ರಾಮ ಮಂದಿರ ಉದ್ಘಾಟನೆಗೆ ಆಡ್ವಾಣಿ, ಜೋಶಿ ಕಡೆಗಣನೆ ಸಲ್ಲ
ಹುಬ್ಬಳ್ಳಿ: ರಾಮ ಮಂದಿರ ಉದ್ಘಾಟನೆಗೆ ಆಗಮಿಸದಂತೆ ಆಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರಿಗೆ ಮನವಿ ಮಾಡಿರುವುದು ಸರಿಯಲ್ಲ. ರಾಮಮಂದಿರಕ್ಕಾಗಿ ಅವಿರತ ಹೋರಾಟ ಮಾಡಿದವರೇ ಅವರು. ರಾಮಮಂದಿರ ಬಗ್ಗೆ ಇಡೀ ರಾಷ್ಟçದಲ್ಲಿ ಜಾಗೃತಿ ಮೂಡಿಸಿದಂಥವರು. ಅವರ ಉಪಸ್ಥಿತಿ ಬಹಳ ಮುಖ್ಯ. ಹೀಗಾಗಿ ಕಡೆಗಣಿಸಿದ್ದು ತಪ್ಪು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡ್ವಾಣಿಯವರಂತೂ ಜೀವನಪರ್ಯಂತ ರಾಮ ಮಂದಿರ ನಿರ್ಮಾಣಕ್ಕೆ ಹೋರಾಟ ಮಾಡಿದವರು. ಈಗ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಅವರನ್ನೇ ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಲೋಕಸಭೆ ಚುನಾವಣೆಗೆ ನಾನು ಟಿಕೆಟ್ ಆಕಾಂಕ್ಷಿ ಎಂದು ಎಲ್ಲೂ ಹೇಳಿಲ್ಲ. ಪಕ್ಷದ ಹೈಕಮಾಂಡ್ ಕೂಡಾ ನನ್ನ ಜೊತೆಗೆ ಚರ್ಚೆ ಮಾಡಿಲ್ಲ. ಪಕ್ಷದ ವೇದಿಕೆಯಲ್ಲೂ ಚರ್ಚೆ ಆಗಿಲ್ಲ ಎಂದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರ ಸೇರಿದಂತೆ ೧೫ ರಿಂದ ೨೦ ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದರು.
ಜಾತಿ ಗಣತಿ ವಿಚಾರ ಪ್ರಮುಖ ಅಜೆಂಡಾ
ವೀರಶೈವ ಮಹಾಸಭಾ ೩-೪ ವರ್ಷಗಳಿಗೊಮ್ಮೆ ಮಹಾಧೀವೇಶನ ಆಯೋಜಿಸುತ್ತದೆ. ೨೪ರ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸುತ್ತಿದ್ದೇನೆ. ಪ್ರಮುಖ ವಿಚಾರಗಳ ವಿಮರ್ಶೆಗೆ ಸಭೆ ನಡೆಯುತ್ತಿದೆ. ಅದರಲ್ಲಿ ಜಾತಿ ಗಣತಿ ಕೂಡ ಒಂದು ಎಂದರು.
ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಮತ್ತು ಎಲ್ಲಾ ಒಳಪಂಗಡಗಳನ್ನು ಸೇರಿಸುವ ಬೇಡಿಕೆ ಸಭೆಯ ಪ್ರಮುಖ ಅಜೆಂಡಾ. ಸಮಾಜ ಜಾಗೃತಿ ಮತ್ತು ಸಂಘಟನೆ ಮಾಡಲು ಏನು ಅವಶ್ಯಕತೆ ಇದೆಯೋ ಅದರ ಬಗ್ಗೆ ಚರ್ಚಿಸಲು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಸಾಮಾಜಿಕ, ಆರ್ಥಿಕ ಸಮೀಕ್ಷೆ ಉದ್ದೇಶದಿಂದ ಜಾತಿಗಣತಿ ಮಾಡಲಾಗಿತ್ತು. ಆದರೆ ಬಹಿರಂಗ ಚರ್ಚೆ ಆಗುತ್ತಿದೆ. ವರದಿ ಅಂಶಗಳು ಬಹಿರಂಗಗೊಂಡಿವೆ ಎಂಬುದು ವಿವಾದ ಆಗಿದೆ. ಹೀಗಾಗಿ, ಮುಖ್ಯಮಂತ್ರಿ ಎಲ್ಲ ಸಮುದಾಯದ ನಾಯಕರ ಸಭೆ ಕರೆದು ಮಾತನಾಡೋದು ಉತ್ತಮ ಎಂದು ಸಲಹೆ ನೀಡಿದರು.