ರೇಣುಕಾಸ್ವಾಮಿ ಕೊಲೆಗಾರರ ಪಾತ್ರ ಸಾಬೀತು!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ ಸೇರಿದಂತೆ ಇತರ ೩ ಜನ ಆರೋಪಿಗಳ ಬಟ್ಟೆಯ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳ ಗುರುತು ಇರುವುದು ಎಫ್‌ಎಸ್‌ಎಲ್ ವರದಿಯಲ್ಲಿ ದೃಢಪಟ್ಟಿದೆ ಎನ್ನಲಾಗುತ್ತಿದೆ.
ಈಗಾಗಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ಗೆ ನ್ಯಾಯಾಲಯ ಮೂರು ಬಾರಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿದೆ. ಪ್ರಕರಣದ ತನಿಖೆ ಕೈಗೊಂಡಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸುಮಾರು ೨೦೦ಕ್ಕೂ ಹೆಚ್ಚು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಆ ಪೈಕಿ ಕೆಲ ಮಾಹಿತಿಗಳನ್ನು ಹೈದರಾಬಾದ್ ಎಫ್‌ಎಸ್‌ಎಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಕೆಲ ವರದಿಗಳು ತನಿಖಾಧಿಕಾರಿಗಳ ಕೈ ಸೇರಿವೆ. ಇನ್ನೂ ಕೆಲ ವರದಿಗಳು ಬರುವುದು ಮಾತ್ರ ಬಾಕಿ ಇವೆ. ಜೂನ್ ೮ ರಂದು ರಾತ್ರಿ ರೇಣುಕಾಸ್ವಾಮಿ ಹತ್ಯೆ ಸಂದರ್ಭದಲ್ಲಿ ಎ-೨ ಆರೋಪಿ ದರ್ಶನ್ ಮತ್ತು ಅವರ ಆಪ್ತರ ಬಟ್ಟೆಗಳ ಮೇಲೆ ರಕ್ತದ ಕಲೆಗಳು ಇರುವುದು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.
ರಿಮ್ಯಾಂಡ್ ಅರ್ಜಿಯಲ್ಲೇನಿದೆ
ಆಗಷ್ಟ್ ೧೪ ರಂದು ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಮಹತ್ವದ ಮಾಹಿತಿಯನ್ನು ಒದಗಿಸಿದ್ದಾರೆ. ಆರೋಪಿಗಳು ಕೊಲೆಯಲ್ಲಿ ಭಾಗಿಯಾಗಿದ್ದು ಎಫ್‌ಎಸ್‌ಎಲ್ ವರದಿಯಲ್ಲಿ ಬಹುತೇಕ ದೃಢವಾಗಿದೆ. ಪ್ರಕರಣ ಸಂಬಂಧ ಇನ್ನೂ ಹಲವರ ವಿಚಾರಣೆ ಬಾಕಿ ಇದೆ, ಸೆಕ್ಷನ್ ೧೬೪ರ ಅಡಿಯಲ್ಲಿ ಕೆಲವು ಸಾಂದರ್ಭಿಕ ಸಾಕ್ಷಿಗಳ ಹೇಳಿಕೆ ಬಾಕಿ ಇದೆ. ಆರೋಪಿಗಳು ಪ್ರಭಾವಿಗಳಾಗಿದ್ದು ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಆಮಿಷ ಅಥವಾ ಬೆದರಿಕೆ ಹಾಕುವುದು ಸಾಧ್ಯತೆ ಇದೆ. ಇನ್ನಷ್ಟು ತಾಂತ್ರಿಕ ಸಾಕ್ಷಿಗಳನ್ನು ಸಿಎಫ್‌ಎಸ್‌ಎಲ್ ಪರೀಕ್ಷೆಗೆಂದು ಕಳಿಸಿದ್ದು ಅವುಗಳ ವರದಿ ಬರುವುದು ಬಾಕಿ ಇದೆ. ಪವಿತ್ರಗೌಡ, ದರ್ಶನ್‌ನಿಂದ ೧೭ ಆರೋಪಿಗಳವರೆಗೆ ಕೃತ್ಯದಲ್ಲಿ ಭಾಗಿ ಆಗಿರುವುದು ಮೇಲ್ನೋಟಕ್ಕೆ ತಿಳಿದಿದೆ. ಜಾಮೀನು ನೀಡಿದರೆ ತೊಂದರೆ ಆಗುವ ಸಾಧ್ಯತೆ ಇದೆ. ಸಾಕ್ಷಿಗಳ ಬೆದರಿಕೆ ಹಾಕಿ ಸಾಕ್ಷಿ ನಾಶ ಸಾಧ್ಯತೆ ಇದ್ದು, ಈ ಎಲ್ಲ ಕಾರಣಗಳನ್ನು ಪರಿಗಣಿಸಿ ಜಾಮೀನು ನೀಡಬಾರದು ಎಂದು ರಿಮ್ಯಾಂಡ್ ಅರ್ಜಿಯಲಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಸೆಪ್ಟೆಂಬರ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆಯಾಗುವ ಸಾಧ್ಯತೆ ಇದೆ.