ರಾಹುಲ್ ನಂ.೧ ಭಯೋತ್ಪಾದಕ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕದಲ್ಲಿ ಸಿಖ್ಖರ ಬಗ್ಗೆ ನೀಡಿರುವ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಭಾರಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ರಾಹುಲ್ ಹೇಳಿಕೆ ಬಗ್ಗೆ ಅಸಮಾಧಾನಗೊಂಡಿರುವ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು, ರಾಹುಲ್ ನಂಬರ್ ವನ್ ಭಯೋತ್ಪಾದಕ ಎಂದು ಕಿಡಿಕಾರಿದ್ದಾರೆ. ಯಾವಾಗಲೂ ವಿವಾದದ ಕಿಡಿ ಹೊತ್ತಿಸಿ ದೇಶದ ಸಾರ್ವಭೌಮತೆಗೆ ಭಂಗ ಉಂಟು ಮಾಡುವ ರಾಹುಲ್‌ಗೆ ಬಹುಮಾನ ಘೋಷಿಸಬೇಕೆಂದೂ ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ಸಿಖ್ಖರನ್ನು ವಿಭಜಿಸಲು ಪ್ರಯತ್ನಿಸಿದ್ದಾರೆ. ಸಿಖ್ಖರಿಗೆ ಯಾವುದೇ ಪಕ್ಷದೊಂದಿಗೆ ಸಂಬಂಧ ಇಲ್ಲ. ರಾಹುಲ್ ಅವರದು ಬೆಂಕಿ ಹಚ್ಚುವ ಕೆಲಸವಾಗಿದ್ದರಿಂದ ಅವರನ್ನು ದೇಶದ ನಂಬರ್ ವನ್ ಭಯೋತ್ಪಾದಕನೆಂದು ಘೋಷಿಸಬೇಕೆಂದು ಕೇಂದ್ರ ರೇಲ್ವೆ ಹಾಗೂ ಆಹಾರ ಸಂಸ್ಕರಣ ಸಚಿವ ಬಿಟ್ಟು ಆಗ್ರಹಿಸಿದ್ದಾರೆ.
ದೇಶದ ಶತ್ರುಗಳು ಯಾವಾಗಲೂ ಗುಂಡುಗಳನ್ನು ಬಳಸುತ್ತಾರೆ. ಪ್ರತಿಬಾರಿಯೂ ಕೊಲ್ಲಲು ಪ್ರಯತ್ನಿಸುತ್ತಾರೆ. ವಿಮಾನಗಳು, ರೈಲುಗಳು ಹಾಗೂ ರಸ್ತೆ ಮೇಲೆ ಓಡಾಡುವ ವಾಹನಗಳನ್ನು ಸ್ಫೋಟಿಸಲು ಯತ್ನಿಸುತ್ತಾರೆ. ಅಂತಹವರು ರಾಹುಲ್ ಅವರನ್ನು ಬೆಂಬಲಿಸಲು ಮುಂದಾದಾಗ ನೀವೇ ಊಹಿಸಿ, ರಾಹುಲ್ ಗಾಂಧಿ ದೇಶದ ನಂಬರ್ ವನ್ ಭಯೋತ್ಪಾದಕರಲ್ಲವೇ? ಯಾರ ತಲೆಗಾದರೂ ಬಹುಮಾನ ನೀಡುವುದಿದ್ದರೆ, ತನಿಖಾ ಸಂಸ್ಥೆಗಳು ಯಾರನ್ನಾದರೂ ದೇಶದ ಶತ್ರುಗಳೆಂದು ಪರಿಗಣಿಸುವುದಿದ್ದರೆ ಅದು ರಾಹುಲ್ ಗಾಂಧಿಯವರಾಗಬೇಕು ಎಂದವರು ವಿವರಿಸಿದ್ದಾರೆ.