ರಾಮಮಂದಿರ ಉದ್ಘಾಟನೆಯಂದು ಶಾಲಾ,ಕಾಲೇಜು ರಜೆ ಘೋಷಿಸಲು ಆಗ್ರಹ
ಯಾದಗಿರಿ: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ದಿನವಾದ ಜ.೨೨ ರಂದು ಶಾಲಾ,ಕಾಲೇಜುಗಳಿಗೆ ರಜೆ ಘೋಷಣೆ ಮಾಡಬೇಕು ಎಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಮನವಿ ಮಾಡಿದ್ದಾರೆ.
ಈ ಕುರಿತು ಶಾಸಕರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು,ನೂತನ ವರ್ಷಾರಂಭ ಸಂದರ್ಭದಲ್ಲಿ ದೇಶದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿರುವುದು ದೇಶವಾಸಿಗಳಲ್ಲಿ ಅಭಿಮಾನದ ಸಂಗತಿಯಾಗಿದೆ. ಅಯೋಧ್ಯೆ ಭಾರತದ ಅಭಿವೃದ್ಧಿ ಹಾಗೂ ಪರಂಪರೆಯ ಸಂಕೇತ. ವಿಕಸಿತ ಭಾರತಕ್ಕೆ ಶ್ರೀರಾಮನ ಆದರ್ಶವೆ ಪ್ರೇರಣೆ. ಈ ಹಿನ್ನೆಲೆಯಲ್ಲಿ ನಮ್ಮ ಯುವ ಪೀಳಿಗೆ ಮನಗಾಣಬೇಕಾಗಿದೆ. ಅಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ದೇಶ ಮಾತ್ರವಲ್ಲ ಇಡೀ ಜಗತ್ತೇ ಕಾಯುತ್ತಿದೆ. ಹೃನ್ಮದಲ್ಲಿ ಅಚ್ಚೊಳಿಯುವಂತೆ ಮಾಡಲು ಅಭೂತಪೂರ್ವ ಕಾರ್ಯಕ್ರಮದ ಕ್ಷಣವನ್ನು ನಮ್ಮ ಜಿಲ್ಲೆಯ ಎಲ್ಲಾ ಶಾಲಾ,ಕಾಲೇಜು ವಿದ್ಯಾರ್ಥಿಗಳು ಕಣ್ಣುತುಂಬಿಕೊಳ್ಳಬೇಕು ಎಂಬುದು ನನ್ನ ಆಪೇಕ್ಷೆಯಾಗಿದೆ ಎಂದಿದ್ದಾರೆ.
ಕಾರಣ ಅಂದು ಜಿಲ್ಲೆಯ ಎಲ್ಲಾ ಶಾಲಾ,ಕಾಲೇಜುಗಳಿಗೆ ರಜೆ ಘೋಷಿಸಬೇಕು. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರನ ಜೀವನ ವೃತ್ತಾಂತವನ್ನು ಸಾರುವ ಕಿರು ಚಿತ್ರ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರದರ್ಶನಗೊಳಿಸಬೇಕು. ಸಾಧ್ಯವಾದಲ್ಲಿ ಅಯೋಧ್ಯೆಯಲ್ಲಿ ಜರುಗುವ ಅಂದಿನ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ. ದೇಶದ ಚರಿತ್ರೆಯಲ್ಲಿ ದಾಖಲಾಗುತ್ತಿರುವ ಅದ್ಧೂರಿ ಸಮಾರಂಭವನ್ನು ನಮ್ಮ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ವೀಕ್ಷಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಕೋರಿದ್ದಾರೆ.