ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರಾಜ್ಯಪಾಲರ ನಡೆ ಸಂದೇಹಕ್ಕೆ ಆಸ್ಪದ ಬೇಡ

02:30 AM Sep 19, 2024 IST | Samyukta Karnataka

ಕರ್ನಾಟಕದ ರಾಜ್ಯಪಾಲರು ಇದುವರೆಗೆ ಯಾವುದೇ ವಿವಾದಕ್ಕೆ ಒಳಗಾಗಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೊಡಲು ರಾಜ್ಯಪಾಲರು ನಿರ್ಧರಿಸಿದ ಮೇಲೆ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ಈಗ ರಾಜ್ಯಪಾಲರು ಮೇ ೨೩ರಿಂದ ಲೋಕಾಯುಕ್ತ ಕೈಗೊಂಡ ಕ್ರಮಗಳಲ್ಲಿ ಇದುವರೆಗೆ ಯಾವ ಯಾವ ಭ್ರಷ್ಟ ಅಧಿಕಾರಿಗಳ ಮೇಲೆ ಏನು ಕ್ರಮಕೈಗೊಳ್ಳಲಾಗಿದೆ. ಈ ಪ್ರಕರಣಗಳ ಬಗ್ಗೆ ಸಚಿವ ಸಂಪುಟದ ತೀರ್ಮಾನ, ಲೋಕಾಯುಕ್ತ ಕೈಗೊಂಡ ಕ್ರಮ ಸೇರಿದಂತೆ ಎಲ್ಲ ವಿವರಗಳನ್ನು ಸಲ್ಲಿಸುವಂತೆ ಮುಖ್ಯಕಾರ್ಯದರ್ಶಿಗಳಿಗೆ ನೋಟಿಸ್ ನೀಡಿದ್ದಾರೆ. ಇದರಲ್ಲಿ ತಪ್ಪೇನಿಲ್ಲ. ರಾಜ್ಯಪಾಲರಿಗೆ ಕೇಳುವ ಅಧಿಕಾರವಿದೆ. ಆದರೆ ಇದೇ ಅಧಿಕಾರವನ್ನು ಹಿಂದಿನ ಸರ್ಕಾರದ ಕಾಲದಲ್ಲಿ ಆಗಿರುವ ಪ್ರಕರಣಗಳ ಬಗ್ಗೆಯೂ ಪರಿಶೀಲನೆ ನಡೆಸಬೇಕಿತ್ತು. ರಾಜ್ಯಪಾಲರ ನಡೆ ಸಂಶಯಕ್ಕೆ ಅವಕಾಶ ನೀಡಬಾರದು. ರಾಜಭವನಕ್ಕೆ ಎಲ್ಲ ಸರ್ಕಾರಗಳೂ ಒಂದೇ. ಸಂವಿಧಾನವನ್ನು ಕಾಪಾಡುವುದು ಮತ್ತು ಸರ್ಕಾರ ನಿಯಮಬದ್ಧವಾಗಿ ನಡೆಯುವಂತೆ ನೋಡಿಕೊಳ್ಳುವುದು ರಾಜ್ಯಪಾಲರ ಕರ್ತವ್ಯ. ಅದನ್ನು ನಿಷ್ಪಕ್ಷಪಾತವಾಗಿ ಕೈಗೊಳ್ಳಬೇಕು. ರಾಜ್ಯಪಾಲರ ನಡೆಯಲ್ಲಿ ರಾಜಕೀಯ ವಾಸನೆ ಕಂಡು ಬರಬಾರದು.
ಈಗ ರಾಜ್ಯಪಾಲರು ಕೇಳಿರುವ ಮಾಹಿತಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಕಾಲಕ್ಕೆ ಮಾತ್ರ ಅನ್ವಯವಾಗುತ್ತದೆ ಹಿಂದಿನ ಸರ್ಕಾರದ ಕ್ರಮಗಳ ಬಗ್ಗೆ ಪರಿಶೀಲನೆ ಏಕಿಲ್ಲ ಎಂಬ ಪ್ರಶ್ನೆ ಸಹಜವಾಗಿ ಮೂಡಿ ಬರುತ್ತದೆ. ರಾಜ್ಯಪಾಲರು ಕೆಲವು ಪ್ರಕರಣಗಳಲ್ಲಿ ಮಾತ್ರ ಕ್ರಮಕೈಗೊಳ್ಳಲು ಬಯಸುತ್ತಾರೆ. ಉಳಿದ ಪ್ರಕರಣಗಳನ್ನು ಕೈಬಿಡುತ್ತಾರೆ ಎಂಬುದೇ ಕಾಂಗ್ರೆಸ್ ಪಕ್ಷದ ಪ್ರಮುಖ ಆರೋಪ. ಇದಕ್ಕೆ ರಾಜ್ಯಪಾಲರ ನಡೆ ಇಂಬುಕೊಡುವಂತೆ ಇರಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ದಿನದಿಂದ ಈ ಸಂಶಯ ತಲೆ ಎತ್ತಿದೆ. ಇದಕ್ಕೆ ರಾಜ್ಯಪಾಲರು ಅವಕಾಶ ಕೊಡಬಾರದು. ಕಾನೂನು ಬದ್ಧವಾಗಿ ಕ್ರಮ ಕೈಗೊಳ್ಳಲು ಅವರಿಗೆ ಮುಕ್ತ ಅವಕಾಶಗಳಿವೆ. ಆದರೆ ಅದು ನಿಷ್ಪಕ್ಷಪಾತವಾಗಿರಬೇಕು. ಇದಕ್ಕೆ ಕಾರಣವೂ ಇದೆ. ಕೇರಳ, ತಮಿಳುನಾಡು, ಆಂಧ್ರ, ಪಶ್ಚಿಮ ಬಂಗಾಳ ರಾಜ್ಯಪಾಲರ ನಡೆ ವಿವಾದಕ್ಕೆ ಒಳಗಾಗಿವೆ. ಇದುವರೆಗೆ ಕರ್ನಾಟಕದ ರಾಜ್ಯಪಾಲರ ನಡೆ ಆ ರೀತಿ ಸಂಶಯಕ್ಕೆ ಕಾರಣವಾಗಿಲ್ಲ. ನಮ್ಮಲ್ಲಿ ಮೊದಲಿನಿಂದಲೂ ರಾಜಭವನ ಜನರ ಗೌರವ ಭಾವನೆ ಉಳಿಸಿಕೊಂಡು ಬಂದಿದೆ.
ಜನ ಬಯಸುವುದು ರಾಜಭವನ ರಾಜಕೀಯಕ್ಕೆ ಅವಕಾಶ ಮಾಡಿಕೊಡಬಾರದು. ಸಂವಿಧಾನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಚುನಾಯಿತ ಸರ್ಕಾರ ಇರುವಾಗ ರಾಜ್ಯಪಾಲರ ಕೆಲಸ ಕಡಿಮೆ ಎಂದರೂ ಸರ್ಕಾರ ಕಾನೂನು ಬದ್ಧವಾಗಿ ನಡೆಯುವಂತೆ ನೋಡಿಕೊಳ್ಳುವುದು ರಾಜ್ಯಪಾಲರ ಕರ್ತವ್ಯ. ಈಗ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯಪಾಲರ ನಡೆ ಬಗ್ಗೆ ಸಾರ್ವತ್ರಿಕ ಚರ್ಚೆ ನಡೆಯುತ್ತಿದೆ. ಇತರ ರಾಜ್ಯಗಳ ರಾಜ್ಯಪಾಲರ ನಡೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ನಮ್ಮಲ್ಲಿ ಅಂಥ ಪರಿಸ್ಥಿತಿ ಬಂದಿಲ್ಲ. ಅದಕ್ಕೆ ಆಸ್ಪದ ಕೊಡಬಾರದು ಎಂದರೆ ರಾಜಭವನ ಮತ್ತು ವಿಧಾನಸೌಧದ ನಡುವೆ ಅನುಮಾನದ ಹುತ್ತ ಬೆಳೆಯಬಾರದು. ಎರಡರ ಉದ್ದೇಶ ಜನಹಿತ ಕಾಪಾಡುವುದು. ಅದಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನು ಈಗಿನ ರಾಜ್ಯಪಾಲರಿಗೆ ಅನುಭವ, ಜ್ಞಾನ ಸಂಪತ್ತು ಎರಡೂ ಇರುವುದರಿಂದ ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆಂಬ ವಿಶ್ವಾಸ ಜನರಲ್ಲಿದೆ. ರಾಜ್ಯದ ಘನತೆ ಮತ್ತು ಗೌರವ ಉಳಿಸುವ ಜವಾಬ್ದಾರಿ ರಾಜಭವನ ಮತ್ತು ವಿಧಾನಸೌಧದ ಮೇಲೆ ಸಮಾನ ವಾಗಿದೆ. ಸಂಘರ್ಷ-ಅನುಮಾನ ಬೇಕಿಲ್ಲ. ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಇಂದಿನ ಅಗತ್ಯ.

Next Article