“ರಾಮ ರಥದ ಸಾರಥಿಗೆ ಭಾರತ ರತ್ನ”
ಬೆಂಗಳೂರು: ಬಿಜೆಪಿ ಕಂಡ ಶ್ರೇಷ್ಠ ನೇತಾರ ಲಾಲ್ ಕೃಷ್ಣ ಅಡ್ವಾಣಿ ಜೀ ಅವರು ತಮ್ಮ ಸಾಧನೆ ಹಾಗೂ ಹೋರಾಟಕ್ಕೆ ಅವರ ಜೀವತಾವಧಿಯಲ್ಲೇ ‘ಭಾರತರತ್ನ’ ಪಡೆಯುತ್ತಿರುವುದು ವಿಶೇಷವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಭಾರತದ ಸಂಸತ್ ನ ಗೌರವಕ್ಕೆ ಬಹುದೊಡ್ಡ ಘನತೆ ತಂದು ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿದ ದೇಶ ಕಂಡ ಶ್ರೇಷ್ಠ ರಾಜಕಾರಣಿ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ “ಭಾರತ ರತ್ನ” ಲಭಿಸಿರುವುದು ಕೋಟ್ಯಾಂತರ ಭಾರತೀಯರಿಗೆ ಅತೀವ ಹರ್ಷವನ್ನುಂಟು ಮಾಡಿದೆ, ಅಡ್ವಾಣಿಜೀ ಅವರನ್ನು ಅತ್ಯಂತ ಗೌರವ ಪೂರ್ವಕವಾಗಿ ಅಭಿನಂದಿಸುವೆ.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ರಕ್ಷಣೆಗಾಗಿ ತಮ್ಮ ಇಡೀ ಜೀವನವನ್ನು ಸಮರ್ಪಿಸಿಕೊಂಡ ತಪಸ್ವೀ ರಾಜಕಾರಣಿ, ಬಿಜೆಪಿ ಕಂಡ ಶ್ರೇಷ್ಠ ನೇತಾರ ಲಾಲ್ ಕೃಷ್ಣ ಅಡ್ವಾಣಿ ಜೀ ಅವರು ತಮ್ಮ ಸಾಧನೆ ಹಾಗೂ ಹೋರಾಟಕ್ಕೆ ಅವರ ಜೀವತಾವಧಿಯಲ್ಲೇ ‘ಭಾರತರತ್ನ’ ಪಡೆಯುತ್ತಿರುವುದು ವಿಶೇಷವಾಗಿದೆ. ಇಂಥಾ ಮಹತ್ವದ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಅನಂತ ಧನ್ಯವಾದಗಳು.
ಅಯೋಧ್ಯೆಯ ರಾಮನಿಗಾಗಿ ರಥಯಾತ್ರೆ ನಡೆಸಿ, ಭಾರತೀಯರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದ್ದ ಆಧ್ಯಾತ್ಮಿಕ ಚಿಂತಕರೂ ಆದ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಜೀ ಅವರು ಸರ್ವೋಚ್ಚ ‘ಭಾರತರತ್ನ’ ಪ್ರಶಸ್ತಿಗೆ ಭಾಜನರಾಗಿದ್ದು ಭಾರತದ ಪರಂಪರೆಗೆ ಸಂದ ಮಹಾನ್ ಗೌರವವಾಗಿದೆ ಎಂದು ಬರೆದುಕೊಂಡಿದ್ದಾರೆ.