ ಬಲಪಡಿಸಿ ಕೇಂದ್ರದಲ್ಲಿ ಬೆಜೆಪಿಯನ್ನು ಆಡಳಿತಕ್ಕೆ ತರಬೇಕು ಎಂದರು.
ಮಾಜಿ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ಕಳೆದ ೧೦ವರ್ಷದ ಆಡಳಿತದಲ್ಲಿ ಪ್ರಧಾನಿ ಮೋದಿಜಿಯವರು ನೂರಾರು ಯೋಜನೆಗಳನ್ನು ಈ ದೇಶದ ೧೪೦ ಕೋಟಿ ಜನಸಂಖ್ಯೆಗೆ ಯಾವುದೇ ಜಾತಿ ಬೇಧ ಭಾವವಿಲ್ಲದೆ ನೀಡಿ ದೇಶದ ಸುಭದ್ರತೆ, ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವವರನ್ನು ಮತದಾರರು ೨೦೨೪ಕ್ಕೆ ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂದು ಮನವಿ ಮಾಡಿದರು.
ವೈ.ಎಸ್.ವಿ.ದತ್ತ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ವಕ್ತಾ ಮಹೇಶ್ ಒಡೆಯರ್, ಮಂಡಲ ಅಧ್ಯಕ್ಷ ದೇವಾನಂದ್, ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ಮಹೇಶ್ ಮಾಜಿ ಜಿ.ಪಂ.ಸದಸ್ಯ ಬಿ.ಪಿ.ನಾಗರಾಜ್, ಕೆ.ಎಂ.ವಿನಾಯಕ್, ಕಲ್ಮರುಡಪ್ಪ, ಸುನಿತಾಜಗದೀಶ್, ಸವಿತಾ ರಮೇಶ್, ಚೇತನ್ ಕೆಂಪರಾಜ್, ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್ ಸದಸ್ಯರಾದ ಬಿ.ಆರ್.ಮೋಹನ್ ಕುಮಾರ್, ರಾಜು, ನಾಗರಾಜ್, ಬಾವಿಮನೆ ಮಧು, ಜಿಗಣೇಹಳ್ಳಿ ನೀಲಕಂಠಪ್ಪ,ಮಾರ್ಗದ ಮಧು, ಹೇಮಂತ್ ಕುಮಾರ್ ಸೇರಿದಂತೆ ಸಾವಿರಾರು ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಇದ್ದರು.

Next Article