ರಾಜ್ಯಾದ್ಯಂತ ಇಂದು ಶಾಲೆಗಳು ಆರಂಭ
ಬೆಂಗಳೂರು: ಎರಡು ತಿಂಗಳ ರಜೆಯ ಮೋದು ಅನುಭವಿಸಿ ಬುಧವಾರ (ಮೇ ೨೯)ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಕರು ಸಜ್ಜಾಗಿದ್ದಾರೆ. ಶಾಲೆಗಳನ್ನು ಸ್ವಚ್ಛಗೊಳಿಸಿ ಸಣ್ಣಪುಟ್ಟ ದುರಸ್ತಿ ಕೈಗೊಂಡಿದ್ದು ತಳಿರು-ತೋರಣಗಳಿಂದ ಶೃಂಗರಿಸಿದ್ದಾರೆ.
ವಾರದಿಂದಲೇ ಸಿದ್ಧತೆ ಆರಂಭಿಸಿರುವ ಶಿಕ್ಷಕರು, ಶಾಲೆಗಳ ಆವರಣದಲ್ಲಿ ರಂಗೋಲಿ ಬಿಡಿಸಿ ವಿವಿಧ ವರ್ಣದ ರಂಗೋಲಿಗಳಿಂದ ಶೃಂಗರಿಸಿದ್ದಾರೆ. ವಿದ್ಯಾರ್ಥಿಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ೪೪,೬೧೫ ಸರ್ಕಾರಿ ಪ್ರಾಥಮಿಕ ಶಾಲೆಗಳು ಮತ್ತು ೪,೪೫೨ ಪ್ರೌಢಶಾಲೆಗಳು, ಖಾಸಗಿ ಹಾಗೂ ಅನುದಾನಿತ ಶಾಲೆಗಳು ಬುಧವಾರದಿಂದ ಉತ್ಸಾಹಿ ವಿದ್ಯಾರ್ಥಿಗಳಿಂದ ತುಂಬಿ ತುಳುಕಾಡಲಿವೆ.
ಮೊದಲ ದಿನವೇ ಸಮವಸ್ತ್ರ, ಪಠ್ಯಪುಸ್ತಕ:
ಶಿಕ್ಷಣ ಇಲಾಖೆ ಈಗಾಗಲೇ ರಾಜ್ಯದ ಎಲ್ಲ ಶಾಲೆಗಳಿಗೂ ಸಮವಸ್ತç ಹಾಗೂ ಪಠ್ಯಪುಸ್ತಕಗಳನ್ನು ಪೂರೈಸಿದೆ. ಹೀಗಾಗಿ ಮೊದಲ ದಿನ ಶಾಲೆಗೆ ತೆರಳಿದ ವಿದ್ಯಾರ್ಥಿಗಳಿಗೆ ೨ ಜೊತೆ ಸಮವಸ್ತç ಹಾಗೂ ಪುಸ್ತಕಗಳು ಸಿಗಲಿವೆ. ಪಠ್ಯಪುಸ್ತಕಗಳಲ್ಲಿ ಈ ಬಾರಿ ಬದಲಾವಣೆ ಇಲ್ಲದ ಹಿನ್ನೆಲೆಯಲ್ಲಿ ಈಗಾಗಲೇ ಪುಸ್ತಕಗಳನ್ನು ಪೂರೈಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶೈಕ್ಷಣಿಕ ಬಲವರ್ಧನೆ: ಇದೇ ವೇಳೆ, ಶಿಕ್ಷಣ ಇಲಾಖೆ ೨೦೨೪-೨೫ನೇ ಶೈಕ್ಷಣಿಕ ವರ್ಷವನ್ನು ಶೈಕ್ಷಣಿಕ ಬಲವರ್ಧನೆ ಘೋಷವಾಕ್ಯದಡಿ ಆರಂಭಿಸಲು ಮುಂದಾಗಿದೆ. ಕಲಿಕಾ ಗುಣಮಟ್ಟ ಹಾಗೂ ತಂತ್ರಜ್ಞಾನ ಆಧಾರಿತ ಬೋಧನೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಇಲಾಖೆ ಆಯುಕ್ತರು ಎಲ್ಲರಿಗೂ ಸುತ್ತೋಲೆ ಹೊರಡಿಸಿದ್ದಾರೆ.
ಮಧ್ಯಾಹ್ನ ಸಿಹಿಯೂಟ
ಮೊದಲ ದಿನ ಶಾಲೆಗೆ ವಿದ್ಯಾರ್ಥಿಗಳು ತೆರಳಿದ ಕ್ಷಣವನ್ನು ಮತ್ತಷ್ಟು ನೆನಪಿನಲ್ಲಿ ಉಳಿಯುವಂತೆ ಮಾಡಲು ಮಧ್ಯಾಹ್ನದ ಸಿರಿಧಾನ್ಯಗಳಲ್ಲಿ ಬಿಸಿಯೂಟ ತಯಾರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಸರಿಬಾತ್ ಹಾಗೂ ಹೆಸರುಬೇಳೆ ಪಾಯಸವನ್ನು ವಿದ್ಯಾರ್ಥಿಗಳಿಗೆ ನೀಡಲು ಶಿಕ್ಷಕರು ಮುಂದಾಗಿದ್ದಾರೆ.
ಶೂ ವಿತರಣೆಗೆ ಹಣ ಬಿಡುಗಡೆ
ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡಲು ಸರ್ಕಾರ ಶಾಲಾಭಿವೃದ್ಧಿ ಸಮಿತಿಗೆ ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಸಮಿತಿ ಶೂ ಖರೀದಿಸಿ ಮಕ್ಕಳಿಗೆ ಶೀಘ್ರದಲ್ಲೇ ಶೂಗಳನ್ನು ವಿತರಣೆ ಮಾಡಲಿದೆ.