ರೆಂಟಾನಂದ ಮಹಾತ್ಮೆ
ಭಾನುವಾರ ಸಂಜೆ ಮನೆಗೆ ಬರಲೇಬೇಕೆಂದು ವಿಶ್ವ ಒತ್ತಾಯ ಮಾಡಿದ್ದ. ಕಾರಣ ವಿಶಾಲು ಹೀರೇಕಾಯಿ ಬೋಂಡ ಮಾಡುವ ಕಾರ್ಯಕ್ರಮ ಇತ್ತು. ನನಗೆ ಹೀರೇಕಾಯಿ ಬೋಂಡ ತುಂಬಾ ಇಷ್ಟ ಅಂತ ವಿಶ್ವನಿಗೆ ಗೊತ್ತು. ಹೀಗಾಗಿ ನಾನು ಸಮಯಕ್ಕೆ ಸರಿಯಾಗಿ ಅಲ್ಲಿ ಹಾಜರಿದ್ದೆ. ಘಮಘಮ ಪರಿಮಳ, ಅಡಿಗೆ ಮನೆಯಿಂದ ಬರುತ್ತಿತ್ತು.
“ಬನ್ನಿ ಬನ್ನಿ, ಮೊದಲ ಪ್ಲೇಟ್ ನಿಮ್ಗೇನೇ, ಸ್ಯಾಂಪಲ್ ನೋಡಿ, ಉಪ್ಪು, ಖಾರ ಸರಿ ಇದ್ಯಾ ಹೇಳಿ?” ಎಂದು ವಿಶಾಲು ಬೋಂಡವನ್ನು ಎರಡು ತಟ್ಟೆಗೆ ಹಾಕಿ ಕೊಟ್ಟಳು. ನಾನು, ವಿಶ್ವ ಬೋಂಡ ತಿನ್ನುತ್ತಿರುವಾಗ ಅದರ ಬಿಸಿಗೆ “ಹಾ ಹಾ” ಎಂದು ಆನಂದದ ಉದ್ಗಾರ ಮಾಡುತ್ತಿದ್ದೆವು. ಉಪ್ಪು ಖಾರ ಎಲ್ಲಾ ಸರಿ ಇತ್ತು.
“ಸೂಪರ್ ಆಗಿದೆ ವಿಶಾಲು, ನಿಮ್ಮ ಗಂಡನಿಗೆ ಇನ್ನೂ ಸ್ವಲ್ಪ ಕೊಡಿ ನನಗೆ ಸಾಕು” ಎಂದೆ.
“ಇಂಗು, ತೆಂಗು ಇದ್ರೆ ಮಂಗಾನೂ ಅಡಿಗೆ ಮಾಡುತ್ತೆ” ಎಂದು ವಿಶ್ವ ಗೊಣಗಿದ.
“ನಾನು ಮನುಷ್ಯರಿಗೆ ಮಾತ್ರ ಅಡಿಗೆ ಮಾಡ್ತೀನಿ” ಎಂದು ವಿಶಾಲು ಕುಟುಕಿದಳು.
“ಹೀರೇಕಾಯಿ ಸಿಹಿಯಾಗಿದ್ರೆ ಬೋಂಡಾ ಸವಿಯಾಗಿರುತ್ತೆ” ಎಂದು ವಿಶ್ವ ಮಡದಿಯನ್ನು ಮತ್ತೆ ಕೆಣಕಿದ.
“ನನ್ನ ಗಂಡನ ಕೋಟಾ ಮುಗೀತು, ಮತ್ತೆ ಬೋಂಡ ಕೊಡೋಲ್ಲ” ಎಂದಳು ವಿಶಾಲು.
“ಉಳಿದಿದ್ದು ಏನು ಮಾಡ್ತೀಯಾ?” ಎಂದ ವಿಶ್ವ ಆತಂಕದಲ್ಲಿ.
“ನಾಯಿಗೆ ಹಾಕ್ತೀನಿ ಅಥವಾ ನಿಮ್ಮ ಫ್ರೆಂಡಿಗೆ ಕೊಡ್ತೀನಿ” ಎಂದು ಒದರಿದಳು.
“ಯಾಕೆ?” ಎಂದು ನಾನು ಕೇಳಿದೆ.
ಅದಕ್ಕೆ ವಿಶಾಲು “ಈಗಲೇ ನನ್ನ ಗಂಡನಿಗೆ ಕೊಬ್ಬು ಜಾಸ್ತಿ ಇದೆ, ಬೋಂಡ ಜಾಸ್ತಿ ತಿಂದು ಕೊಲಾಸ್ಟ್ರಲ್ ಇನ್ನೂ ಜಾಸ್ತಿ ಆದರೆ ಇನ್ನೂ ಜಾಸ್ತಿ ತರಲೆ ಮಾಡ್ತಾರೆ” ಎಂದಳು.
“ಯಾಕ್ ವಿಶ್ವ, ಮನೇಲಿ ಜಗಳ ಆಯ್ತಾ?” ಎಂದು ನೇರವಾಗಿ ಕೇಳಿದೆ.
“ಬಾಡಿಗೆ ಮನೆನೇ ಬೆಸ್ಟು ಅಂತ ಹೇಳ್ತಿದ್ದಾಳೆ” ಎಂದ. ನನಗೂ ಅದು ನಿಜ ಎನ್ನಿಸಿತು.
“ನೀವೇನೇ ಹೇಳಿ, ಬಾಡಿಗೆ ಮನೆಯಲ್ಲಿ ಇರೋ ಆನಂದ, ಸೌಕರ್ಯ, ಸ್ವಂತ ಮನೆಯಲ್ಲಿ ಇರೋಲ್ಲ” ಎಂದಳು.
“ಹೌದು, ಪ್ರತಿ ಬ್ರೇಕ್ ಡೌನ್ ಅಟೆಂಡ್ ಮಾಡೋಕೂ ಓನರ್ ಇದ್ದೇ ಇರ‍್ತಾನೆ, ರಿಪೇರಿ ಮಾಡಿಸಿಕೊಡ್ತಾನೆ” ಎಂದೆ.
“ಆದರೆ ಅವನು ರಿಪೇರಿ ಖರ್ಚು ನಮ್ಮ ತಲೆ ಮೇಲೆ ಹಾಕ್ತಾನೆ” ಎಂದ ವಿಶ್ವ.
“ದುಡ್ಡು ಕೊಟ್ಟರೆ ಆಯ್ತು, ಆದರೆ ಜನ ರ‍್ಕೊಂಡ್ ಬಂದು ಸಣ್ಣ ಪುಟ್ಟ ರಿಪೇರಿ ಮಾಡ್ಸೋದು ಕಷ್ಟ ಇರುತ್ತೆ” ಎಂದು ನಾನು ವಿಶಾಲು ಕಡೆ ಮಾತಾಡಿದೆ.
“ಸ್ವಂತ ಮನೆಗೆ ಭಾರಿ ಇನ್‌ವೆಸ್ಟ್ಮೆಂಟ್ ಆಗುತ್ತೆ. ವರ್ಷ ವರ್ಷಕ್ಕೂ ಬಿಲ್ಡಿಂಗ್ ಡಿಪ್ರಿಷಿಯೆಟ್ ಆಗುತ್ತೆ” ಎಂದಳು.
“ಆದರೆ ಲ್ಯಾಂಡ್ ವ್ಯಾಲ್ಯೂ ಅಪ್ರಿಶಿಯೇಟ್ ಆಗುತ್ತಲ್ಲ?” ಎಂದು ವಿಶ್ವ ಮಡದಿಗೆ ಸವಾಲೆಸೆದ.
“ನೋಡು ವಿಶ್ವ, ಈ ಬೆಂಗಳೂರಿನಲ್ಲಿ ೩ ಬೆಡ್ ರೂಮ್ ಹೌಸು ಒಳ್ಳೆಯ ಲೊಕ್ಯಾಲಿಟಿಯಲ್ಲಿ ಇದ್ರೆ ೨ ಕೋಟಿ ರೂಪಾಯ್ ಆಗುತ್ತೆ.” ಎಂದೆ.
“ಅಷ್ಟು ದುಡ್ಡು ಎಲ್ಲಿಂದ ತರ‍್ತಾರೆ ನನ್ನ ಪತಿ ಮಹಾಶಯ?” ಎಂದಳು ವಿಶಾಲು.
“ಯಾಕೆ, ಬ್ಯಾಂಕ್‌ನವರು ಹುಡುಕಿಕೊಂಡು ಬಂದು ಸಾಲ ಕೊಡಲ್ವಾ? ೨ ಕೋಟಿ ಸಾಲ ಮಾಡಿದರೆ ಸಾಕು, ತೀರಿಸೋದು ಕಷ್ಟ ಅನ್ನಿಸಿದರೆ, ಕಟ್ಟಿದ ಮನೇನ ಬಾಡಿಗೆಗೆ ಕೊಡಬೇಕಾಗುತ್ತೆ” ಎಂದ ವಿಶ್ವ.
“ನೋಡು ವಿಶ್ವ, ನಾವು ಕಟ್ಟಿದ ಮನೆಗೆ ನಾವೇ ಥಟ್ಟನೆ ಎಂಟ್ರಿ ಕೊಡಬೇಕು. ಮಸಾಲೆ ದೋಸೆ ಬಿಸಿ ಇರುವಾಗಲೇ ತಿನ್ನಬೇಕು, ಹನಿಮೂನ್‌ನ್ನ ಮದುವೆ ಆದ್ ಕೂಡ್ಲೇ ಮುಗಿಸಿಕೊಳ್ಳಬೇಕು, ತಡ ಮಾಡಿದ್ರೆ ಬಿಸಿ ಇರಲ್ಲ” ಎಂದು ರೇಗಿಸಿದೆ.
“ಅವರಿಗೆ ಬಿಸಿ ಬೋಂಡ ಒಂದೇ ಗೊತ್ತಿರೋದು, ನೀವು ಹೇಳಿದ್ದು ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞ”.
“ಹೊಸ ಮನೆ ಕಟ್ಟಿ ಯಾರಿಗೋ ಬಾಡಿಗೆಗೆ ಕೊಡ್ತೀವಿ, ಅವರ ೧೦ ವರ್ಷಕ್ಕೆ ಬಿಟ್ಟು ಹೋಗುವಾಗ ಮನೆ ಸ್ಥಿತಿ ಏನ್ ಆಗಿರುತ್ತೆ? ಗೋಡೆ ತುಂಬಾ ಮೊಳೆಗಳು, ಇನ್ನು ಮಕ್ಕಳಿರುವ ಸಂಸಾರ ಆದ್ರೆ ಗೋಡೆಗೆ ಮ್ಯಾಪ್‌ಗಳನ್ನು ಗೀಚರ‍್ತಾರೆ, ಅದ್ನೆಲ್ಲ ಕ್ಲೀನ್ ಮಾಡೋಕೆ ಹಣ ಖರ್ಚು” ಎಂದೆ.
“ಹಾಗೇನಿಲ್ಲ ಮನೆ ಬಿಡೋವಾಗ, ನಾವು ಮುಂಚೆ ಹ್ಯಾಗ್ ಕೊಟ್ಟಿದ್ವೋ ಹಾಗೇ ಕೊಡಬೇಕಾಗುತ್ತೆ ಅಂತ ಕಂಡೀಷನ್ ಹಾಕಿ ಅಗ್ರಿಮೆಂಟ್ ಮಾಡಿದರೆ ಆಯ್ತು” ಎಂದ ವಿಶ್ವ.
“ಬಾಡಿಗೆ ಮನೇಲಿ ಇದ್ದೀಯ ಅಂತ ಇಟ್ಕೋ, ಕರೆಂಟ್ ಶಾರ್ಟ್ ಆಗಿ ಮನೆ ಮುಂದಿನ ಕಂಬದಲ್ಲಿ ಫ್ಯೂಸ್ ಹೋಯ್ತು, ನೀರಿನ ಬೋರ್‌ವೆಲ್ ಹಾಳಾಯ್ತು, ಆಗ ಓನರ್ ನೋಡ್ಕೊಳ್ತಾನೆ ನಮಗೆ ಪ್ರಾಬ್ಲಮ್ ಇರೋದೇ ಇಲ್ಲ” ಎಂದಾಗ ವಿಶ್ವ ಸುಮ್ಮನಾದ.
“ನೀರಿನ ಕಷ್ಟ ಯಾಕ್ ಕೇಳ್ತೀರ, ದಿನಕ್ಕೆ ಒಂದು ಗಂಟೆ ಬಿಡ್ತಾನೆ, ಅದು ಕಣ್ಣೀರು ಬಂದ್ಹಾಗ್ ಬರುತ್ತೆ, ತುಂಬಿಸಿ ಇಟ್ಕೊಳೋದ್ರಲ್ಲಿ ಸೊಂಟ ಬಾಗಿರುತ್ತೆ. ಓವರ್ ಹೆಡ್ ಟ್ಯಾಂಕ್‌ಗೆ ನೀರು ಸಾಕಾಗ್ತಿಲ್ಲ” ಎಂದಳು.
“ಅದಕ್ಕೆ ಸರ್ಕಾರ ಹೊಸದೊಂದು ರೂಲ್ಸ್ ಮಾಡ್ತಿದೆ. ಮನೆ ಮುಂದೆ ಕಾರು ನಿಲ್ಸಿ ಅದಕ್ಕೆ ಸ್ನಾನ ಮಾಡಿಸ ಬಾರದು, ನಾವೂ ಕೂಡ ಪ್ರತಿನಿತ್ಯ ಸ್ನಾನ ಮಾಡಬಾರದು”
“ಬಾಡಿಗೆ ಮನೇಲಿದ್ರೆ ನೀರಿನ ಪ್ರಾಬ್ಲಮ್ ಇರೊಲ್ವಾ?” ಎಂದು ವಿಶ್ವ ಮತ್ತೆ ಕೇಳಿದ.
“ದಪ್ಪ ಕೊಳಾಯಿ ಇದ್ದು ನೀರು ಚೆನ್ನಾಗಿ ಬರುತ್ತೆ ಅನ್ನೋ ಕಡೆ ಬಾಡಿಗೆ ಮನೆ ಹಿಡಿದ್ರಾಯ್ತು” ಎಂದಳು ವಿಶಾಲು.
“ವಿಧಿ ಇಲ್ಲ ನಿಜ, ಎಲ್ಲಿ ನೀರು ಸಿಗುತ್ತೋ ಅಲ್ಲಿಗೆ ಮನೆ ಶಿಫ್ಟ್ ಮಾಡು” ಎಂದೆ.
“ರೀ ಕುಡಿಯೋ ನೀರು ಶಾರದಮ್ಮನವರ ಬೋರ್‌ವೆಲ್‌ನಲ್ಲಿ ಚೆನ್ನಾಗಿ ಬರುತ್ತೆ. ಪ್ರತಿ ನಿತ್ಯ ೬ ಬಿಂದಿಗೆ ಸಿಹಿ ನೀರು ಅಲ್ಲಿಂದ ತಂದು ಬಿಡಿ” ಎಂದಳು ವಿಶಾಲು. ವಿಶ್ವನಿಗೆ ಶಾಕ್ ಆಯ್ತು.
“ಕುಡಿಯೋಕ್ ಆದ್ರೆ ಒಂದು ಬಿಂದಿಗೆ ಸಾಕು, ಆರು ಬಿಂದಿಗೆ ಯಾಕೆ?” ಎಂದು ವಿಶ್ವ ಕೇಳಿದ.
“ನೋಡಿ, ನಮ್ಮನೆ ಬರ‍್ವೆಲ್ ನೀರೆಲ್ಲ ಉಪ್ಪುಪ್ಪು, ಆ ನೀರಲ್ಲಿ ನಾನು ಸ್ನಾನ ಮಾಡಿದರೆ ತಲೆ ಕೂದಲೆಲ್ಲ ಉದರಿ ಹೋಗುತ್ತೆ, ಮುಖ ಕಪ್ಪಾಗುತ್ತೆ, ಅದಕ್ಕೆ ಸಿಹಿ ನೀರನ್ನ ಸ್ನಾನಕ್ಕೆ ಮೂರು ಬಿಂದಿಗೆ ಬಳಸ್ತೀನಿ,
ನನ್ನ ಸೀರೆಗಳನ್ನೆಲ್ಲ ತೊಳೆಯೋಕೆ ಒಂದೆರಡು ಬಿಂದಿಗೆ ಬೇಕು, ನಿಮ್ ಪ್ಯಾಂಟ್ ಬಿಡಿ ಕುಂಟೆ ನೀರಾದ್ರೂ ಬ್ರೆಟ್ ಆಗಿರುತ್ತೆ”
“ನೀರಿನ ಬವಣೆ ನನ್ನ ವರೆಗೂ ಬಂತಲ್ಲ” ಎಂದು ವಿಶ್ವ ಬೇಸರಿಸಿದ.
“ಅದಕ್ಕೆ ನಾನು ಹೇಳಿದ್ದು ಬಾಡಿಗೆ ಮನೆ ಆದ್ರೆ ಥಟ್ ಅಂತ ಖಾಲಿ ಮಾಡಬಹುದು, ಎಲ್ಲಿ ನೀರು ಇದ್ಯೋ ಅಲ್ಲಿಗೆ ಶಿಫ್ಟ್ ಆಗಬಹುದು” ಎಂದೆ.
“ಇದು ನಿನಗೆ ಲೇಟಾಗಿ ಹೆಂಗ್ ಹೊಳೀತು?” ಎಂದ.
“ಫೂಲ್ಸ್ ಬಿಲ್ಡ್ ಹೌಸಸ್ ಫಾರ್ ವೈಸ್ ಮ್ಯಾನ್ ಟು ಲಿವಿನ್” ಅಂತ ಇಂಗ್ಲೀಷ್ ಗಾದೆ ನೆನಪಾಯ್ತು ಎಂದೆ.