ರಾಜ್ಯಪಾಲರ ವಿರುದ್ಧ ಕೈ ಕಾರ್ಯಕರ್ತರ ಪ್ರತಿಭಟನೆ
ಯಾದಗಿರಿ: ಮುಡಾ ಹಗರಣ ಆರೋಪ ಪ್ರಕರಣದಲ್ಲಿ ತನಿಖೆಗೆ ರಾಜ್ಯಪಾಲರು ಪೂರ್ವಾನುಮತಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು, ಅಹಿಂದ ಸಂಘಟನೆಗಳು ಬೀದಿಗಿಳಿದಿದ್ದಾರೆ. ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕೈ ಸಚಿವರು, ಶಾಸಕರು ಬಿಜೆಪಿ ವಿರುದ್ಧ ಹರಿಹಾಯ್ದದಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದು ರಾಜಕೀಯ ದುರುದೇಶದ್ದ ಒಂದು ಭಾಗವಾಗಿದ್ದು, ಇದಕ್ಕೆ ಬಿಜೆಪಿಯವರು ಪಶ್ಚತ್ತಾಪ ಪಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ಬಿಜೆಪಿ ನಾಯಕರಿಗೆ ಛೀಮಾರಿ ಹಾಕಿ ಕಳುಹಿಸಿದ್ದಾರೆ. ತಮ್ಮ ಹಾಗು ಮಿತ್ರಪಕ್ಷ ಜೆಡಿಎಸ್ ನಾಯಕರ ಹಗರಣ ಮುಚ್ಚಿಹಾಕುವ ಸಲುವಾಗಿ ಯಾವುದೇ ಲೋಪವಾಗದ ಪ್ರಕರಣವನ್ನು ಮುನ್ನೆಲೆಗೆ ತಂದು ಸಿದ್ದರಾಮಯ್ಯ ಅವರ ಜನಪ್ರಿಯತೆ ಕುಗ್ಗಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ತಮ್ಮ ೪೦ ವರ್ಷದ ರಾಜಕಾರಣದಲ್ಲಿ ಸಿದ್ದರಾಮಯ್ಯ ಮೇಲೆ ಕಳಂಕರಹಿತ ಆಡಳಿತ ನಡೆಸಿದ್ದಾರೆ. ದೇವರಾಜ್ ಅರಸು ನಂತರ ಹಿಂದುಳಿದ ಸಮುದಾಯದ ಸಿದ್ದರಾಮಯ್ಯ ಸಿಎಂ ಆಗಿರುವುದು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ರಾಜ್ಯಪಾಲರ ಮೂಲಕ ಅಧಿಕಾರ ದುರಪಯೋಗ ಮಾಡಿಕೊಂಡು ಅವರ ಹೆಸರಿಗೆ ಮಸಿ ಬಳಿಯುವ ವಿಫಲ ಯತ್ನ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯವರ ನೀಚ ಬುದ್ಧಿಯನ್ನು ರಾಜ್ಯದ ಜನತೆ ಸಹಿಸಿ ಕೊಳ್ಳುವುದಿಲ್ಲ. ಎಚ್.ಡಿ ಕುಮಾರಸ್ವಾಮಿ, ಎಚ್.ಡಿ ರೇವಣ್ಣ ಕುಟುಂಬ ಮುಂತಾದವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿಗೆ ಹತ್ತು ತಿಂಗಳಿನಿಂದಲೂ ರಾಜ್ಯಪಾಲರ ಮುಂದೆ ಕೋರಿಕೆಗಳಿವೆ. ಅವುಗಳನ್ನು ಉದಾಸೀನ ಮಾಡಿರುವ ರಾಜ್ಯಪಾಲರು, ಯಾವ ಹುರುಳು ಇಲ್ಲದ ಮುಡಾದ ಬಗ್ಗೆ ವಿಪರೀತ ಆಸಕ್ತಿ ವಹಿಸಿರುವುದು ನೋಡಿದರೆ ರಾಜಕೀಯ ಪ್ರೇರಿತ ಎನ್ನುವುದು ಜಗ್ಗಜಾಹೀರವಾಗಿದೆ ಎಂದರು.
ಬಿಜೆಪಿ ಸರ್ಕಾರದ ಕೆಟ್ಟ ರಾಜಕಾರಣವನ್ನು ವಿರೋಧಿಸಿ ಜನರು ತಕ್ಕ ಪಾಠ ಕಲಿಸಿದ್ದು, ಇದನ್ನು ಸಹಿಸಿಕೊಳ್ಳದೇ ಸುಖಾಸುಮ್ಮನೆ ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತಿದ್ದು, ಅವರದ್ದೇ ಪಕ್ಷದ ಶಾಸಕ ಯತ್ನಾಳ ಅವರೇ ಹೇಳುವಂತೆ ಬಿ.ವೈ ವಿಜಯೇಂದ್ರ ಅವರ ಕೋವಿಡ್ ಹಗರಣ ಮಾರಿಷಸ್‌ನಲ್ಲಿ ಇಟ್ಟಿರುವ ಅಕ್ರಮ ಹಣದ ಕುರಿತು ಹೋರಾಟ ಮಾಡಲು ಮುಂದಾಗಿದ್ದರು ಎಂದು ಕಿಡಿ ಕಾರಿದರು.