For the best experience, open
https://m.samyuktakarnataka.in
on your mobile browser.

ರಾಜ್ಯ ಸರಕಾರದಿಂದ ಜನಸಾಮಾನ್ಯರಿಗೆ ತೆರಿಗೆ, ಬೆಲೆ ಏರಿಕೆ ಬರೆ

05:56 PM Dec 05, 2024 IST | Samyukta Karnataka
ರಾಜ್ಯ ಸರಕಾರದಿಂದ ಜನಸಾಮಾನ್ಯರಿಗೆ ತೆರಿಗೆ  ಬೆಲೆ ಏರಿಕೆ ಬರೆ

ಸುರತ್ಕಲ್: ರಾಜ್ಯದಲ್ಲಿ ಕಳೆದ ಐದಾರು ತಿಂಗಳಿನಿಂದ ಪರಿಸರ ಸಹ್ಯ ಸಿಎನ್‌ಜಿ ದರ ಬರೋಬ್ಬರಿ ಕೆಜಿಗೆ 4.50 ದರ ಏರಿಸಿದರೆ, ಇದೀಗ ಜನಸಾಮಾನ್ಯರು ಬಳಸುವ ವಿದ್ಯುತ್ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ಕಾಂಗ್ರೆಸ್ ಆಡಳಿತದ ಸರಕಾರ ಬೆಲೆ ಏರಿಕೆಯ ಶಾಕ್ ನೀಡುತ್ತಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಆರ್ಥಿಕ ಇಕ್ಕಟ್ಟಿನಲ್ಲಿ ಸಿಲುಕಿ ಚಡಪಡಿಸುತ್ತಿದೆ. ಅರ್ಥಿಕ ಕ್ರೋಢಿಕರಣಕ್ಕೆ ಜನರಿಗೆ ತಿಳಿಯದಂತೆ ದಿನಸಿ ವಸ್ತುಗಳ ಮೇಲೆ ತೆರಿಗೆ ಹೊರೆ ಹಾಕಿದರೆ, ಇದೀಗ ವಿದ್ಯುತ್ ಕ್ಷೇತ್ರಕ್ಕೆ ಕೈ ಹಾಕಿದೆ. ದರ ಏರಿಕೆಯಾದಲ್ಲಿ ಪ್ರತಿಯೊಂದು ವಸ್ತುವಿಗೂ ಮತ್ತೆ ಏರಿಕೆ ಆಗುವುದರಲ್ಲಿ ಸಂಶಯವಿಲ್ಲ.
ಜನರ ಮೇಲೆ ತೆರಿಗೆ, ಬೆಲೆ ಏರಿಕೆ ಮಾಡಿದರೂ ಯಾವುದೇ ಶಾಸಕನಿಗೂ ತನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಮಾತ್ರ ನೀಡುತ್ತಿಲ್ಲ. ಮತದಾರರಿಗೆ ಶಾಸಕರು ಮುಖ ತೋರಿಸದಂತಹ ಸ್ಥಿತಿಯನ್ನು ಸರಕಾರ ತಂದೊಡ್ಡಿದೆ. ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ 2 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿದ್ದರೆ ಈ ಬಾರಿ ಕನಿಷ್ಠ 1 ಕೋಟಿ ರೂ. ಬಿಡುಗಡೆಯಾಗಲೂ ಹೆಣಗಾಡುತ್ತಿದ್ದೇವೆ. ಹಾಗಾದರೆ ಬೆಲೆ ಏರಿಕೆಯಿಂದ ಬಂದ ಆದಾಯದ ಮೂಲ ಎಲ್ಲಿಗೆ ಸೋರಿಕೆಯಾಗುತ್ತಿದೆ ಎಂಬುದನ್ನು ಸರಕಾರ ಶ್ವೇತಪತ್ರದ ಹೊರಡಿಸಿ ಜನತೆಗೆ ಮಾಹಿತಿ ನೀಡಬೇಕು ಎಂದು ಶಾಸಕ ಡಾ. ಭರತ್‌ ಶೆಟ್ಟಿ ವೈ ಒತ್ತಾಯಿಸಿದ್ದಾರೆ.