ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರಾಜ್ಯಪಾಲರು ಕಾಂಗ್ರೆಸ್ಸಿಗರ ಪಾಲಿಗೆ ಸಿಂಹ ಸ್ವಪ್ನ

10:20 AM Jan 24, 2025 IST | Samyukta Karnataka

ಶಿಕ್ಷಣಮುಖಿ ಕಾರ್ಯಕ್ರಮಗಳಲ್ಲೂ ರಾಜಕೀಯ ಬೆರೆಸುವ ಪ್ರವೃತ್ತಿ

ಬೆಂಗಳೂರು: ರಾಜ್ಯಪಾಲರೊಂದಿಗೆ ಸಂಘರ್ಷಕ್ಕಿಳಿದಿರುವ ಕಾಂಗ್ರೆಸ್ ಸರ್ಕಾರದ ಸಚಿವರು ಪರೋಕ್ಷವಾಗಿ ಸಂವಿಧಾನ ಹಾಗೂ ಸಾಂವಿಧಾನಿಕ ವ್ಯವಸ್ಥೆಯನ್ನು ಅಪಮಾನಿಸುತ್ತಿದ್ದಾರೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಸಂವಿಧಾನದ ಮುಖ್ಯಸ್ಥರಾಗಿರುವ ರಾಜ್ಯಪಾಲರು ವಿಶ್ವವಿದ್ಯಾನಿಲಯಗಳ ಕುಲಾಧಿಪತಿಗಳೂ ಆಗಿದ್ದಾರೆ.

ಮಲೆನಾಡು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ, ಕೃಷಿ ಹಾಗೂ ತೋಟಗಾರಿಕಾ ವಿಶ್ವವಿದ್ಯಾನಿಲಯಗಳ ಘಟಿಕೋತ್ಸವಗಳಲ್ಲಿ ಸಚಿವರುಗಳು ಭಾಗವಹಿಸದೆ ರಾಜ್ಯಪಾಲರನ್ನು ಅಗೌರವಿಸಿರುವ ನಡೆ ಅತ್ಯಂತ ಖಂಡನೀಯ.

ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಸಮಾಜಮುಖಿ ಸಾಧಕರನ್ನು ಗೌರವಿಸಲ್ಪಡುವ ವಿಶ್ವವಿದ್ಯಾನಿಲಯಗಳ ಘಟಿಕೋತ್ಸವ ಕಾರ್ಯಕ್ರಮ ಶಿಕ್ಷಣದ ಘನತೆ ಹಾಗೂ ಗೌರವವನ್ನು ಪ್ರತಿನಿಧಿಸುತ್ತದೆ, ಇಂತಹ ಶಿಕ್ಷಣಮುಖಿ ಕಾರ್ಯಕ್ರಮಗಳಲ್ಲೂ ರಾಜಕೀಯ ಬೆರೆಸುವ ಪ್ರವೃತ್ತಿ ಬೆಳೆಸಿಕೊಂಡಿರುವ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ಸಚಿವರುಗಳು ದೇಶದ ಭವಿಷ್ಯವನ್ನು ಬೆಳಗುವ ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ರವಾನಿಸುವುದರ ಬದಲಾಗಿ ತಮ್ಮ ರಾಜಕೀಯ ಸ್ವಾರ್ಥದ ನಡವಳಿಕೆಗಳಿಂದ ತಮ್ಮ ಸಂಕುಚಿತ ವ್ಯಕ್ತಿತ್ವವನ್ನು ಅನಾವರಣ ಮಾಡಿಕೊಳ್ಳುತ್ತಿದ್ದಾರೆ.

ಶಿಕ್ಷಣ ವ್ಯವಸ್ಥೆಯಲ್ಲಿಯೂ ರಾಜಕೀಯವನ್ನು ಬೆರೆಸಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಸಚಿವರ ನಡೆವಳಿಕೆ ಗಳನ್ನು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಖಂಡಿತ ಕ್ಷಮಿಸಲಾರರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಮಂತ್ರಿಗಳು, ಮುಖ್ಯಮಂತ್ರಿಗಳು ನಿಯಮ, ಕಾನೂನುಗಳನ್ನು ಗಾಳಿಗೆ ತೂರಿ ಭ್ರಷ್ಟ ವ್ಯವಸ್ಥೆಯಲ್ಲಿ ಮುಳುಗಿ ಮಲಿನಗೊಂಡರೆ ಅದಕ್ಕೆ ಅಂಕುಶ ಹಾಕುವ ಜವಾಬ್ದಾರಿ ರಾಜ್ಯಪಾಲರ ಮೇಲಿರುತ್ತದೆ.

ತಮ್ಮ ಸಾಂವಿಧಾನಿಕ ಅಧಿಕಾರವನ್ನು ಬಳಸಿ ಪಾರದರ್ಶಕ ತನಿಖೆಗೆ ಆದೇಶಿಸುವುದು ಅವರ ಕರ್ತವ್ಯವೂ ಆಗಿರುತ್ತದೆ. ಈ ನಿಟ್ಟಿನಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ್‌ ಗೆಹಲೋಟ್ ಅವರು ಈ ಸರ್ಕಾರದ ಭ್ರಷ್ಟ ಹಗರಣಗಳ ಕುರಿತು ತನಿಖೆಗೆ ಅನುಮತಿ ನೀಡಿರುವುದನ್ನು ಸಹಿಸಿಕೊಳ್ಳಲಾರದೆ ರಾಜ್ಯಪಾಲರ ವಿರುದ್ಧ ದ್ವೇಷ ಕಾರುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದವರ ವರ್ತನೆಯಾಗುತ್ತದೆ.

ಕಾಂಗ್ರೆಸಿಗರು ಎಂದೂ ಪ್ರಜಾಪ್ರಭುತ್ವವನ್ನು ಗೌರವಿಸಲಿಲ್ಲ, ನ್ಯಾಯಾಂಗ ವ್ಯವಸ್ಥೆಯ ತೀರ್ಪುಗಳನ್ನು ಒಪ್ಪಿಕೊಳ್ಳಲಿಲ್ಲ, ಸರ್ವಾಧಿಕಾರಿತನ ಹಾಗೂ ಸ್ವಜನ ಪಕ್ಷಪಾತ ನಮ್ಮ ಜನ್ಮ ಸಿದ್ಧ ಹಕ್ಕು ಎಂದು ವರ್ತಿಸುತ್ತಾರೆ,ಈ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ ಅವರ ಕರಾಳ ನಡೆ ಈಗಲೂ ಸಾಕ್ಷಿಯಾಗಿ ನಮ್ಮ ಮುಂದೆ ನಿಂತಿದೆ, ಅದರ ನೆರಳಿನಲ್ಲೇ ಮುನ್ನಡೆದಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಲೂಟಿಕೋರತನ, ಹಗರಣಗಳು ಎಗ್ಗಿಲ್ಲದೇ ಸಾಗಿವೆ. ಇದಕ್ಕೆ ಹದ್ದುಬಸ್ತಿನಲ್ಲಿಡಲು ಹೊರಟಿರುವ ರಾಜ್ಯಪಾಲರು ಕಾಂಗ್ರೆಸ್ಸಿಗರ ಪಾಲಿಗೆ ಸಿಂಹ ಸ್ವಪ್ನವಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಮುಜುಗರಕ್ಕೀಡುಮಾಡುವ ಪ್ರಯತ್ನಗಳು ನಡೆಯುತ್ತಲೇ ಇದೆ, ಇದನ್ನು ಸಹಿಸಿಕೊಂಡು ಕೂರುವಷ್ಟು ನಮ್ಮ ಸಂವಿಧಾನದ ವ್ಯವಸ್ಥೆ ಹಾಗೂ ನ್ಯಾಯಾಲಯ ದುರ್ಬಲವಾಗಿಲ್ಲ ಎಂಬ ಉತ್ತರ ಇಷ್ಟರಲ್ಲೇ ಮುಖ್ಯಮಂತ್ರಿಗಳೂ ಸೇರಿದಂತೆ ಭ್ರಷ್ಟ ಸಚಿವರಿಗೆ ತಿಳಿಯಲಿದೆ ಎಂದಿದ್ದಾರೆ.

Tags :
#ಕಾಂಗ್ರೆಸ್‌#ಬಿಜೆಪಿ#ಬೆಂಗಳೂರು#ರಾಜಕೀಯ#ರಾಜ್ಯ ಸರ್ಕಾರ#ರಾಜ್ಯಪಾಲರು#ವಿಜಯೇಂದ್ರ#ಸಿದ್ದರಾಮಯ್ಯ
Next Article