ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ
ಬೆಂಗಳೂರು: ನವೆಂಬರ್ 25 ರಿಂದ ಡಿಸೆಂಬರ್ 25ರವರೆಗೆ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ ನಡೆಸಲು ನಿರ್ದರಿಸಲಾಗಿದೆ ಎಂದು ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ವಕ್ಫ್ನಿಂದ ಸಮಸ್ಯೆಗೆ ಸಿಲುಕಿದವರು 9035675734 ವಾಟ್ಸಪ್ ನಂಬರಿಗೆ ದೂರು ನೀಡಬಹುದು. ನಮ್ಮ ಯಾವುದೇ ನಾಯಕರನ್ನೂ ಭೇಟಿ ಮಾಡಿ ಮಾಹಿತಿ ಪಡೆಯಲು ಅವಕಾಶವಿದೆ. ನವೆಂಬರ್ 25 ರಿಂದ ಜಾಥಾ ಪ್ರಾರಂಭವಾಗಲಿದೆ. ನವೆಂಬರ್ 25 ರಿಂದ ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ನಾಯಕರ ಜೊತೆಗೆ ಜನಜಾಗೃತಿ ಅಭಿಯಾನ ಬೀದರ್ ನಿಂದ ಆರಂಭವಾಗಲಿದೆ. 26 ರಂದು ಕಲಬುರಗಿ, 27, ಯಾದಗಿರಿ, ರಾಯಚೂರು ಹಾಗೂ 30 ಶನಿವಾರ ವಿಜಯಪುರ ಹಾಗೂ ಬಾಗಲಕೋಟೆ, ಭಾನುವಾರ ಡಿಸೆಂಬರ್ 1 ಬೆಳಗಾವಿ ಜಿಲ್ಲೆ ಯಲ್ಲಿ ಜನ ಜಾಗೃತಿ ನಡೆಯಲಿದೆ. ವಕ್ಪ್ ಸಮಸ್ಯೆ ಎದುರಾಗಿರುವವರಿಗೆ ಮಾಹಿತಿ ನೀಡಲು ವಾರ್ ರೂಂ ಸ್ಥಾಪನೆ ಮಾಡುತ್ತಿದ್ದೇವೆ. ವಕ್ಫ್ ನ್ಯಾಯಾಧಿಕರಣ ರದ್ದಾಗಬೇಕು. 6.70 ಲಕ್ಷ ಎಕರೆ ವಕ್ಫ್ ಆಸ್ತಿ ಎಂದು ಸ್ವಾಧೀನಕ್ಕೆ ಯತ್ನಿಸಲಾಗುತ್ತಿದೆ. ಕರ್ನಾಟಕದಲ್ಲಿ ಜನ ಜಾಗೃತಿ ಮಾಡುವ ಅವಶ್ಯಕತೆ ಇದೆ. ಜನಜಾಗೃತಿ ಅಭಿಯಾನ ಮಾಡಿ ಜೆಪಿಸಿಗೆ ವರದಿ ಸಲ್ಲಿಕೆ ಮಾಡುತ್ತೇವೆ. ಎಷ್ಟೋ ಮಾಹಿತಿಗಳು ಇನ್ನೂ ಕೇಂದ್ರ ಸರ್ಕಾರ, ಜೆಪಿಸಿಗೆ ಸಿಕ್ಕಿಲ್ಲ. ಜಮೀರ್ ಅಹ್ಮದ್ ಧಮ್ಕಿ ಹಾಕಿದ್ದಕ್ಕೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ವಕ್ಪ್ ಬಹಳ ದೊಡ್ಡ ಹಗರಣವಾಗಿದೆ. ಈ ಹಿನ್ನೆಲೆಯಲ್ಲಿ ವಕ್ಫ್ ಟ್ರಿಬ್ಯೂನಲ್ ರದ್ದು ಮಾಡಬೇಕು. ಟ್ರಿಬ್ಯೂನಲ್ ನಲ್ಲಿ ಇರುವವರು ಎಲ್ಲರೂ ಒಂದೇ ಕೋಮಿನವರು. 2700 ಎಕರೆ ಕಂದಾಯ ಜಮೀನು ಕಬರ್ ಸ್ಥಾನಕ್ಕೆ ಕೊಡಲು ಸರ್ಕಾರ ನಿರ್ಣಯ ಮಾಡಿದೆ. ದೇಶದಲ್ಲಿ 38 ಲಕ್ಷ ಎಕರೆ ಜಮೀನಿದೆ ಎಂದು ಹೇಳುತ್ತಾರೆ. ಈ ನಿಟ್ಟಿನಲ್ಲಿ ಜನಜಾಗೃತಿ ಮಾಡುವ ಅಗತ್ಯ ಇದೆ ಎಂದರು. ಮುಸ್ಲಿಂ ರೈತರು ಕೂಡ ನಮ್ಮ ಅಭಿಯಾನದ ಪರವಾಗಿಯೇ ಇದ್ದಾರೆ. ನೋಟೀಸ್ ಕೊಟ್ಟಿದ್ದು ಅಷ್ಟೇ ಅಲ್ಲ, ನೋಟೀಸ್ ಕೊಡದೇ ವಕ್ಫ್ ಎಂದು ಪಹಣಿಯಲ್ಲಿ ನಮೂದು ಮಾಡಿದ್ದಾರೆ. ಬಿಜೆಪಿ ಪಕ್ಷದ ಅಡಿಯಲ್ಲಿ ಹೋರಾಟ ಮಾಡುತ್ತೇವೆ. ನೇರವಾಗಿ ಕೇಂದ್ರ ಸಚಿವರು ಹೋರಾಟಕ್ಕೆ ಬಂದಿದ್ದರು. ಕೇಂದ್ರ ಸರ್ಕಾರ ಬೆಂಬಲಕ್ಕೆ ಇದೆ. ಕೇಂದ್ರ ಬಿಜೆಪಿ ನಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲವಾಗಿ ನಿಂತಿದೆ. ರಾಜ್ಯ ಬಿಜೆಪಿ ಅದರ ಒಂದು ಭಾಗ ಎಂದು ಹೇಳಿದರು.
ದಾನ ಕೊಟ್ಟಿರುವ ಉದ್ದೇಶ ಬಿಟ್ಟು ಅವ್ಯವಹಾರಕ್ಕೆ ಬಳಕೆ: ದಾನಿಗಳು ಕೊಟ್ಟಿರುವ ಉದ್ದೇಶ ಬಿಟ್ಟು ಎಲ್ಲ ಅವ್ಯವಹಾರಗಳೂ ಅಲ್ಲಿ ಆಗುತ್ತಿವೆ. ಈ ರೀತಿ ಎಲ್ಲೆಲ್ಲಿ ಆಗಿದೆ ಅದನ್ನು ವಾಪಸ್ ಪಡೆದುಕೊಳ್ಳಲು ಮಾಣಿಪ್ಪಾಡಿ ಸಮಿತಿ ವರದಿ ನೀಡಿತ್ತು. ನೋಟಿಸ್ ಯಾವಾಗ ಬೇಕಾದರೂ ಬರಬಹುದು. ಆದರೆ ನೋಟೀಸ್ ವಕ್ಪ್ ಬೋರ್ಡ್ನಿಂದಲೇ ಬರುತ್ತದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.