For the best experience, open
https://m.samyuktakarnataka.in
on your mobile browser.

ರಾಷ್ಟ್ರದ ಹಸಿರು ಇಂಧನ ಗುರಿ ಸಾಧನೆಗೆ ಕೇಂದ್ರ ಸರ್ಕಾರ ಬದ್ಧ: ಸಚಿವ ಪ್ರಲ್ಹಾದ ಜೋಶಿ

09:23 PM Jul 19, 2024 IST | Samyukta Karnataka
ರಾಷ್ಟ್ರದ ಹಸಿರು ಇಂಧನ ಗುರಿ ಸಾಧನೆಗೆ ಕೇಂದ್ರ ಸರ್ಕಾರ ಬದ್ಧ  ಸಚಿವ ಪ್ರಲ್ಹಾದ ಜೋಶಿ

ಬೆಂಗಳೂರು: ಭಾರತದ ಪ್ರಪ್ರಥಮ "ಗ್ರೀನ್ ಹೈಡ್ರೋಜನ್ ಎಲೆಕ್ಟ್ರೋಲೈಜರ್ ಗಿಗಾ ಫ್ಯಾಕ್ಟರಿ" ಕರ್ನಾಟಕದಲ್ಲಿ ಶುಕ್ರವಾರ ಉದ್ಘಾಟನೆ ಕಂಡಿತು.
ದೊಡ್ಡಬಳ್ಳಾಪುರದಲ್ಲಿನ ಓಹ್ಮಿಯಂ ಸ್ಥಾವರದಲ್ಲಿ ಕೇಂದ್ರದ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ ಜೋಶಿ ಅವರು ಈ ಅತ್ಯಾಧುನಿಕ, ಹಸಿರು ಹೈಡ್ರೋಜನ್ ಎಲೆಕ್ಟ್ರೋಲೈಜರ್ ಗಿಗಾ ಫ್ಯಾಕ್ಟರಿಯನ್ನು ಉದ್ಘಾಟಿಸಿದರು.
ಸಮಾರಂಭದಲ್ಲಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಷ್ಟ್ರದ ಹಸಿರು ಇಂಧನ ಗುರಿಗಳನ್ನು ಸಾಧಿಸಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ಆ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಶ್ರಮಿಸುತ್ತಿದ್ದೇವೆ ಎಂದು ಪ್ರತಿಪಾದಿಸಿದರು.
2014ರಲ್ಲಿ 76 GW ಇದ್ದ ನವೀಕರಿಸಬಹುದಾದ ಇಂಧನ ಉತ್ಪಾದನೆ ಸಾಮರ್ಥ್ಯ ಪ್ರಸ್ತುತದಲ್ಲಿ ಅದರ ದುಪ್ಪಟ್ಟು ಏರಿಕೆ ಕಂಡಿದೆ ಎಂದು ಹೇಳಿದರು.
ಜೂನ್ 2024ರ ವೇಳೆಗೆ 195 GW ಗೆ ಹೆಚ್ಚಳವಾಗಿದ್ದು, ಸರಿ ಸುಮಾರು 2.5 ಪಟ್ಟು ಅಧಿಕ ಉತ್ಪಾದನಾ ಸಾಮರ್ಥ್ಯ ವೃದ್ಧಿಸಿದೆ. 2014ರಲ್ಲಿ ಕೇವಲ 3 GW ಇದ್ದ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯ ಈಗ ಅದರ 30 ಪಟ್ಟು ಹೆಚ್ಚಿದ್ದು, 85 GW ತಲುಪಿದೆ ಎಂದು ಹೇಳಿದರು.
ಪವನ ಶಕ್ತಿ ಸಾಮರ್ಥ್ಯ 21 GW ನಿಂದ 46 GW ಗಿಂತಲೂ ಅಧಿಕವಾಗಿದೆ. ಇಂಗಾಲದ ತಟಸ್ಥ ಭವಿಷ್ಯವನ್ನು ಸಾಧಿಸುವ ನಮ್ಮ ಬದ್ಧತೆಯಲ್ಲಿ ನಮ್ಮ ಸರ್ಕಾರ ಸದೃಢ ಹೆಜ್ಜೆ ಇಟ್ಟಿದೆ ಎಂದರು.
ಹಸಿರು ಇಂಧನದ ಬೆಳವಣಿಗೆಯಲ್ಲಿ ಅಗ್ರ ಶಕ್ತಿ ಭಾರತಕ್ಕಿದೆ: ಹಸಿರು ಇಂಧನ ಬೆಳವಣಿಗೆಯಲ್ಲಿ ವಿಶ್ವದಲ್ಲೇ ಅಗ್ರ ಸ್ಥಾನದಲ್ಲಿರುವ ಶಕ್ತಿ ಭಾರತಕ್ಕಿದೆ ಎಂದು ಹೇಳಿದರು.
ಕರ್ನಾಟಕದ ದೊಡ್ಡಬಳ್ಳಾಪುರದಲ್ಲಿ ಇಂದು ಉದ್ಘಾಟನೆಗೊಂಡ ಹಸಿರು ಹೈಡ್ರೋಜನ್ ಎಲೆಕ್ಟ್ರೋಲೈಜರ್ ಗಿಗಾ ಫ್ಯಾಕ್ಟರಿ ಹಸಿರು ಜಲಜನಕವನ್ನು ಉತ್ಪಾದಿಸುವ ಮೂಲಕ ಭಾರತದ ಇಂಧನ ಭದ್ರತೆಗೆ ಉತ್ತೇಜನ ನೀಡಲಿದೆ. ಜತೆಗೆ ಪಳಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಸಚಿವ ಎಂ. ಬಿ.ಪಾಟೀಲ್, ಶಾಸಕರಾದ ಟಿ. ಡಿ.ರಾಜೇಗೌಡ, ಡಿ.ಮುನಿರಾಜು ಹಾಗೂ ಪ್ರಮುಖರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.