For the best experience, open
https://m.samyuktakarnataka.in
on your mobile browser.

ರಾಷ್ಟ್ರಧರ್ಮದ ರಕ್ಷಣೆಯೇ ಆದ್ಯ ಕರ್ತವ್ಯ

03:00 AM Oct 17, 2024 IST | Samyukta Karnataka
ರಾಷ್ಟ್ರಧರ್ಮದ ರಕ್ಷಣೆಯೇ ಆದ್ಯ ಕರ್ತವ್ಯ

`ವ್ಯಾಪಾರ ನಡೆಸುವುದಷ್ಟೇ ವ್ಯಾಪಾರಿಯ ಧರ್ಮ. ಅದು ಬಿಟ್ಟು ಕಾಲಿಟ್ಟ ಜಾಗದಲ್ಲಿ ತನ್ನದೇ ಸಾಮ್ರಾಜ್ಯವನ್ನು ವಿಸ್ತರಿಸಲು ಹವಣಿಸಿ ಸ್ಥಳೀಯ ಸಂಸ್ಕೃತಿಯ ಸರ್ವನಾಶಕ್ಕೆ ಪ್ರಯತ್ನಿಸುವುದು ಸರಿಯಲ್ಲ. ಹಿಂದೂಸ್ಥಾನದ ಆಚರಣೆಗಳು, ಧಾರ್ಮಿಕ ನಂಬಿಕೆಗಳು ಹಾಗೂ ರೀತಿನೀತಿಗಳ ಬಗ್ಗೆ ತೀರ್ಪು ನೀಡುವ ಅಧಿಕಾರ ಈಸ್ಟ್ ಇಂಡಿಯಾ ಕಂಪೆನಿಗಿಲ್ಲ. ನಮ್ಮ ದೇವಸ್ಥಾನಗಳಲ್ಲಿ ಯಾವುದನ್ನು ಬೋಧಿಸಬೇಕು, ನಮ್ಮ ಮಕ್ಕಳು ಯಾವುದರ ಅಧ್ಯಯನದಿಂದ ಸಂಸ್ಕಾರವಂತರಾಗುತ್ತಾರೆಂಬುವ ಆಯ್ಕೆ ಭಾರತೀಯರದೇ ಹೊರತು ಬ್ರಿಟಿಷರದಲ್ಲ. ಹಿಂದೂಗಳ ಮತಾಂತರಕ್ಕೆ ಪ್ರಚೋದಿಸಿ ದೇಸೀ ಶ್ರದ್ಧೆಯ ಬುಡ ಅಲುಗಾಡಿಸಲು ಶತಪ್ರಯತ್ನ ನಡೆಸುತ್ತಿರುವ ಮಿಶನರಿಗಳ ಜಾಲವನ್ನು ನಿಗ್ರಹಿಸಿ ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ೧೮೫೭ರ ಕ್ರಾಂತಿಯ ಪುನರಾವರ್ತನೆಯಾದೀತು. ಹಿಂದೂಗಳ ತಾಳ್ಮೆ ಮತ್ತು ಸಹನೆ ಶಕ್ತಿಯೇ ಹೊರತು ದೌರ್ಬಲ್ಯವಲ್ಲವೆಂಬುದನ್ನು ಬಹುಬೇಗ ಅರ್ಥ ಮಾಡಿಕೊಂಡರೆ ಎಲ್ಲರಿಗೂ ಕ್ಷೇಮ' ಎಂಬ ಪತ್ರ ಬರೆದು ಬ್ರಿಟಿಷ್ ಉನ್ನತಾಧಿಕಾರಿಗಳೆದುರು ಹಿಂದೂಸಮಾಜದ ಆಕ್ರೋಶವನ್ನು ತೆರೆದಿಟ್ಟ ಗಾಜುಲು ಲಕ್ಷ್ಮೀನರಸು ಚೆಟ್ಟಿ, ಹಿಂದು ಹಿತರಕ್ಷಣೆ ಹಾಗೂ ಭಾರತದ ಸ್ವಾತಂತ್ರ‍್ಯ ಆಂದೋಲನದಲ್ಲಿ ಬಹುಮುಖ್ಯ ಪಾತ್ರವಹಿಸಿದ ಮದ್ರಾಸ್ ನೇಟೀವ್ ಅಸೋಸಿಯೇಶನ್ ಸ್ಥಾಪಕಾಧ್ಯಕ್ಷ. ಶ್ರೀಮಂತ ಉದ್ಯಮಿ ಸಿಂಧುಲು ಚೆಟ್ಟಿ ದಂಪತಿಗಳಿಗೆ ಜನಿಸಿದ ಲಕ್ಷ್ಮೀನರಸು, ಶಿಕ್ಷಣಕ್ಕಿಂತಲೂ ಅಪ್ಪನ ಉದ್ಯಮದಲ್ಲೇ ಆಸಕ್ತರಾದರು. ಕಲಿಕೆಯ ಆದ್ಯತೆಯನ್ನು ಕಳೆದುಕೊಳ್ಳುತ್ತಲೇ ಔದ್ಯಮಿಕ ಜಗತ್ತಿನ ಸಾರ್ವಭೌಮನಾಗಬೇಕೆಂದು ನಿಶ್ಚಯಿಸಿದ ತರುಣನೆದುರು ಅವಕಾಸಗಳ ಸಮುದ್ರ ಆವಿರ್ಭವಿಸಿತ್ತು. ವಿದೇಶೀಯರು ದಕ್ಷಿಣ ಭಾರತದಲ್ಲಿ ಪಾರುಪತ್ಯ ಸಾಧಿಸಬೇಕೆಂದು ಯೋಚಿಸಿ ಯೋಜಿಸಿದ್ದ ಅನೇಕ ಉದ್ಯಮಗಳ ಸುಳಿವು ಲಭಿಸುತ್ತಲೇ ಎಚ್ಚೆತ್ತ ಲಕ್ಷ್ಮೀನರಸು, ಬಟ್ಟೆ, ಕಚ್ಚಾ ಹತ್ತಿ ಹಾಗೂ ಸಂಬಾರ ಪದಾರ್ಥಗಳ ಉದ್ಯಮವನ್ನು ಕೈಗೆತ್ತಿಕೊಂಡರು. ಕಂಪನಿ ಸರಕಾರ ನಡೆಸುತ್ತಿದ್ದ ಆರ್ಥಿಕ ಅಕ್ರಮವನ್ನು ಪ್ರತ್ಯಕ್ಷ ಗಮನಿಸಿದ ಬಳಿಕ ತಮ್ಮ ವ್ಯಾಪಾರವನ್ನು ಮತ್ತಷ್ಟು ವೃದ್ಧಿಸಿ ಅಪಾರ ಹಣ ಸಂಪಾದಿಸಿದ ಚೆಟ್ಟಿ, ಸಮಾಜಸೇವಾ ಕಾರ್ಯಕ್ಕಿಳಿಯಲು ಸಂಕಲ್ಪಿಸಿದರು.
ಸಂಪಾದನೆಯ ಕಾಲು ಪಾಲನ್ನು ದೀನದುರ್ಬಲರ ಏಳಿಗೆಗಾಗಿ ವಿನಿಯೋಗಿಸಬೇಕೆಂಬ ತಂದೆಯ ಮಾತನ್ನು ತಳ್ಳಿಹಾಕದೆ ಧಾರ್ಮಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿದ ಚೆಟ್ಟಿ, ನಿಧಾನವಾಗಿ ಸ್ವಾತಂತ್ರ‍್ಯ ಹೋರಾಟದತ್ತ ಹೊರಳಿದರು. ಬ್ರಿಟಿಷ್ ಸರಕಾರದ ಜನವಿರೋಧೀ ನೀತಿಗಳನ್ನು ಪ್ರಬಲವಾಗಿ ಖಂಡಿಸಲು ದೇಸೀ ಮಾಧ್ಯಮದ ಅಗತ್ಯತೆಯನ್ನು ಮನಗಂಡ ಗಾಜುಲು, ಮದ್ರಾಸಿನಿಂದ ಪ್ರಕಟಗೊಂಡ ಭಾರತೀಯನ ಒಡೆತನದ ಮೊಟ್ಟಮೊದಲ ಪತ್ರಿಕೆ 'ದ ಕ್ರೆಸೆಂಟ್'ನ್ನು ಆರಂಭಿಸಿ ದೇಶವಾಸಿಗಳಿಗಾಗುವ ಅನ್ಯಾಯಗಳಿಗೆ ಧ್ವನಿಯಾಗಲು ಸಂಸ್ಥೆಯನ್ನೂ ಸ್ಥಾಪಿಸಿದರು. ಮತಾಂತರದ ವಿರುದ್ಧ ಜನಾಂದೋಲನ ನಡೆಸಿ ಬೀದಿಗಿಳಿದು ಹೋರಾಡಿದ ಪರಿಣಾಮ ಆಡಳಿತ ಅಧಿಕಾರಿಗಳ ಅನೇಕ ಆಟಗಳು ಕೊನೆಯಾದವು. ವಿದ್ಯಾಸಂಸ್ಥೆಗಳಲ್ಲಿ ಆಂಗ್ಲರ ಮತನಂಬಿಕೆಗಳನ್ನು ಪಠ್ಯದ ಭಾಗವಾಗಿ ರೂಪಿಸಲು ನಡೆಸಿದ ಸಂಚನ್ನು ಬಯಲಿಗೆಳೆದು ಸರಕಾರಿ ಉದ್ಯೋಗ ಸಿಗಲು ತಮ್ಮ ಮತದ ಅಂಶಗಳು ತಿಳಿದಿರಬೇಕೆಂಬ ಬ್ರಿಟಿಷ್ ನಿಯಮದ ವಿರುದ್ಧ ಗುಡುಗಿ, ಕುನೀತಿಯನ್ನು ಖಂಡಿಸಿ ಪತ್ರಸಮರ ನಡೆಸಿದ ಚೆಟ್ಟಿ ಗೆಲುವಿನ ನಗೆ ಬೀರಿದರು. ರೈತರ ಪ್ರತಿಯೊಂದು ಉತ್ಪನ್ನದ ಮೇಲೂ ಅರ್ಥವಿಲ್ಲದ ತೆರಿಗೆ ಹೇರಿ ಬೆಳೆನಾಶಗೈದು ಜೈಲುಶಿಕ್ಷೆ ವಿಧಿಸಿದ ದುರಾಡಳಿತದ ಬಗ್ಗೆ ಇಂಗ್ಲೆಂಡ್‌ಗೆ ಸಾಧಾರಪತ್ರ ರವಾನಿಸಿದ ಪರಿಣಾಮ ತನಿಖೆಗೆ ಆದೇಶ ಹೊರಬಿತ್ತು. ಆಂಗ್ಲ ಸರಕಾರದ ಮೋಸದ ವಿರುದ್ಧ ಇಂಗ್ಲೆಂಡ್‌ಗೆ ಪತ್ರ ರವಾನಿಸಿ ವಿಚಾರಣೆ ನಡೆಸುವಂತೆ ಮಾಡಿದ ಚೆಟ್ಟಿ ಸಾಧನೆ ಸಾಮಾನ್ಯವಲ್ಲ. ಸಾಮಾಜಿಕವಾಗಿಯೂ ಗುರುತಿಸಿ ಆಡಂಬರರಹಿತ ಮದುವೆ, ವಿಧವಾ ವಿವಾಹ, ಮಹಿಳಾ ಶಿಕ್ಷಣವನ್ನು ಪ್ರೋತ್ಸಾಹಿಸಿ ತಮ್ಮ ಆದಾಯದ ಬಹುಪಾಲನ್ನು ದುರ್ಬಲರ ಏಳಿಗೆಗಾಗಿಯೇ ಮೀಸಲಿಟ್ಟ ಮಹಾತ್ಮರವರು. ಸ್ವಾತಂತ್ರ‍್ಯ ಸಂಗ್ರಾಮದ ಸಂದರ್ಭದಲ್ಲಿ ಹೋರಾಟಗಾರರ ಸರ್ವವಿಧ ಕ್ಷೇಮದ ಜವಾಬ್ದಾರಿಯ ಹೊಣೆಹೊತ್ತು ಬದುಕಿನ ಅಂತಿಮ ಕ್ಷಣದವರೆಗೂ ನಾಡಿಗಾಗಿ ದುಡಿದು ಅಸುನೀಗಿದ ಗಾಜುಲು ಲಕ್ಷ್ಮೀನರಸು ಚೆಟ್ಟಿ, ದೇಶದ ಹೆಮ್ಮೆ.
'ಬ್ರಿಟಿಷ್ ವೈಸ್‌ರಾಯ್ ಮೇಲೆ ಬಾಂಬ್ ಎಸೆದಿರುವ ಬಗ್ಗೆ ಯಾವುದೇ ಅನುಕಂಪ, ಪಶ್ಚಾತ್ತಾಪ ಬೇಡ. ದೇಶವನ್ನು ಅಪಮಾನಿಸುವವನು ವಧಾರ್ಹ. ಬ್ರಿಟಿಷ್ ಸರಕಾರ ನನ್ನ ತಲೆಗೆ ಘೋಷಿಸಿರುವ ಹಣಕ್ಕೆ ಮರುಳಾಗಿ ಯಾರಾದರೂ ಹಿಡಿಯಲು ಪ್ರಯತ್ನಿಸಿದರೆ ಅವರನ್ನೂ ಸುಮ್ಮನೆ ಬಿಡಲಾರೆ. ನಾನು ಮಾಡುತ್ತಿರುವ ಯಾವ ಕಾರ್ಯಗಳೂ ನನ್ನ ವೈಯಕ್ತಿಕ ಏಳಿಗೆಗಾಗಿ ಅಲ್ಲ. ಬ್ರಿಟಿಷ್ ಏಜೆಂಟರಿಂದ ಸಂಗ್ರಹಿಸುತ್ತಿರುವ ದುಡ್ಡು ಅನ್ಯಾಯದ ಭಾಗವಲ್ಲ. ನಾಡಿನ ಸ್ವಾತಂತ್ರ‍್ಯಕ್ಕಾಗಿ ನಡೆಸುತ್ತಿರುವ ಹೋರಾಟಕ್ಕಷ್ಟೇ ಆ ಹಣದ ಬಳಕೆ. ನೆನಪಿಡಿ, ನಾನಂತೂ ಯಾವುದೇ ಕಾರಣಕ್ಕೂ ಬ್ರಿಟಿಷ್ ಪಡೆಗಳಿಗೆ ಸಿಕ್ಕಿಬೀಳುವುದಿಲ್ಲ. ಹೆತ್ತತಾಯಿಯ ಮೇಲಾಣೆ' ಎಂಬ ಶಕ್ತಿಶಾಲಿ ನುಡಿಗಳಿಂದ ಸಹಕ್ರಾಂತಿಕಾರಿಗಳಲ್ಲಿ ಉಡುಗಿದ್ದ ವಿಶ್ವಾಸವನ್ನು ಮತ್ತೆ ಜಾಗೃತಗೊಳಿಸಿದ ಅಜೇಯ ಹೋರಾಟಗಾರ ಠಾಕೂರ್ ಜೋರಾವರ ಸಿಂಗ್, ರಾಜಸ್ಥಾನದ ಆಜಾದರೆಂದೇ ಸುಪ್ರಸಿದ್ಧರು. ದೇವಪುರದ ಠಾಕೂರ್ ಕೃಷ್ಣಸಿಂಗ್ ದಂಪತಿಗಳಿಗೆ ಜನಿಸಿದ ಜೋರಾವರ ಸಿಂಗ್, ಮಾಧ್ಯಮಿಕ ಶಿಕ್ಷಣ ಪೂರೈಸುತ್ತಲೇ ತಂದೆಯನ್ನು ಕಳೆದುಕೊಂಡರು. ಜೋಧಪುರ ಸಂಸ್ಥಾನದಲ್ಲಿ ಲೆಕ್ಕಿಗನಾಗಿ ವೃತ್ತಿಜೀವನ ಆರಂಭಿಸಿದ ಸಿಂಗ್, ಅಲ್ಲಿ ಪರಿಚಿತರಾದ ಭಾಯಿ ಬಾಲಮುಕುಂದರಿಂದ ಪ್ರೇರಿತರಾದರು. ಭಾರತದ ಸಮಕಾಲೀನ ಸ್ಥಿತಿಗತಿ, ಬ್ರಿಟಿಷರ ವಿಚಿತ್ರ ಆಡಳಿತದಿಂದ ನೊಂದಿರುವ ಬಡಜನರ ಕಣ್ಣೀರ ಕಥೆಗಳಿಂದ ನೊಂದ ಜೋರಾವರರು, ಸಮರಭೂಮಿಗೆ ಧುಮುಕಲು ಸನ್ನದ್ಧರಾದರು. ರಾಸ್ ಬಿಹಾರಿ ಬೋಸರ ಭೇಟಿಯ ಬಳಿಕ ತಮ್ಮ ಜೀವನವನ್ನು ದೇಶಸೇವೆಗೆಂದೇ ಮೀಸಲಿಡಲು ನಿಶ್ಚಯಿಸಿ ರಾಜಸ್ಥಾನದ ಊರೂರು ತಿರುಗಾಡಿ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಆಸಕ್ತಿಯಿರುವ ತರುಣರನ್ನು ಗುರುತಿಸಿ ಭಾರತ ಸೇವಾ ಸಂಘ ಸ್ಥಾಪಿಸಿದರು.
ಲಕ್ಷಾಂತರ ಭಾರತೀಯರ ಹೊಟ್ಟೆಯ ಮೇಲೆ ಹೊಡೆದು ಆನೆಯ ಮೇಲೇರಿ ತನ್ನ ಸಂಭ್ರಮವನ್ನು ಆಚರಿಸಿದ ವೈಸ್‌ರಾಯ್ ಹಾರ್ಡಿಂಜನ ಮೆರವಣಿಗೆಯ ಮೇಲೆ ಬಾಂಬೆಸೆಯುವ ಅಪಾಯಕಾರಿ ಕಾರ್ಯದಲ್ಲಿ ಯಶಸ್ವಿಯಾದ ಸಿಂಗ್, ಮತ್ತೆಂದೂ ಹಿಂತಿರುಗಿ ನೋಡಲಿಲ್ಲ. ಕ್ರಾಂತಿಕಾರ್ಯಕ್ಕೆ ಆರ್ಥಿಕ ಸಮಸ್ಯೆ ತಡೆಯಾದಾಗ ರಾಜಸ್ಥಾನ ಮತ್ತು ಬಿಹಾರದ ಬ್ರಿಟಿಷ್ ಪರ ಶ್ರೀಮಂತರನ್ನು ದೋಚಿ ಭೂಗತರಾದರು. ಲಕ್ಷ ಲಕ್ಷ ಬಹುಮಾನ ಘೋಷಿಸಿ ಬ್ರಿಟಿಷರನ್ನು ಸಂತುಷ್ಟಗೊಳಿಸಲು ಯತ್ನಿಸಿದ ಕೆಲವು ದೇಸೀ ಸಂಸ್ಥಾನಗಳ ರಾಜರಿಗೂ ಎಚ್ಚರಿಕೆ ರವಾನಿಸಿದ ಜೋರಾವರರು, ಹೋರಾಟ ಯಾರಿಗಾಗಿ ಎಂದು ಪ್ರಶ್ನಿಸಿದರು. ಪೋಲೀಸರು ಹಿಂದೆ ಬಿದ್ದಿರುವ ಸುದ್ದಿ ತಿಳಿಯುತ್ತಲೇ ಗುಡ್ಡ, ಕಾಡು, ನದಿಯೆನ್ನದೆ ದಿನಕ್ಕೆ ಐವತ್ತು ಕಿ.ಮೀ. ಓಡಿದ ಸಿಂಗ್, ಬಾಬಾ ಅಮರದಾಸ ಬೈರಾಗಿಯಾಯೆಂಬ ಹೆಸರಲ್ಲಿ ಜನಪ್ರಿಯರಾದರು. ತಾವಾರೆಂದು ಹೊರಜಗತ್ತಿಗೆ ತೋರ್ಪಡಿಸದೆ ಸಾಧುವಿನ ವೇಷದಲ್ಲಿದ್ದುಕೊಂಡೇ ಸ್ವಾತಂತ್ರ್ಯ ಹೋರಾಟಕ್ಕೆ ವೇಗವಿತ್ತರು. ತಮಗೆ ಗಲ್ಲುಶಿಕ್ಷೆ ವಿಧಿಸಿದ ನ್ಯಾಯಾಧೀಶರಿಗೆ, 'ಆರೋಪಿಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ ಬಳಿಕ ಶಿಕ್ಷೆ ವಿಧಿಸಬೇಕಲ್ಲವೇ' ಎಂದು ಪತ್ರ ಬರೆದು ಅಣಕಿಸಿದರು. ಬ್ರಿಟಿಷ್ ಮಾಹಿತಿದಾರನೊಬ್ಬ ತಮ್ಮ ಹಿಂದೆ ಬಿದ್ದಿರುವ ಅರಿವಾಗುತ್ತಲೇ ಜಾಗೃತರಾದ ಜೋರಾವರರು ಆತನನ್ನು ತಿದ್ದಿ ಬುದ್ಧಿ ಹೇಳಿದರೂ ಸಫಲವಾಗದಿದ್ದಾಗ ವಧಾಮಾರ್ಗ ಹಿಡಿದ ಪರಿಣಾಮ ಕಂಡಲ್ಲಿ ಗುಂಡು ಆದೇಶ ಹೊರಬಿತ್ತು. ಯಾವುದಕ್ಕೂ ಜಗ್ಗದೆ ಯುವಕರನ್ನು ಸಂಘಟಿಸುತ್ತಲೇ ಮುಂದುವರೆದ ಸಿಂಗ್ ಬಂಧನ ಆಂಗ್ಲರ ಪಾಲಿಗೆ ಕೊನೆವರೆಗೂ ಕನಸಾಗಿಯೇ ಉಳಿಯಿತು. ಅಸೌಖ್ಯದ ಹಿನ್ನೆಲೆಯಲ್ಲಿ ಕೊನೆಯುಸಿರೆಳೆದ ಠಾಕೂರ್ ಜೋರಾವರ ಸಿಂಹರ ತ್ಯಾಗ ಸದಾ ಸ್ಮರಣೀಯ. ನಾಡಿನ ಸಮುನ್ನತಿಗಾಗಿ ತಮ್ಮ ಸಂಪತ್ತನ್ನು ಧಾರೆಯೆರೆದ ಗಾಜುಲು ಲಕ್ಷ್ಮೀನರಸು ಚೆಟ್ಟಿಯವರ ಜನ್ಮದಿನ ಮತ್ತು ಕ್ರಾಂತಿಕಾರ್ಯಕ್ಕಾಗಿ ಜೀವನವನ್ನೇ ಮುಡುಪಿಟ್ಟ ಠಾಕೂರ್ ಜೋರಾವರ ಸಿಂಹರ ಸ್ಮೃತಿದಿನ ಸಶಕ್ತ ಭಾರತ ನಿರ್ಮಾಣದತ್ತ ಹೆಜ್ಜೆ ಹಾಕುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿ.