ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರಾಜ್ಯಪಾಲರ ವಿವಾದಾತ್ಮಕ ಹೆಜ್ಜೆ

02:30 AM Aug 02, 2024 IST | Samyukta Karnataka

ಕರ್ನಾಟಕ ರಾಜ್ಯದ ಮಟ್ಟಿಗೆ ಸಾಂವಿಧಾನಿಕ ಮುಖ್ಯಸ್ಥರ ಸ್ಥಾನದಲ್ಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಾರ್ವಜನಿಕರ ದೂರೊಂದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿವರಣೆ ಕೇಳಿ ಪತ್ರ ಬರೆದಿರುವ ಕ್ರಮ ಈಗ ರಾಜಕೀಯ ಅಂಗಳದಲ್ಲಿ ಚರ್ಚೆಗೆ ಪ್ರಧಾನ ಗ್ರಾಸವಾಗಿದೆ. ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಮೂಲಕ ಸಿದ್ದರಾಮಯ್ಯನವರ ಕುಟುಂಬ ಒಂದಕ್ಕಿಂತ ಹೆಚ್ಚು ನಿವೇಶನಗಳನ್ನು ಪಡೆದಿರುವುದನ್ನು ದಾಖಲೆಗಳ ಸಮೇತ ರಾಜ್ಯಪಾಲರಿಗೆ ಮನವಿ ಅರ್ಪಿಸಿ ಸೂಕ್ತ ಕ್ರಮಕ್ಕೆ ಆಗ್ರಹಪಡಿಸಿರುವುದು ಈ ವಿವಾದದ ಉದ್ಭವಕ್ಕೆ ಮುಖ್ಯ ಕಾರಣ. ಕಾನೂನಿನ ಆಡಳಿತದ ಮೇಲ್ವಿಚಾರಣೆಯ ಕಣ್ಗಾವಲಿನಂತಿರುವ ರಾಜ್ಯಪಾಲರು ಸಾರ್ವಜನಿಕರ ದೂರನ್ನು ಸ್ವೀಕರಿಸುವುದರಲ್ಲಾಗಲೀ ಅಥವಾ ಅದರ ಬಗ್ಗೆ ಸರ್ಕಾರದ ವಿವರಣೆ ಕೋರುವುದಾಗಲೀ ತಪ್ಪಿಲ್ಲ. ಅದೊಂದು ರೀತಿಯ ಸಂಪ್ರದಾಯ. ಆದರೆ, ಇಂತಹ ದೂರುಗಳ ಸತ್ಯಾಸತ್ಯತೆ ಪರೀಕ್ಷಿಸದೆ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸದೆ ಏಕಪಕ್ಷೀಯವಾಗಿ ಮುಖ್ಯಮಂತ್ರಿಗಳ ವಿವರಣೆ ಕೋರಿರುವುದು ಸ್ವಾಭಾವಿಕ ನಡೆಯಂತೂ ಅಲ್ಲ ಎಂಬುದು ಬಲ್ಲವರ ಅಭಿಮತ. ರಾಜಭವನಕ್ಕೆ ಬರುವ ದೂರುಗಳಿಗೆಲ್ಲಾ ಸರ್ಕಾರದ ವಿವರಣೆಯನ್ನು ಕೋರುತ್ತಾ ಹೋಗುವುದೇ ಆದರೆ ಅದೊಂದು ಮುಗಿಯದ ರಾಮಾಯಣದ ಕಥೆ. ಹರಿಯುವ ನೀರಿಗೆಲ್ಲಾ ಕಾಲು ಚಾಚಬಾರದು ಎಂಬ ಮಾತಿನ ಅರ್ಥ ಅನುಭವ ಹಾಗೂ ಜ್ಞಾನದಿಂದ ಮಾಗಿರುವ ರಾಜಭವನದ ಅಧಿಕಾರಿಗಳಿಗೆ ತಿಳಿಯದ್ದೇನೂ ಅಲ್ಲ. ಹೀಗಿರುವಾಗ ಏಕಾಏಕಿ ದೂರು ಬಂದ ದಿನವೇ ವಿವರಣೆಯನ್ನು ಕೋರಿ ಪತ್ರ ಬರೆದಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ನಿಜ. ಕರ್ನಾಟಕದಲ್ಲಿ ಈ ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರಧ್ವಾಜ ಅವರು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಖಾಸಗಿ ದೂರೊಂದಕ್ಕೆ ಇದೇ ರೀತಿಯಲ್ಲಿ ವಿವರಣೆ ಕೋರಿದ್ದರು. ಆದರೆ, ಆ ಪ್ರಕರಣಕ್ಕೂ ಈಗಿನ ಪ್ರಕರಣಕ್ಕೂ ಇರುವ ವ್ಯತ್ಯಾಸ ಅಜಗಜಾಂತರ. ಗಣಿಗಾರಿಕೆಯ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರಿನ ಬಗ್ಗೆ ಕ್ರಮ ಜರುಗಿಸಲು ಕೋರಿ ಸಲ್ಲಿಕೆಯಾಗಿದ್ದ ಮನವಿ ಪತ್ರ ಆಧರಿಸಿ ಆಗಿನ ರಾಜ್ಯಪಾಲರು ವಿವರಣೆ ಕೇಳಿದ್ದರು. ಇದೊಂದು ರೀತಿಯ ಸಂಪ್ರದಾಯ ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟ. ಏಕೆಂದರೆ, ಮುಡಾ ಪ್ರಕರಣದ ಬಗ್ಗೆ ವಿಧಾನ ಮಂಡಲದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಮುಕ್ತವಾಗಿ ಚರ್ಚೆಯಾಗಿ ವಿವಿಧ ಮಗ್ಗಲುಗಳು ಹೊರಗೆ ಬಂದು ಸತ್ಯಮಿಥ್ಯಗಳು ಬಯಲಾಗಿರುವ ಸಂದರ್ಭದಲ್ಲಿ ರಾಜ್ಯಪಾಲರ ವಿವರಣೆ ಕೇಳಿರುವ ಕ್ರಮದ ಹಿಂದೆ ರಾಜಕಾರಣದ ಕಮಟು ವಾಸನೆಯನ್ನು ಕೆಲವರು ಗುರುತಿಸಿದ್ದಾರೆ. ಹಾಗೆ ನೋಡಿದರೆ, ರಾಜ್ಯಪಾಲ ಗೆಹ್ಲೋಟ್ ಅವರು ಕೇಂದ್ರದಲ್ಲಿ ಮಂತ್ರಿಯಾಗಿ, ಬಿಜೆಪಿಯ ಸಂಸದರಾಗಿ ಸಾರ್ವಜನಿಕ ಮುಖಂಡರಾಗಿ ಜನಾನುರಾಗಕ್ಕೆ ಪಾತ್ರರಾಗಿರುವವರು. ಸರಳತೆ ಹಾಗೂ ಸಭ್ಯತೆಯನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿ ಎಂದೇ ಹೆಸರಾಗಿ ಎಲ್ಲ ಪಕ್ಷಗಳಲ್ಲೂ ವಿಶ್ವಾಸ ಪಡೆದಿರುವ ಅಪರೂಪದ ಗುಣದವರು. ಇಂತಹವರ ಕಾಲದಲ್ಲಿ ರಾಜಭವನದಿಂದ ಸರ್ಕಾರಕ್ಕೆ ಪತ್ರ ರವಾನೆಯಾಗಿರುವುದು ಕೆಲವರಿಗಂತೂ ಅಚ್ಚರಿಯ ಮೊಟ್ಟೆ.
ಸರ್ಕಾರದಿಂದ ವಿವರಣೆ ಪಡೆದ ನಂತರ ಏನಾಗಬಹುದು ಎಂಬ ಬಗ್ಗೆ ನಾನಾ ರೀತಿಯ ವ್ಯಾಖ್ಯಾನಗಳು ಈಗ ಚಾಲ್ತಿಯಲ್ಲಿವೆ. ಕಾನೂನು ತಜ್ಞರು ಪರಿಭಾವಿಸುವಂತೆ ರಾಜ್ಯಪಾಲರು ಸರ್ಕಾರದ ವಿವರಣೆಯನ್ನು ಪರಿಶೀಲಿಸಿ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಬೇಕೆ ಅಥವಾ ಬೇಡವೆ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ಯಾವುದೇ ಕಾರಣಕ್ಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದು ಎಂಬ ಸಂದೇಶವನ್ನು ರಾಜ್ಯದ ಸಂಪುಟ ಸಭೆ ನಿರ್ಣಯದ ಮೂಲಕ ಸ್ಪಷ್ಟಪಡಿಸಿದೆ. ಸಂಪುಟ ಸಭೆಯ ನಿರ್ಣಯವನ್ನು ರಾಜ್ಯಪಾಲರು ಒಪ್ಪಲೂಬಹುದು ಅಥವಾ ನಿರಾಕರಿಸಲೂಬಹುದು. ಹೀಗಾಗಿ ಬಹುಶಃ ಈಗಿನ ಬೆಳವಣಿಗೆಯನ್ನು ಸ್ಥೂಲವಾಗಿ ಗಮನಿಸಿದರೆ ನ್ಯಾಯಾಲಯದಲ್ಲಿ ಕಾನೂನಿನ ಹೋರಾಟ ಜರುಗುವುದಂತೂ ಖಂಡಿತ.
ಸುಮಾರು ೪೦ ವರ್ಷಗಳ ಹಿಂದೆ ಆಗಿನ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳು ಆಂಧ್ರಪ್ರದೇಶದ ವಿಜಯವಾಡದಲ್ಲಿ ಶೃಂಗಸಭೆ ಸೇರಿ `ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸುವ ರಾಜ್ಯಪಾಲರ ನೇಮಕಾತಿ ಪಾರದರ್ಶಕತೆಯಿಂದ ನಡೆಯಬೇಕು' ಎಂಬ ನಿರ್ಣಯವನ್ನು ಅಂಗೀಕರಿಸಿದ್ದರ ಮಹತ್ವ ಏನೆಂಬುದು ಈಗ ಮತ್ತೊಮ್ಮೆ ದೇಶಕ್ಕೆ ಮನವರಿಕೆಯಾಗುತ್ತಿದೆ. ಆಗಿನ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳ ಜಾಗದಲ್ಲಿ ಈಗ ಬಿಜೆಪಿಯೇತರ ಮುಖ್ಯಮಂತ್ರಿಗಳು ಇದೇ ರೀತಿಯ ಪ್ರಸ್ತಾಪವನ್ನು ಮಂಡಿಸುವ ಅನಿವಾರ್ಯತೆಯಲ್ಲಿದ್ದಾರೆ. ರಾಜ್ಯಪಾಲರ ಸ್ಥಾನ ಕಾನೂನು ಆಡಳಿತದ ಮೇಲ್ವಿಚಾರಣೆಯ ಕಣ್ಗಾವಲು ಸ್ಥಾನ ಎಂದು ಒಪ್ಪಿದಾಕ್ಷಣ ರಣಹದ್ದಿನಂತೆ ಸರ್ಕಾರದ ಮೇಲೆ ಕಣ್ಣಿಡುವ ಪರಮಾಧಿಕಾರವನ್ನು ಕೊಟ್ಟಂತಾಗುವುದಿಲ್ಲ. ಕಣ್ಗಾವಲು ಎಂಬುದು ಭಾರತೀಯರ ಬಲವಾದ ನಂಬಿಕೆಯಾದ ಪರಶಿವನ ಮೂರನೆಯ ಕಣ್ಣು. ಅರ್ಥಾತ್ ಮುಕ್ಕಣ್ಣು. ಇದೇ ಸತ್ಯ, ಸತ್ವ ಹಾಗೂ ಸೌಂದರ್ಯದ ಪ್ರತೀಕ ಎಂಬುದನ್ನು ಕಾನೂನಾತ್ಮಕವಾಗಿ ಅರ್ಥ ಮಾಡಿಕೊಳ್ಳುವುದು ಈಗ ಹೆಚ್ಚು ಮುಖ್ಯ.

Next Article