For the best experience, open
https://m.samyuktakarnataka.in
on your mobile browser.

ರಾಹುಲ್‌ ಗಾಂಧಿಗೆ ಕೊಲೆ ಬೆದರಿಕೆ ಹೊಸದೇನಲ್ಲ

04:04 PM Sep 18, 2024 IST | Samyukta Karnataka
ರಾಹುಲ್‌ ಗಾಂಧಿಗೆ ಕೊಲೆ ಬೆದರಿಕೆ ಹೊಸದೇನಲ್ಲ

ಬೆಂಗಳೂರು: ದೂಷಣೆ, ನಿಂದನೆ, ಸುಳ್ಳು ಆರೋಪ ಮತ್ತು ಚಾರಿತ್ರ್ಯಹನನದ ಮೂಲಕ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ನಮ್ಮ ಪಕ್ಷದ ನೇತಾರರಾದ ರಾಹುಲ್‌ ಗಾಂಧಿ ಅವರನ್ನು ಹಣಿಯಲು ಸತತವಾಗಿ ಪ್ರಯತ್ನಪಡುತ್ತಾ ಬಂದ ಕೇಂದ್ರ ಬಿಜೆಪಿ, ಈಗ ನೇರವಾಗಿ ಕೊಲೆ ಬೆದರಿಕೆ ಒಡ್ಡುವಂತಹ ಹೀನಾತಿಹೀನ ಪ್ರಯತ್ನಕ್ಕೆ ಇಳಿದಂತೆ ಕಾಣುತ್ತಿದೆ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಇದು ರಾಹುಲ್ ಗಾಂಧಿಯವರು ಮತ್ತು ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಎದುರಿಸಲಾಗದೆ ಇರುವ ಬಿಜೆಪಿಯ ನೈತಿಕ ಮತ್ತು ಸೈದ್ಧಾಂತಿಕ ದಿವಾಳಿತನವನ್ನು ತೋರುತ್ತದೆ ಮಾತ್ರವಲ್ಲ, ಅವರೊಳಗೆ ಅಡಗಿರುವ ಕೊಲೆಗಡುಕ ಮನಸ್ಥಿತಿಯನ್ನು ಕೂಡಾ ಸೂಚಿಸುತ್ತದೆ. ದೇಶದ ಏಕತೆ ಮತ್ತು ಸಮಗ್ರತೆಗಾಗಿ ಪ್ರಾಣವನ್ನೇ ಬಲಿದಾನ ಮಾಡಿದ ಇಬ್ಬರು ಮಾಜಿ ಪ್ರಧಾನಿಗಳ ಕುಟುಂಬದಿಂದ ಬಂದಿರುವ ರಾಹುಲ್ ಗಾಂಧಿಯವರಿಗೆ ಕೊಲೆ ಬೆದರಿಕೆ ಹೊಸದೇನಲ್ಲ. ಇದರಿಂದ ಅವರು ಹೆದರುವುದೂ ಇಲ್ಲ. ‘‘ಭಯ ಪಡಬೇಡಿ’’ ‘‘ಡರೋ ಮತ್’’ ಎನ್ನುವುದೇ ಅವರ ಮಂತ್ರವಾಗಿದೆ.
ಕೊಲೆ ಬೆದರಿಕೆ ಹೊರತಾಗಿಯೂ ಹಿಂದಿನ ಕೇಂದ್ರದ ಬಿಜೆಪಿ ಸರ್ಕಾರ ಅವರ ಭದ್ರತಾ ವ್ಯವಸ್ಥೆಯನ್ನು ಸಡಿಲಗೊಳಿಸಲಾಗಿತ್ತು. ಇದರಿಂದ ರಾಹುಲ್‌ ಗಾಂಧಿ ಅವರು ಬೆದರಲಿಲ್ಲ. ಇಂತಹ ಬೆದರಿಕೆಗಳ ಹೊರತಾಗಿಯೂ ಸಾಮಾನ್ಯ ಜನರನ್ನು ಭೇಟಿಮಾಡುವುದನ್ನು ನಿಲ್ಲಿಸಿಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಹಿನ್ನಡೆಯಾದ ನಂತರ ರಾಹುಲ್ ಗಾಂಧಿಯವರಿಗೆ ಕೊಲೆ ಬೆದರಿಕೆ ಹೆಚ್ಚಾಗಿದೆ. ದೇಶದಲ್ಲಿ ಸಂಸತ್‌ನ ಒಳಗೆ ಮತ್ತು ಹೊರಗೆ ಮಾತ್ರವಲ್ಲ ವಿದೇಶಗಳಲ್ಲಿ ಕೂಡಾ ಅವರ ಮಾತುಗಳನ್ನು ಜಾಗತಿಕ ನಾಯಕರು ಗಂಭೀರವಾಗಿ ಸ್ವೀಕರಿಸುತ್ತಿರುವುದು ಬಿಜೆಪಿ ಮತ್ತು ನರೇಂದ್ರ ಮೋದಿ ಅವರನ್ನು ತಲ್ಲಣಕ್ಕೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಂದ ಕೊಲೆ ಬೆದರಿಕೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಿಜೆಪಿ ನಾಯಕ ತಾರ್ ವಿಂದರ್ ಸಿಂಗ್ ಮಾರ್ವಾ ಎಂಬಾತ ಈ ತಿಂಗಳ ಹನ್ನೊಂದರಂದು ನೇರವಾಗಿ ರಾಹುಲ್‌ ಗಾಂಧಿ ಅವರಿಗೆ ಕೊಲೆ ಬೆದರಿಕೆ ಒಡ್ಡಿದ್ದಾನೆ. ‘‘ಸರಿಯಾಗಿ ನಡೆದುಕೊಳ್ಳದಿದ್ದಲ್ಲಿ ಇಂದಿರಾ ಗಾಂಧಿಯವರಿಗೆ ಆಗಿರುವ ಗತಿಯೇ ನಿನಗೆ ಆಗುತ್ತದೆ’’ ಎಂದು ಆತ ಹೇಳಿರುವುದು ನೇರವಾಗಿ ಕೊಲೆ ಬೆದರಿಕೆಯಾಗಿದೆ.
ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ರವನೀತ್ ಬಿಟ್ಟು ಅವರು ರಾಹುಲ್ ಗಾಂಧಿಯವರನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ. ಇದು ಸಾರ್ವಜನಿಕವಾಗಿ ರಾಹುಲ್ ಗಾಂಧಿಯವರ ವಿರುದ್ಧ ಜನರನ್ನು ಎತ್ತಿಕಟ್ಟಿ ಹತ್ಯೆ-ಹಲ್ಲೆಗೆ ಪ್ರಚೋದನೆ ನೀಡುವ ಪ್ರಯತ್ನ ಎನ್ನುವುದು ನಿಸ್ಸಂಶಯ. ಈ ತಿಂಗಳ ಹದಿನಾರರಂದು ಮಹಾರಾಷ್ಟ್ರ ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆಯ ಶಾಸಕ ಸಂಜಯ್ ಗಾಯಕವಾಡ್ “ರಾಹುಲ್ ಗಾಂಧಿಯವರ ನಾಲಗೆ ಕತ್ತರಿಸಿದವರಿಗೆ 11 ಲಕ್ಷ ರೂಪಾಯಿಗಳ ಬಹುಮಾನ ಕೊಡುತ್ತೇನೆ’’ ಎಂದು ಘೋಷಿಸಿದ್ದಾನೆ. ಇದು ಕೂಡಾ ನೇರವಾದ ಕೊಲೆ ಬೆದರಿಕೆಯಾಗಿದೆ. ಈ ದುಷ್ಟನನ್ನು ಪೊಲೀಸರು ತಕ್ಷಣ ಕೊಲೆ ಆರೋಪದಡಿ ಬಂಧಿಸಿ ಜೈಲಿಗೆ ಹಾಕಬೇಕು ಎಂದು ಮಹಾರಾಷ್ಟ್ರದ ಸಿಎಂ ಅವರನ್ನು ಒತ್ತಾಯಿಸುತ್ತೇನೆ. ಉತ್ತರಪ್ರದೇಶ ಸರ್ಕಾರದ ಸಚಿವ ರಘುರಾಜ್ ಸಿಂಗ್ ಅವರು ಈ ತಿಂಗಳ ಹದಿನಾರರಂದು ‘‘ರಾಹುಲ್ ಗಾಂಧಿಯವರು ದೇಶದ ನಂಬರ್ ಒನ್ ಭಯೋತ್ಪಾದಕ ಎಂದು ಹೇಳಿದ್ದಾರೆ. ರಾಹುಲ್‌ ಗಾಂಧಿ ಅವರ ವಿರುದ್ಧದ ಈ ಎಲ್ಲ ಹೇಳಿಕೆಗಳು ನೇರವಾದ ಕೊಲೆ ಬೆದರಿಕೆ ಎನ್ನುವುದು ಸ್ಪಷ್ಟವಾಗಿದ್ದರೂ ಇಲ್ಲಿಯವರೆಗೆ ಪೊಲೀಸರು ಇವರಲ್ಲಿ ಯಾರನ್ನೂ ಬಂಧಿಸಿಲ್ಲ. ಕೆಲವು ಪ್ರಕರಣಗಳಲ್ಲಿ ಪೊಲೀಸರು ಕಾಟಾಚಾರಕ್ಕೆ ಪ್ರಕರಣಗಳನ್ನು ದಾಖಲಿಸಿ ಸುಮ್ಮನಾಗಿದ್ದಾರೆ. ಮಹಾರಾಷ್ಟ್ರದಲ್ಲಿ ನಾಲಗೆ ಕತ್ತರಿಸುವ ಬೆದರಿಕೆ ಒಡ್ಡಿದ್ದ ಶಾಸಕ ಸಂಜಯ್ ಗಾಯಕ್‌ವಾಡ ಇನ್ನಷ್ಟು ಉತ್ತೇಜಿತನಾಗಿ ತನ್ನ ವಿರುದ್ದ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ನಾಯಕರನ್ನು ಹೂತು ಹಾಕುತ್ತೇನೆ ಎಂದು ಹೇಳಿಕೆ ನೀಡಿದ್ದಾನೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಕೊಲೆಗಡುಕ ಮನಸ್ಸಿನ ನಾಯಕರ ಜೊತೆ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಕೂಡಾ ಷಾಮೀಲಾಗಿರುವುದು ಸ್ಪಷ್ಟವಾಗಿದೆ. ದೇಶ-ವಿದೇಶಗಳಲ್ಲಿ ರಾಹುಲ್ ಗಾಂಧಿಯವರ ಜನಪ್ರಿಯತೆ ಬಿಜೆಪಿ ನಾಯಕರ ನಿದ್ದೆ ಕೆಡಿಸಿದೆ. ಜಮ್ಮು - ಕಾಶ್ಮೀರ ಮತ್ತು ಮಹಾರಾಷ್ಟ್ರ ಸೇರಿದಂತೆ ಸದ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ರಾಹುಲ್‌ ಗಾಂಧಿಯವರ ಪ್ರಚಾರ ಭಾಷಣಗಳನ್ನು ತಡೆಯುವುದು ಕೂಡಾ ಈ ಬೆದರಿಕೆಯ ಹಿಂದಿನ ದುರುದ್ದೇಶವಾಗಿದೆ ಎನ್ನುವುದು ಸ್ಪಷ್ಟ. ಇಂತಹ ಹೇಳಿಕೆಗಳನ್ನು ನಾನು ಇಲ್ಲವೇ ನಮ್ಮ ಪಕ್ಷ ಮಾತ್ರವಲ್ಲ, ಸಂವಿಧಾನದ ಮೇಲೆ ಮುಖ್ಯವಾಗಿ ಮನುಷ್ಯತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಖಂಡಿಸಬೇಕು ಮತ್ತು ಸರ್ಕಾರ ತಕ್ಷಣ ಇಂತಹವರ ವಿರುದ್ಧ ಕಾನೂನುಕ್ರಮದ ಮೂಲಕ ದಂಡಿಸಬೇಕು. ಬಿಜೆಪಿ ಮತ್ತು ಮಿತ್ರಪಕ್ಷಗಳ ನಾಯಕರ ಹೇಳಿಕೆಗಳಿಂದ ನನಗೇನು ಆಶ್ಚರ್ಯವಾಗಿಲ್ಲ. ಕತ್ತರಿಸುವುದು, ಹೊಡೆಯುವುದು, ಕಡಿಯುವುದು, ಕೆಡುವುದು….. ಇವೆಲ್ಲವೂ ಮನುವಾದಿಗಳ ಭಾಷೆ. ಇದು ಸಂವಿಧಾನದ ಇಲ್ಲವೇ ಪ್ರಜಾಪ್ರಭುತ್ವವಾದಿಗಳ ಭಾಷೆ ಅಲ್ಲ. ಇವರೆಲ್ಲರೂ ನಂಬಿರುವುದು ಮತ್ತು ಒಪ್ಪಿರುವುದು ಮನುಧರ್ಮ ಶಾಸ್ತ್ರವನ್ನು. ವೇದಗಳ ಅಧ್ಯಯನವನ್ನು ಮನು ನಿಷೇಧಿಸಿದ್ದ, ವೇದಗಳನ್ನು ಕೇಳುವ ಶೂದ್ರರ ಕಿವಿಗೆ ಕಾದ ಸೀಸವನ್ನು ಸುರಿಯಬೇಕು ಮತ್ತು ವೇದಗಳನ್ನು ಹೇಳುವ ನಾಲಿಗೆಯನ್ನು ಕತ್ತರಿಸಿಹಾಕಬೇಕು ಎಂದು ಮನುಧರ್ಮ ಶಾಸ್ತ್ರದ ನಂತರ ಬಂದ ಧರ್ಮ ಶಾಸ್ತ್ರದಲ್ಲಿ ಸ್ಪಷ್ಟವಾಗಿ ಹೇಳಿದೆ. ಶೂದ್ರ ಶಂಬೂಕ ತಪಸ್ಸು ಮಾಡಿದನೆಂಬ ಕಾರಣಕ್ಕೆ ತಲೆ ಕಡಿದ ಪರಂಪರೆ ಅವರದು. ಈ ತಲೆ ಕಡಿಯುವ, ನಾಲಗೆ ಕತ್ತರಿಸುವ, ಕೆಡವಿ ಹಾಕುವ, ಕೊಚ್ಚಿಹಾಕುವ ಭಾಷೆಗಳನ್ನು ಈ ಮನುವಾದಿಗಳು ಮನುಧರ್ಮಶಾಸ್ತ್ರದಿಂದಲೇ ಬಳುವಳಿಯಾಗಿ ಪಡೆದಿದ್ದಾರೆ. ಈ ಕಾರಣಕ್ಕಾಗಿಯೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವೇದಗಳನ್ನು ಸುಟ್ಟುಹಾಕಿ ಸಂವಿಧಾನವನ್ನು ನಮ್ಮ ಕೈಗೆ ಕೊಟ್ಟರು. ಇಂತಹ ಕೊಲೆಗಡುಕರು ಮತ್ತು ಹಿಂಸಾವಾದಿಗಳನ್ನು ಶಿಕ್ಷಿಸಲು ನಮ್ಮ ಕೈಯಲ್ಲಿರುವ ದೊಡ್ಡ ಅಸ್ತ್ರವೆಂದರೆ ನಮ್ಮ ಸಂವಿಧಾನ. ಅದನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗಿದೆ ಎಂದಿದ್ದಾರೆ.

Tags :