ರಾಜ್ಯ ಸರ್ಕಾರ ಹೊಣೆಗಾರಿಕೆ ಮರೆತಿದೆ
ವಿಜಯಪುರ: ಅನೇಕ ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ವಕ್ಫ್ ನೋಟಿಸ್ ನೀಡಲಾಗಿದೆ. ಈ ಆತಂಕ ನಿವಾರಣೆಯ ಹೊಣೆಗಾರಿಕೆ ರಾಜ್ಯ ಸರ್ಕಾರದಲ್ಲವೇ? ನನ್ನನ್ನು ಪ್ರಶ್ನಿಸುವ ಮೊದಲು ತರಾತುರಿಯಲ್ಲಿ ನೋಟಿಸ್ ನೀಡುವ ಔಚಿತ್ಯವೇನಿತ್ತು ಎಂದು ವಕ್ಫ್ ಕಾಯ್ದೆ ಪರಿಶೀಲನೆಗೆ ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ವಿಜಯಪುರ ಜಿಲ್ಲಾಧಿಕಾರಿ ಆವರಣದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದ ಅವರು, ನಾನು ಉಳಿದ ಸದಸ್ಯರ ಜೊತೆ ಆಗಮಿಸಿಲ್ಲ ಎಂದು ಕಾಂಗ್ರೆಸ್ ಸರ್ಕಾರದವರು ಕೇಳುತ್ತಿದ್ದಾರೆ, ನನ್ನನ್ನು ಪ್ರಶ್ನೆ ಮಾಡುವ ಮೊದಲು ನೀವು ನೋಟಿಸ್ ನೀಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ಇಂಡಿ ತಾಲೂಕಿನ ರೈತರ ಉದಾಹರಣೆ ಉಲ್ಲೇಖಿಸಿದ ಅವರು, ನನಗೆ ಮಲ್ಲಿಕಾರ್ಜುನ ಎಂಬ ರೈತ ಭೇಟಿ ಮಾಡಿದರು. ನಿಮ್ಮ ಜಮೀನು ವಕ್ಫ್ ಎಂದು ದಾಖಲೆ ನೀಡಿದ್ದಾರೆ. ನನಗೆ ಓದಲು ಬರುವುದಿಲ್ಲ. ಆದರೆ ಅನೇಕ ದಶಕಗಳಿಂದ ಈ ಭೂಮಿ ಉಳುಮೆ ಮಾಡುತ್ತಿದ್ದೇನೆ. ಈಗ ವಕ್ಫ್ ಎನ್ನುತ್ತಿದ್ದಾರೆ ಎಂದು ಅಳಲು ತೋಡಿಕೊಂಡ, ಇದು ಒಬ್ಬ ಮಲ್ಲಿಕಾರ್ಜುನ ಸಮಸ್ಯೆಯಲ್ಲ, ಸಾವಿರಾರು ರೈತರಲ್ಲಿ ಆತಂಕ ಎದುರಾಗಿದೆ. ಈ ಆತಂಕಕ್ಕೆ ಯಾರು ಹೊಣೆ? ಸಚಿವ ಜಮೀರ್ ಅಹ್ಮದ್ ಖಾನ್ ಈ ವಿಷಯದಲ್ಲಿ ತರಾತುರಿಯಲ್ಲಿ ನೋಟಿಸ್ ನೀಡುವ ಆವಶ್ಯಕತೆ ಇರಲಿಲ್ಲ ಎಂದರು.
ಮಲ್ಲಿಕಾರ್ಜುನರಂತಹ ಅನೇಕ ರೈತರಿಗೆ ಆತಂಕ ಎದುರಾಗಿದೆ. ಇದು ಒಂದು ರೈತರ ಪ್ರಶ್ನೆ ಅಲ್ಲ, ಇದರ ಹೊಣೆಗಾರಿಕೆ ಯಾರು ಎಂಬುದನ್ನು ಬಹಿರಂಗಪಡಿಸಬೇಕು. ಇದರಿಂದಾಗಿಯೇ ನಾನು ಇಲ್ಲಿಗೆ ಧಾವಿಸಿ ಬಂದಿದ್ದೇನೆ ಎಂದರು.