For the best experience, open
https://m.samyuktakarnataka.in
on your mobile browser.

ರಾಮ್‌ದೇವ್ ಕ್ಷಮೆ ಕೇಳಿದರೂ ಸುಪ್ರೀಂಕೋರ್ಟ್‌ನಲ್ಲಿ ಛೀಮಾರಿ

10:58 PM Apr 02, 2024 IST | Samyukta Karnataka
ರಾಮ್‌ದೇವ್ ಕ್ಷಮೆ ಕೇಳಿದರೂ ಸುಪ್ರೀಂಕೋರ್ಟ್‌ನಲ್ಲಿ ಛೀಮಾರಿ

ನವದೆಹಲಿ: ಪತಂಜಲಿ ಆಯುರ್ವೇದ ಸಂಸ್ಥೆಯ ತಪ್ಪು ದಾರಿಗೆಳೆಯುವ ಜಾಹಿರಾತು ಪ್ರಕರಣದಲ್ಲಿ ಬಾಬಾ ರಾಮ್‌ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರಿಬ್ಬರೂ ಮಂಗಳವಾರ ಸುಪ್ರೀಂಕೋರ್ಟ್‌ಗೆ ಹಾಜರಾಗಿ ಕ್ಷಮೆ ಕೇಳಿದರೂ ಇಬ್ಬರಿಗೂ ನ್ಯಾಯಾಲಯ ಛೀಮಾರಿ ಹಾಕಿದೆ. ಕಳೆದ ಮೂರು ತಿಂಗಳಲ್ಲಿ ಈ ನ್ಯಾಯಾಲಯವು ಪತಂಜಲಿ ಸಂಸ್ಥೆಗೆ ಛೀಮಾರಿ ಹಾಕಿರುತ್ತಿರುವುದು ಇದು ಎರಡನೇ ಬಾರಿ.
ಕಳೆದ ನವೆಂಬರ್ ೨೩ರಂದು ನಿಮಗೆ ಎಚ್ಚರಿಕೆ ನೀಡಿದ ಆದೇಶ ಹೊರಡಿಸಿದರೂ ಅದರ ಮರುದಿನ ಪತ್ರಿಕಾಗೋಷ್ಠಿ ನಡೆಸಿದ್ದೀರಿ. ಈ ಪ್ರಕರಣದಲ್ಲಿ ಒಂದು ಅಫಿಡವಿತ್ ಮಾತ್ರ ಸಲ್ಲಿಸಲಾಗಿದೆ. ನಿಮ್ಮ ಇನ್ನೆರಡು ಅಫಿಡವಿಟ್‌ಗಳು ಎಲ್ಲಿವೆ ಎಂದು ನ್ಯಾಯಾಲಯ ಇಬ್ಬರನ್ನೂ ಪ್ರಶ್ನಿಸಿದೆ.
ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದರೂ ಪತಂಜಲಿ ಜಾಹೀರಾತು ಪ್ರಚಾರ ಮುಂದುವರಿದಿದೆ. ಹೀಗಾಗಿ ಕೇವಲ ಕ್ಷಮೆ ಕೇಳಿದರೆ ಸಾಲದು. ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯ ಪರಿಣಾಮ ಎದುರಿಸಬೇಕು ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರ ನ್ಯಾಯಪೀಠವು ಸೂಚಿಸಿದೆ.
ನೀವು ಕಾಯ್ದೆಯನ್ನು ಉಲ್ಲಂಘಿಸಿದ್ದೀರಿ ಎಂದು ನ್ಯಾಯಾಲಯವೇ ಹೇಳಿದೆ. ನ್ಯಾಯಾಲಯಕ್ಕೆ ವಾಗ್ದಾನ ನೀಡಿದ ನಂತರವೂ ನೀವು ಕಾನೂನು ಉಲ್ಲಂಘಿಸಿದ್ದೀರಿ. ಕಾಯ್ದೆಯಲ್ಲಿ ಬದಲಾವಣೆ ಮಾಡುವ ಕುರಿತು ಸಚಿವಾಲಯವನ್ನು ಸಂಪರ್ಕಿಸಿದ್ದೀರಾ ಎಂದೂ ಪ್ರಶ್ನಿಸಿದೆ. ಆಗ ರಾಮ್‌ದೇವ್ ಪರ ವಾದ ಮಂಡಿಸಿದ ಬಲ್ಬೀರ್ ಸಿಂಗ್, ನಮ್ಮ ಕ್ಷಮಾಪಣೆ ಸಿದ್ಧವಾಗಿದೆ ಎಂದು ಹೇಳಿದಾಗ ಅದು ದಾಖಲೆಗಳಲ್ಲೇಕೆ ಇಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿತು.
ಅಗತ್ಯಬಿದ್ದರೆ ಬದಲಾವಣೆ ಮಾಡುವುದೋಸ್ಕರ ಆ ಪತ್ರ ಕಾಯ್ದಿರಿಸಿಕೊಂಡಿದ್ದೇವೆ. ಮುಂದೆ ಹೀಗಾಗುವುದಿಲ್ಲ ಎಂದೂ ರಾಮ್‌ದೇವ್ ವಕೀಲರು ಹೇಳಿದರು. ಆದರೆ ಮೊನ್ನೆ ನಡೆದ ತಪ್ಪಿಗೆ ಕ್ಷಮೆ ಕೇಳಿ ಎಂದು ನ್ಯಾಯಾಲಯ ತಾಕೀತು ಮಾಡಿತು. ಇದನ್ನು ಅನುಸರಿಸಿ `ನಾವು ತಪ್ಪು ಮಾಡಿದ್ದೇವೆ. ನಾವು ಇದರಿಂದ ಹಿಂದೆ ಸರಿಯುವುದಿಲ್ಲ ಅಥವಾ ಮರೆಮಾಚುತ್ತಿಲ್ಲ. ನಾವು ಬೇಷರತ್ ಕ್ಷಮೆಯಾಚಿಸುತ್ತೇವೆ' ಎಂದು ರಾಮ್‌ದೇವ್ ವಕೀಲರು ಹೇಳಿದರು.