ರಾಜ್ಯ ಸರಕಾರಕ್ಕೆ ಟಿಪ್ಪು, ಔರಂಗಜೇಬ ಪ್ರೇರಣೆ
ಮಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಟಿಪ್ಪು, ಔರಂಗಜೇಬ ಪ್ರೇರಣೆಯಾಗಿದೆ. ಹೀಗಾಗಿಯೇ ಗೋಹತ್ಯೆಯಂತಹ ಹಿಂದು ಭಾವನೆ, ಸ್ವಾಭಿಮಾನವನ್ನು ಕೆಣಕುವ ಕೃತ್ಯಗಳು ನಡೆಯುತ್ತಲೇ ಇರುತ್ತವೆ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲನ್ನು ಕಡಿದು ವಿಕೃತಿ ಮೆರೆದ ಕೃತ್ಯವನ್ನು ಖಂಡಿಸಿ ಮಂಗಳೂರಿನ ಗೋ ಸಂರಕ್ಷಣಾ ಸಂವರ್ಧನ ಸಮಿತಿ ಮಂಗಳವಾರ ಕ್ಲಾಕ್ ಟವರ್ ಬಳಿ ನಡೆಸಿದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ತಾಯಿಯ ಸ್ಥಾನ ಹೊಂದಿರುವ ಗೋವಿನ ಮೇಲೆ ದುರುಳರು ದೌರ್ಜನ್ಯ ಎಸಗುತ್ತಿದ್ದಾರೆ. ಸತ್ಯ, ಧರ್ಮ, ನ್ಯಾಯದ ನೆಲೆಯ ಈ ನಾಡಿನಲ್ಲಿ ಅದರ ವಿರುದ್ಧ ವರ್ತಿಸಿದರೆ, ಅಂತಹವರನ್ನು ದೇವರು ಶಾಶ್ವತವಾಗಿ ಮನೆಗೆ ಕಳುಹಿಸುತ್ತಾನೆ ಎಂದು ಮಾರ್ಮಿಕವಾಗಿ ಹೇಳಿದರು.
ಗೋವಿನ ಕೆಚ್ಚಲನ್ನೇ ಕಡಿಯುವ ಮಾನಸಿಕತೆ ಹೊಂದಿರುವವರು ಈ ರಾಜ್ಯದಲ್ಲಿದ್ದು, ಅವರ ಹೆಡೆಮುರಿ ಕಟ್ಟುವ ಕೆಲಸ ಆಗುತ್ತಿಲ್ಲ. ಇನ್ನು ಯಾವ ರೀತಿಯ ಆಡಳಿತವನ್ನು ರಾಜ್ಯ ಸರ್ಕಾರದಿಂದ ನಿರೀಕ್ಷಿಸಬಹುದು ಎಂದು ಅವರು ಪ್ರಶ್ನಿಸಿದರು. ಮೊದಲ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನ ಅವಧಿಯಲ್ಲೂ ಹಿಂದು ವಿರೋಧಿ ಆಡಳಿತ ಇತ್ತು. ಈಗ ಕಳೆದ ಒಂದೂವರೆ ವರ್ಷದಿಂದ ಹಿಂದು ವಿರೋಧಿ ಕೃತ್ಯಗಳೇ ನಡೆಯುತ್ತಿದೆ. ರಾಜ್ಯವ್ಯಾಪಿಯಾಗಿ ಇಂತಹ ಸರಣಿ ಕೃತ್ಯಗಳು ನಡೆದರೆ ಈ ಭೂಮಿಯಲ್ಲಿ ಯಾರಿಗೂ ಉಳಿಗಾಲವಿಲ್ಲ. ಈ ವಿಚಾರಗಳನ್ನು ಪ್ರತಿ ಮನೆಗೆ ತಲುಪಿಸಬೇಕು ಎಂದರು.