ರಾಯಚೂರು-ಶಹಾಪುರ ಸಂರ್ಪಕ ಕಟ್
ಕೊಳ್ಳೂರ(ಎಂ) ಸೇತುವೆ ಜಲಾವೃತ:ಸಂಚಾರ ಸ್ಥಗಿತ
ಯಾದಗಿರಿ: ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣ ನದಿಗೆ ೩ ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಹರಿಸಲಾಗಿದ್ದು, ಕಲಬುರಗಿ-ಶಹಾಪುರ-ದೇವದುರ್ಗ ಮೂಲಕ ರಾಯಚೂರಗೆ ಸಂಪರ್ಕ ಕಲ್ಪಿಸುವ ಕೊಳ್ಳೂರ(ಎಂ) ಸೇತುವೆ ಮುಳುಗಡೆ ಆಗಿದ್ದು ಸಂಚಾರ ಸ್ಥಗಿತಗೊಂಡಿದೆ.
ನೆರೆಯ ಮಹಾರಾಷ್ಟçದ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಗೆ ಆಲಮಟ್ಟಿ ಅಣೆಕಟ್ಟೆ ಮೂಲಕ ಬಸವಸಾಗರ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಬಸವಸಾಗರದಿಂದ ಜಿಲ್ಲೆಯಲ್ಲಿ ಹರಿಯುವ ಭೀಮಾ ಹಾಗೂ ಕೃಷ್ಣಾ ನದಿಗಳ ಪ್ರವಾಹ ಅಪಾಯಮಟ್ಟ ತಲುಪಿದೆ. ಪರಿಣಾಮ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಶಹಾಪುರ ತಾಲೂಕಿನ ಕೊಳ್ಳೂರ(ಎಂ) ಸೇತುವೆ ಮೇಲೆ ನೀರು ಹರಿಯುತ್ತಿದೆ. ಹೀಗಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ನೆರೆಯ ರಾಯಚೂರ ದಿಂದ ವಿಜಯಪುರ ಜಿಲ್ಲೆಯನ್ನು ಸಂರ್ಪಕಿಸುವ ಪ್ರಮುಖ ರಸ್ತೆಯಾಗಿದೆ.ಪ್ರತಿ ವರ್ಷವೂ ಬಸವಸಾಗರ ಜಲಾಶಯದಿಂದ ೨.೫೦ ಲಕ್ಷ ಮೇಲ್ಪಟ್ಟು ನೀರನ್ನು ಕೃಷ್ಣಾ ನದಿಗೆ ಹರಿಸಿದಗೆಲ್ಲ ಸೇತುವೆ ಮುಳುಗಡೆ ಆಗತ್ತದೆ.ಪ್ರಯಾಣಿಕರು ಹಾಗೂ ರೈತರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.ಇದೇನು ಹೊಸತಲ್ಲಾ, ಈ ವರೆಗೆ ಆಡಳಿತ ನಡೆಸಿದ ಯಾವೊಂದು ಸರ್ಕಾರವೂ ಸೇತುವೆ ಎತ್ತರಿಸುವ ಗೊಜಿಗೆ ಹೋಗಿಲ್ಲ. ಕೇವಲ ಭರವಸೆಗಳನ್ನು ನೀಡಿದ್ದಾರೆ ಹೊರತು ಅನುಷ್ಠಾನಕ್ಕೆ ತಂದಿಲ್ಲ ಎಂದು ಈ ಭಾಗದ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಬೇಟಿ,ಪರಿಶೀಲನೆ: ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ, ರಾಯಚೂರ ಸಂಸದ ಜಿ. ಕುಮಾರನಾಯಕ, ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅವರು ಕೊಳ್ಳೂರ(ಎಂ) ಸೇತುವೆಗೆ ಭೇಟಿ ನೀಡಿ ವಾಸ್ತವಿಕ ಪರಿಸ್ಥಿತಿ ಅವಲೋಕಿಸಿದರು. ಸೇತುವೆ ಎತ್ತರಿಸಲು ಈ ಸಂದರ್ಭದಲ್ಲಿ ರೈತರು ಆಗ್ರಹಿಸಿದರು. ಸೇತುವೆ ಮೇಲ್ಮಟ್ಟದಲ್ಲಿ ಹರಿಯುವ ನೀರಿನಲ್ಲಿ ಎಡ ಮತ್ತು ಬಲ ಭಾಗದಲ್ಲಿರುವ ಅಪಾರ ಪ್ರಮಾಣದ ಬೆಳೆ ಜಲಾವೃತವಾಗಿದೆ. ಕೋಟ್ಯಾಂತರ ರುಪಾಯಿ ಬೆಳೆ ನಷ್ಟ ಅನುಭವಿಸತ್ತೇವೆ ಎಂದು ರೈತರು ಸಚಿವರ ಮುಂದೆ ಅಳಲು ತೋಡಿಕೊಂಡರು. ಸಚಿವರು ಮುಂದಿನ ದಿನಗಳಲ್ಲಿ ಸೇತುವೆ ಎತ್ತರಿಸುವುದಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಭರವಸೆ ನೀಡಿದರು.