ರಾಜ್ಯಪಾಲರ ಸಕ್ರಿಯ-ನಿಷ್ಕ್ರಿಯ
ಸಾರ್ವಜನಿಕರಿಗಿರುವ ಸಾಮಾನ್ಯ ತಿಳಿವಳಿಕೆಯಂತೆ ರಾಜ್ಯಪಾಲರ ಪಾತ್ರದ ಜವಾಬ್ದಾರಿ ಮತ್ತು ಕರ್ತವ್ಯ ಏನೆಂಬುದು ಅರ್ಥವೇ ಆಗಿಲ್ಲ. ಏಕೆಂದರೆ ರಾಜ್ಯಪಾಲರು ಸರ್ವೇಸಾಮಾನ್ಯವಾಗಿ ಜನಗಳ ಜೊತೆ ಬೆರೆಯುವುದಿಲ್ಲ. ಹಾಗೊಮ್ಮೆ ಬೆರೆತರೂ, ಮೌನವೇ ಅವರಿಗೆ ಆಭರಣ, ಅಷ್ಟೇ ಅಲ್ಲದೇ ಮಾತನಾಡಿದರೂ ಕೂಡಾ ಅದರಲ್ಲಿ ಮೌನದ ಮಹತ್ವವನ್ನು ಕಾಪಾಡಿಕೊಳ್ಳುವ ಗುಣ ಅವರಿಗೆ ಕರತಲಾಮಲಕ. ಬಹಳ ಮಂದಿಯ ದೃಷ್ಟಿಯಲ್ಲಿ ರಾಜ್ಯಪಾಲರು ಎಂದರೆ ಹಿಂದಿನ ರಾಜಮಹಾರಾಜರ ಕಾಲದ ರೀತಿಯಲ್ಲಿ ಅರಮನೆಯಲ್ಲಿ ವಿರಾಜಿಸುತ್ತಿದ್ದ ದೊರೆಗಳ ತದ್ರೂಪು. ಸಂವಿಧಾನದ ದೃಷ್ಟಿಯಲ್ಲಿ ರಾಜ್ಯಪಾಲರದು ಸಂವಿಧಾನದ ರಕ್ಷಕರ ಪಾತ್ರ. ರಾಜ್ಯ ಸರ್ಕಾರಗಳಿಗೆ ಒಂದು ರೀತಿಯ ಮಾರ್ಗದರ್ಶಿ. ಸ್ವಯಂಪ್ರೇರಣೆಯಿಂದ ನಿರ್ಧಾರಗಳನ್ನು ಕೈಗೊಂಡು ಆಡಳಿತ ಜರುಗಿಸಲು ಅವಕಾಶವಿಲ್ಲದಿದ್ದರೂ, ಸರ್ಕಾರಗಳಿಗೆ ಮಾರ್ಗದರ್ಶನ ಮಾಡಬಹುದು. ಸರ್ಕಾರದ ಪ್ರತಿಯೊಂದು ಆದೇಶ ಹಾಗೂ ಮಹತ್ವದ ನೀತಿ ನಿಯಮಗಳು ರಾಜ್ಯಪಾಲರ ಹೆಸರಿನಲ್ಲಿಯೇ ಹೊರಬೀಳುವುದು ಗಮನಿಸಬೇಕಾದ ಸಂಗತಿ. ಸರ್ವಾಂತರ್ಯಾಮಿಯಂತೆ ಕಂಡರೂ, ಆಡಳಿತದಲ್ಲಿ ಸರ್ವಶಕ್ತರಂತೆ ಕಾರ್ಯನಿರ್ವಹಿಸಲು ಕಾನೂನಿನಲ್ಲಿ ಅವಕಾಶವಿಲ್ಲದವರು. ಚುನಾಯಿತ ಸರ್ಕಾರಗಳ ಪ್ರಮಾಣವಚನ ಹಾಗೂ ಉಚ್ಚಾಟಿಸುವ ಪರಮಾಧಿಕಾರ ಕೂಡಾ ಇವರದು. ಒಂದರ್ಥದಲ್ಲಿ ಸೃಷ್ಟಿಕರ್ತರೂ ಹೌದು, ಲಯಕರ್ತರೂ ಹೌದು. ಕಾನೂನಿನಲ್ಲಿರುವ ಒಳಕಿಂಡಿಗಳು ಅವಕಾಶ ಸೃಷ್ಟಿಸಿರುವುದರಿಂದಲೋ ಏನೋ ಹಲವಾರು ಸಂದರ್ಭಗಳಲ್ಲಿ ರಾಜ್ಯಪಾಲರಾದವರು ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಕಾರ್ಯನಿರ್ವಹಿಸಿರುವ ನಿದರ್ಶನಗಳು ಅನೇಕ. ಬೆಂಗಳೂರಿನಲ್ಲಿ ಕಳೆದ ಶನಿವಾರ ನಡೆದ ವಿಚಾರಗೋಷ್ಠಿಯೊಂದರಲ್ಲಿ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ನಾಗರತ್ನ ಅವರು ವಿಶ್ಲೇಷಿಸಿರುವಂತೆ ರಾಜ್ಯಪಾಲರು ಕೆಲವೊಮ್ಮೆ ಅನಗತ್ಯವಾಗಿ ಸಕ್ರಿಯವಾಗುವುದು ಹಾಗೂ ಇನ್ನೂ ಕೆಲವರು ಅಗತ್ಯವಿದ್ದಲ್ಲಿ ನಿಷ್ಕ್ರಿಯವಾಗುವ ಸಂಗತಿಗಳು ವಿಚಿತ್ರ ಆದರೂ ನಿಜ' ಎಂದು ವಿಶ್ಲೇಷಿಸಿರುವ ಹಿಂದಿರುವುದು ಭಾರತದಲ್ಲಿ ರಾಜ್ಯಪಾಲರ ಕರ್ತವ್ಯದ ನಾನಾ ರೀತಿಯ ದೃಷ್ಟಾಂತಗಳ ಮುಖ.
ರಾಜ್ಯಾಂಗದಲ್ಲಿ ರಾಜ್ಯಪಾಲರ ಪಾತ್ರ ಸ್ಪಷ್ಟವಾಗಿ ನಮೂದಾಗಿರುವಾಗ ಗೊಂದಲವಿಲ್ಲದೆ ವರ್ತಿಸಲು ಮುಕ್ತ ಅವಕಾಶವಿದೆ. ಹೀಗಿದ್ದರೂ, ವಿವಾದಗಳು ಪುಟಿದೇಳುತ್ತಿರುವುದು ಮಾತ್ರ ಅರ್ಥವಾಗದ ಸಂಗತಿ. ರಾಜ್ಯಪಾಲರ ನಡತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿಗಳನ್ನು ಸಲ್ಲಿಸುವುದಂತೂ ಇನ್ನೂ ಅರ್ಥವಾಗದಂತ ವಿಚಾರ' ಎಂದು ವ್ಯಾಖ್ಯಾನ ಮಾಡಿರುವುದು ವರ್ತಮಾನದ ಬೆಳವಣಿಗೆಗಳ ದಿಕ್ಸೂಚಿ.
ದೇಶದ ಹಲವು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರ ನಡುವೆ ದಿನನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ಸಂಘರ್ಷ ನಡೆಯುತ್ತಿರುವುದು ಸಂವಿಧಾನದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಈ ಬೆಳವಣಿಗೆಯನ್ನು ರಾಜಕೀಯ ಕಣ್ಣಿನಿಂದ ನೋಡುವವರೇ ಹೆಚ್ಚು. ಇಂತಹ ಸಂಘರ್ಷಗಳು ನಡೆಯುತ್ತಿರುವುದು ಬಿಜೆಪಿಯೇತರ ಮುಖ್ಯಮಂತ್ರಿಗಳು ಅಧಿಕಾರದಲ್ಲಿರುವ ರಾಜ್ಯದಲ್ಲಿ ಎಂಬುದು ಗಮನಿಸಬೇಕಾದ ವಿಚಾರ. ಕೇರಳ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರ ನಡುವಣ ಸಂಘರ್ಷ ಸುಪ್ರೀಂಕೋರ್ಟ್ ಬಾಗಿಲನ್ನು ತಟ್ಟಿತು. ತಮಿಳುನಾಡಿನ ಸ್ಥಿತಿ ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ತೆಲಂಗಾಣದಲ್ಲಿ ಈ ಹಿಂದೆ ಇದೇ ರೀತಿಯ ಪರಿಸ್ಥಿತಿ ಇತ್ತು. ಪಶ್ಚಿಮ ಬಂಗಾಳದಲ್ಲಿಯೂ ಕೂಡಾ ದಿನನಿತ್ಯ ಕದನ ಕುತೂಹಲದ ವಾತಾವರಣ. ಪಂಜಾಬ್ ರಾಜ್ಯದಲ್ಲೂ ಕೂಡಾ ಇದೇ ಸ್ಥಿತಿ. ಮಹಾರಾಷ್ಟ್ರದಲ್ಲಿ ಇದೇ ಪರಿಸ್ಥಿತಿ ಈ ಹಿಂದೆ ಇತ್ತು. ಈ ಎಲ್ಲಾ ರಾಜ್ಯಗಳು ಕೂಡಾ ಬಿಜೆಪಿಯೇತರ ಮುಖ್ಯಮಂತ್ರಿಗಳನ್ನು ಹೊಂದಿವೆ ಎಂಬುದು ಎಚ್ಚರಿಕೆಯಿಂದ ಪರಿಶೀಲಿಸಬೇಕಾದ ಸಂಗತಿ. ರಾಜ್ಯಪಾಲರಾದವರಿಗೆ ನಿಷ್ಪಕ್ಷಪಾತ ಹಾಗೂ ನಿರ್ವಿಕಾರ ಮನೋಧರ್ಮ ಅತ್ಯಗತ್ಯ. ಆದರೆ ಹಲವಾರು ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರ ವಕಾಲತ್ತು ಹಾಕುವಂತೆ ವರ್ತಿಸುವ ವಿಧಾನ ಸಾರ್ವಜನಿಕರಲ್ಲಿ ಅನುಮಾನ ಸೃಷ್ಟಿಸಲು ಅವಕಾಶವಾಗುತ್ತಿದೆ.
ಇಂತಹ ಬೆಳವಣಿಗೆ ಹೊಸದೇನೂ ಅಲ್ಲ, ಈ ಹಿಂದೆ ತಮಿಳುನಾಡಿನಲ್ಲಿ ಡಾ. ರ‍್ರೀ ಚೆನ್ನಾರೆಡ್ಡಿ ಮತ್ತು ಜಯಲಲಿತಾ ಅವರ ಸರ್ಕಾರದ ನಡುವಣ ಜಗಳ ನಿತ್ಯೋತ್ಸವದಂತೆ ನಡೆಯುತ್ತಿತ್ತು. ಆಂಧ್ರಪ್ರದೇಶದಲ್ಲಿ ರಾಮಲಾಲ್ ರಾಜ್ಯಪಾಲರಾಗಿದ್ದಾಗ ಬಹುಮತವನ್ನು ಪರೀಕ್ಷಿಸುವ ಗೋಜಿಗೆ ಹೋಗದೇ ಅಮೆರಿಕ ಪ್ರವಾಸದಲ್ಲಿದ್ದ ಎನ್.ಟಿ.ರಾಮರಾವ್ ಸರ್ಕಾರವನ್ನು ಪದಚ್ಯುತಗೊಳಿಸಿ ನಾದೆಂಡ್ಲ ಭಾಸ್ಕರರಾವ್ ಸರ್ಕಾರವನ್ನು ಪ್ರತಿಷ್ಠಾಪಿಸಿದ ಘಟನಾವಳಿಗಳನ್ನು ಮರೆಯುವಂತಿಲ್ಲ. ಉತ್ತರಪ್ರದೇಶದಲ್ಲಿ ರುಮೇಶ್ ಭಂಡಾರಿ ಅವರು ಸರ್ಕಾರಕ್ಕೆ ನಿರ್ದೇಶನ ಕೊಡುವ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದರು. ಕರ್ನಾಟಕದಲ್ಲಿ ರಾಜ್ಯಪಾಲ ವೆಂಕಟಸುಬ್ಬಯ್ಯ ಅವರು ಬಹುಮತ ಪರೀಕ್ಷಿಸುವ ಗೋಜಿಗೆ ಹೋಗದೇ ಎಸ್.ಆರ್. ಬೊಮ್ಮಾಯಿ ಸರ್ಕಾರವನ್ನು ಉಚ್ಚಾಟಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಸಾರಾಂಶವೆಂದರೆ, ರಾಜ್ಯಪಾಲರು ಪಕ್ಷಪಾತದಿಂದ ನಡೆದುಕೊಂಡಿದ್ದಾರೆ ಎಂಬುದು.
ರಾಜ್ಯಪಾಲರ ಈ ವರ್ತನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಖಚಿತವಾದ ನಿಯಮಾವಳಿಗಳನ್ನು ರೂಪಿಸಿ ರಾಜ್ಯಪಾಲರ ಪಾತ್ರ ಏನೆಂಬುದನ್ನು ಸ್ಪಷ್ಟಪಡಿಸುವುದು ಸೂಕ್ತವಾದ ಸಕಾಲಿಕ ಮಾರ್ಗವಾಗುತ್ತದೆ. ರಾಜಕಾರಣಿಗಳನ್ನು ರಾಜ್ಯಪಾಲರ ಸ್ಥಾನಕ್ಕೆ ನಿಯೋಜಿಸುವುದು ಎಲ್ಲ ರೀತಿಯ ವಿವಾದಗಳಿಗೆ ಪ್ರೇರಣೆ. ಆದರೆ ರಾಜಕೀಯೇತರರು ರಾಜ್ಯಪಾಲರಾದರೆ ಎಲ್ಲಾ ಸರಿಹೋಗುತ್ತದೆ ಎಂದೇನೋ ಭಾವಿಸಬೇಕಾಗಿಲ್ಲ. ಏಕೆಂದರೆ ಎಲ್ಲರೂ ಮನುಷ್ಯ ಮಾತ್ರದವರು, ಹೀಗಾಗಿ ಖಚಿತ ಸೂತ್ರದ ಆಧಾರದ ಮೇರೆಗೆ ಪಾತ್ರಗಳ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಪಾರದರ್ಶಕ ರೀತಿಯಲ್ಲಿ ಜಾರಿಗೊಳಿಸಿದರೆ ಮಾತ್ರ ರಾಜ್ಯಪಾಲರ ಸ್ಥಾನಗಳಿಗೆ ಸಂವಿಧಾನಿಕ ಪಾವಿತ್ರ್ಯತೆ ಬರಲು ಸಾಧ್ಯ.