For the best experience, open
https://m.samyuktakarnataka.in
on your mobile browser.

ರೆಂಬೆ ಕೊಂಬೆ ಕಡಿಯಲು ಆಗ್ರಹಿಸಿ ಏಕಾಂಗಿ ಪ್ರತಿಭಟನೆ

07:55 PM Jul 27, 2024 IST | Samyukta Karnataka
ರೆಂಬೆ ಕೊಂಬೆ ಕಡಿಯಲು ಆಗ್ರಹಿಸಿ ಏಕಾಂಗಿ ಪ್ರತಿಭಟನೆ

ಮಂಗಳೂರು: ನಗರದ ವಿವಿಧ ರಸ್ತೆಗಳ ಇಕ್ಕೆಲಗಳಲ್ಲಿ ಅಪಾಯಕಾರಿಯಾಗಿ ಬಾಗಿರುವ ಮರಗಳ ರೆಂಬೆ-ಕೊಂಬೆಗಳನ್ನು ಕಡಿಯುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಶನಿವಾರ ನಗರದ ಕದ್ರಿ ಮಲ್ಲಿಕಟ್ಟೆಯ ರಸ್ತೆಬದಿ ಕುಳಿತುಕೊಂಡು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
‘ರಘುಪತಿ ರಾಘವ ರಾಜಾರಾಮ್ ಪತೀತ ಪಾವನ ಸೀತಾರಾಮ್.. ಕಾರ್ಪೋರೇಷನ್ ವಾಲೋಂಕೋ ಜ್ಞಾನ್ ದೇ ಭಗವಾನ್, ಈಶ್ವರ್ ಅಲ್ಲಾ ತೇರೇನಾಮ್… ಮಂಗಳೂರು ಕಾ ಕಾರ್ಪೋರೇಷನ್ ವಾಲೋಂಕೋ ಜ್ಞಾನ್ ದೇ ಭಗವಾನ್…’ ಎಂದು ಭಜನೆ ಹಾಡುವ ಮೂಲಕ ಪಾಲಿಕೆ ಆಡಳಿತವನ್ನು ಅಣಕಿಸಿದರು. ಹಿಂದು, ಮುಸ್ಲಿಂ, ಕ್ರೈಸ್ತ ಮತ ಧರ್ಮಗಳ ದೇವರ ಫೋಟೋಗಳನ್ನು ಇರಿಸಿ ಆರತಿ ಬತ್ತಿ ಹಚ್ಚಿ ಭಜನೆ ಮಾಡಿದರು.
ಮಂಗಳೂರು ನಗರದಲ್ಲಿ ಜನರಿಗೆ ಅಪಾಯವಾಗಿರುವ ಮರಗಳ ರೆಂಬೆಗಳನ್ನು ತೆರವು ಮಾಡುವಂತೆ ಅನೇಕ ಬಾರಿ ವಿನಂತಿಸಿದ್ದರೂ ಏನು ಪ್ರಯೋಜನವಾಗಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಹಲವರು ವಿದ್ಯುತ್ ಆಘಾತದಿಂದ ಸಾವಿಗೀಡಾಗಿದ್ದಾರೆ. ಇದಕ್ಕೆ ಮರದ ರೆಂಬೆಗಳು ತಂತಿ ಮೇಲೆ ಬಿದ್ದಿರುವುದೇ ಕಾರಣ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೋಟ್ಯಂತರ ಹಣ ನಗರಕ್ಕೆ ಹರಿದು ಬಂದಿದೆ. ಆದರೆ ಮರದ ರೆಂಬೆಗಳನ್ನು ಕತ್ತರಿಸಲು ಮಂಗಳೂರಿನಲ್ಲಿ ಇರುವುದು ಕೇವಲ ಒಂದೇ ವಾಹನ. ಆದ್ದರಿಂದ ನಗರ ಪಾಲಿಕೆಯ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದೇವರೇ ಜ್ಞಾನ ಕೊಡಬೇಕು. ದುರ್ಘಟನೆಗಳಾಗಿ ಸಾವು ಸಂಭವಿಸಿದ್ದಲ್ಲಿ ಸಂಬಂಧಪಟ್ಟಇಲಾಖೆ ಅಧಿಕಾರಿಗಳ ಮೇಲೆ ಪೊಲೀಸರು ಸುಮೋಟೋ ಕೇಸು ದಾಖಲಿಸಬೇಕು ಎಂದವರು ಆಗ್ರಹಿಸಿದರು.