ರಾಜ್ಯ ಸರ್ಕಾರ ತಕ್ಷಣ ಒಳ ಮೀಸಲಾತಿ ಜಾರಿಗೆ ಕ್ರಮವಹಿಸಲಿ
ಬೆಂಗಳೂರು: ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ತಕ್ಷಣ ಕ್ರಮಕೈಗೊಂಡರೆ ಆ ಸಮುದಾಯಗಳಿಗೆ ನ್ಯಾಯ ನೀಡಿದಂತಾಗುತ್ತದೆ. ಮತ್ತೆ ಸಂವಿಧಾನದ 341ನೇ ಕಲಂ ತಿದ್ದುಪಡಿ ನೆಪ ಹೇಳಿದರೆ, ಈ ಸಮುದಾಯಗಳಿಗೆ ಮೂಗಿಗೆ ತುಪ್ಪ ಸವರಿದಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಸುಪ್ರೀಂ ಕೋರ್ಟ್ ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ಕುರಿತು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಇಂದು ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ ಕಾರಜೋಳ ಮತ್ತು ಮಾದರ ಚನ್ನಯ್ಯ ಗುರು ಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಎಸ್ಸಿ ಸಮುದಾಯದ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಇತ್ತೀಚೆಗೆ ಸುಪ್ರೀ ಕೋರ್ಟ್ ನ ಏಳು ಜನ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನಿಕ ಪೀಠ ಒಳ ಮೀಸಲಾತಿ ಕುರಿತು ಬಹಳ ಸ್ವಷ್ಟವಾದ ತೀರ್ಪು ನೀಡಿದೆ. ಈ ಜಿಜ್ಞಾಸೆ ಬಹಳ ದಿನಗಳಿಂದ ಇದೆ. ಎಲ್ಲ ರಾಜ್ಯಗಳಲ್ಲಿ ವಿಶೇಷವಾಗಿ ನಮಗೆ ಮೀಸಲಾತಿ ಇದ್ದರೂ ನ್ಯಾಯ ಸಿಗುತ್ತಿಲ್ಲ ಎಂದು ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಮೂರು ದಶಕಗಳಿಂದ ಬಹಳ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿತ್ತು. ಇದರ ಜೊತೆಗೆ ಐದು ಜನ ನ್ಯಾಯಾಧೀಶರ ಎರಡು ಪೀಠಗಳ ತೀರ್ಪು ಬಂದಿದ್ದವು. ಒಂದು ಸಂವಿಧಾನ ತಿದ್ದುಪಡಿ ಇಲ್ಲದೇ ಒಳ ಮೀಸಲಾತಿ ನೀಡಬಹುದು ಎಂದು ನ್ಯಾ. ಅರುಣ್ ಮಿಶ್ರಾ ಅವರು ತೀರ್ಪು ನೀಡಿದ್ದರು. ನ್ಯಾ. ಸಂತೋಷ್ ಹೆಗಡೆ ಅವರು 2004 ರಲ್ಲಿ ಒಳ ಮೀಸಲಾತಿ ಬೇಡ ಅಂತ ಹೇಳಿರಲಿಲ್ಲ. ಆದರೆ, ಸಂವಿಧಾನ ತಿದ್ದುಪಡಿ ಅಗತ್ಯವಿದೆ ಎಂದು ತೀರ್ಪು ಕೊಟ್ಟಿದ್ದರು. ಈ ಎರಡೂ ತೀರ್ಪಿನ ನಡುವೆ ಜಿಜ್ಞಾಸೆಯಾಯಿತು. ಈ ಹಿನ್ನೆಲೆಯಲ್ಲಿ ಸರ್ಕಾರಗಳ ನಡುವೆ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿತ್ತು. ಅದನ್ನು ಸ್ಪಷ್ಟಪಡಿಸುವ ಕಾನೂನಾತ್ವಕ ವಿಚಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ತು ಎಂದು ಹೇಳಿದರು.
ಕ್ರಾಂತಿಕಾರಿ ನಿರ್ಣಯ
ನಾವು ಹಲವಾರು ಕ್ರಾಂತಿಕಾರಿಯಾದ ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ನಾವು ಸಂವಿಧಾನ ಬದ್ದವಾಗಿಯೇ ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿಯೇ ನಾವು ವಿಧಾನಸಭೆಯಲ್ಲಿಯೇ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಸ್ಸಿ ಸಮುದಾಯಕ್ಕೆ ಶೇ 15 ರಿಂದ 17 % ಹಾಗೂ ಎಸ್ಟಿ ಸಮುದಾಯಕ್ಕೆ ಶೇ 3 ರಿಂದ ಶೇ 7 ಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಅದು ಕೂಡ ಬರುವ ದಿನಗಳಲ್ಲಿ ಸಂಸತ್ತಿನಲ್ಲಿಯೂ ಚರ್ಚೆಯಾಗಿ ಇತ್ಯರ್ಥಕ್ಕೆ ಬರುವ ಸಂದರ್ಭ ಇದೆ. ಅದೇ ಹಿನ್ನೆಲೆಯಲ್ಲಿ ಒಳ ಮೀಸಲಾತಿಯನ್ನು ಯಾವ ರೀತಿ ಮಾಡಬೇಕು ಎಂದು ಶಿಫಾರಸ್ಸು ಮಾಡಿದ್ದೇವೆ. ಅದೇ ತತ್ವದಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ಸಂದರ್ಭದಲ್ಲಿ ನಾವು ಉಳಿದ ಎಸ್ಸಿ ಎಸ್ಟಿ ಸಮುದಾಯಗಳಿಗೂ ನಾವು ನ್ಯಾಯ ಕೊಟ್ಟಿದ್ದೇವೆ. ಭೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯಗಳಿಗೂ ಮೀಸಲಾತಿ ಹೆಚ್ಚಳ ಮಾಡಿ ನ್ಯಾಯ ಕೊಟ್ಟಿದ್ದೇವೆ. ಐದು ಸಮುದಾಯಗಳನ್ನು ಎಸ್ಸಿ ಪಟ್ಟಿಯಿಂದ ತೆಗೆಯಬೇಕು ಎಂದು ಕಾಂಗ್ರೆಸ್ ಬೆಂಬಲಿಗರು ಸುಪ್ರೀಂ ಕೋರ್ಟ್ ಗೆ ಹೋಗಿದ್ದರು. ಕೋರ್ಟ್ ಎಸ್ಸಿ ಆಯೋಗಕ್ಕೆ ಸ್ಪಷ್ಟಣೆ ಕೇಳಿತ್ತು, ಆಯೋಗ ರಾಜ್ಯ ಸರ್ಕಾರದ ಅಭಿಪ್ರಾಯ ಕೇಳಿತ್ತು. ಆದರೆ, ಯಾವುದೇ ಸರ್ಕಾರ ಅದರ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಂಡಿರಲಿಲ್ಲ. ನಾವು ಸ್ಪಷ್ಟ ನಿಲುವು ತೆಗೆದುಕೊಂಡು, ಮೈಸೂರು ಮಹಾರಾಜರ ಕಾಲದಿಂದಲೂ ಈ ಸಮುದಾಯಗಳು ಎಸ್ಸಿ ಸಮುದಾಯದಲ್ಲಿ ಇರುವುದರಿಂದ ಎಲ್ಲಿಯವರೆಗೂ ಮೀಸಲಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೂ ಲಂಬಾಣಿ, ಭೋವಿ, ಕೊರಚ, ಕೊರಮ, ಭಜಂತ್ರಿ ಸಮುದಾಯಗಳು ಮೀಸಲಾತಿಯಲ್ಲಿ ಮುಂದುವರೆಯುತ್ತವೆ ಎಂದು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಈ ಸಮುದಾಯಗಳಲ್ಲಿಯೂ ಪ್ರತಿಭೆ ಇದೆ. ಅವರಿಗೆ ಅವಕಾಶ ಕೊಡಬೇಕಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವರಿಗೆ ಹೆಚ್ಚಿನ ಅವಕಾಶ ಸಿಕ್ಕರೆ ಸಂಪೂರ್ಣ ಭಾರತದ ಅಭಿವೃದ್ಧಿಯಾಗುತ್ತದೆ. ಈ ಸಮುದಾಯಗಳು ಅಭಿವೃದ್ಧಿ ಹೊಂದಿದಾಗ ಸ್ವಾವಲಂಬನೆಯ ಸ್ವಾಭಿಮಾನದ ಬದುಕು ನಡೆಸಿದಾಗ ಸಂಪೂರ್ಣ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ. ಅಂಬೇಡ್ಕರ್ ಅವರ ಮನದಾಳದ ಇಂಗಿತದಂತೆ ಅವರು ಸಂವಿಧಾನದಲ್ಲಿ 341ನೇ ಕಲಂ ಅಳವಡಿಸಿದ್ದರು. ಅಂಬೇಡ್ಕರ್ ಅವರ ಚಿಂತನೆಗೆ ಇವತ್ತಿನ ಕಾಲದಲ್ಲಿ ಬೆಲೆ ಸಿಕ್ಕಿದೆ. ಸಾಮಾಜಿಕ ನ್ಯಾಯ ಕೊಡುವುದರಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಯಶಸ್ವಿಯಾಗಿದೆ. ಅದಕ್ಕಾಗಿ ಸುಪ್ರೀಂ ಕೊರ್ಟ್ ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ದರಲ್ಲ
ಬಿಜೆಪಿಯವರು ಚುನಾವಣೆ ಮುಂಚೆ ತರಾತುರಿಯಲ್ಲಿ ಒಳ ಮೀಸಲಾತಿ ಶಿಫಾರಸ್ಸು ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಚುನಾವಣೆ ಸಂದರ್ಭದಲ್ಲಿ ಮಾಡಿದ್ದೇವೆ ಎಂದು ಆರೋಪಿಸುವ ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿದ್ದರಲ್ಲಾ ಆಗ ಯಾಕೆ ಒಳ ಮೀಸಲಾತಿ ಜಾರಿ ಮಾಡಲಿಲ್ಲ. ಹುಬ್ಬಳ್ಳಿಗೆ ಎಸ್ಸಿ ಸಮಾವೇಶಕ್ಕೆ ಬಂದು ಒಂದು ಶಬ್ದವನ್ನೂ ಮಾತನಾಡದೇ ಓಡಿ ಬಂದರಲ್ಲ. ಈ ಹೋರಾಟದಲ್ಲಿ ಹತ್ತು ಜನ ತೀರಿಕೊಂಡರು. ಆದರೂ, ಯಾಕೆ ಮಾಡಲಿಲ್ಲ. ನಾವು ಕ್ಯಾಬಿನೆಟ್ ಸಬ್ ಕಮಿಟಿಯ ವರದಿ ಬಂದ ಒಂದು ದಿನದಲ್ಲಿ ತೀರ್ಮಾನ ಮಾಡಿದ್ದೇವೆ. ಇದು ನಮ್ಮ ಬದ್ಧತೆ ಎಂದು ಹೇಳಿದರು.
ರಾಜ್ಯ ಸರ್ಕಾರ ಮನಸು ಮಾಡಿದರೆ ಒಳ ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬಹುದು. ಕಾಂಗ್ರೆಸ್ ನೇತೃತ್ವದ ತೆಲಂಗಾಣ ಸರ್ಕಾರ ತಕ್ಷಣ ಜಾರಿಗೆ ತರುವ ಕೆಲಸ ಮಾಡುತ್ತಿದೆ. ಅದನ್ನು ರಾಜ್ಯ ಸರ್ಕಾರ ಮಾಡಿದರೆ ಎಸ್ಸಿ ಸಮುದಾಯಕ್ಕೆ ನ್ಯಾಯ ಕೊಟ್ಟಂತಾಗುತ್ತದೆ. ಮುಖ್ಯಮಂತ್ರಿಯವರು ಸಂವಿಧಾನದ 341ನೇ ವಿಧಿ ತಿದ್ದುಪಡಿ ಮಾಡಬೇಕೆಂದು ಶಿಫಾರಸ್ಸು ಮಾಡಿದ್ದರು. 341ನೇ ವಿಧಿ ತಿದ್ದುಪಡಿ ಮಾಡುವುದು ಎಂದರೆ ಈಗಿನ ಸಂಸತ್ತಿನ ಪರಿಸ್ಥಿತಿ ನೋಡಿದರೆ ಅದು ಸಾಧ್ಯವಿಲ್ಲದ ಸ್ಥಿತಿ ಇದೆ. ನಾವು ಸಂವಿಧಾನ ತಿದ್ದುಪಡಿ ಇಲ್ಲದೇ ಒಳ ಮೀಸಲಾತಿ ನೀಡಬಹುದು ಎಂದು ಶಿಫಾರಸ್ಸು ಮಾಡಿದ್ದೇವೆ. ಮತ್ತೆ ಸಂವಿಧಾನದ 341ನೇ ವಿಧಿ ತಿದ್ದುಪಡಿ ಮಾಡಿ ಎಂದರೆ, ಈ ಸಮುದಾಯಕ್ಕೆ ಮೂಗಿಗೆ ತುಪ್ಪ ಸವರಿದಂತಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾದರ ಚನ್ನಯ್ಯ ಗುರು ಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಹಾಗೂ ಎಸ್ಸಿ ಸಮುದಾಯದ ಮುಖಂಡರು ಹಾಜರಿದ್ದರು.