ರೈತನ ಹಣಕ್ಕೂ ಕನ್ನ ಹಾಕಿದ ಸೈಬರ್ ವಂಚಕರು…!
ಧಾರವಾಡ(ಉಪ್ಪಿನಬೆಟಗೇರಿ): ಗ್ರಾಮದ ಕೆ.ವಿ.ಜಿ. ಬ್ಯಾಂಕ್‌ನಲ್ಲಿದ್ದ ರೈತರೊಬ್ಬರ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ವಂಚಕರು ಎಗರಿಸಿ ವಂಚಿಸಿದ ಘಟನೆ ನಡೆದಿದೆ.
ಸಮೀಪದ ಹನುಮನಾಳ ಗ್ರಾಮದ ರುದ್ರಪ್ಪ ಕಲ್ಲಪ್ಪ ಅಂಗಡಿ ವಂಚನೆಗೊಳಗಾದ ರೈತನಾಗಿದ್ದು, ಅವರು ಉಪ್ಪಿನಬೆಟಗೇರಿಯ ಕೆ.ವಿ.ಜಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದಾರೆ. ಇವರು ಇಲ್ಲಿಯವರೆಗೂ ಮೊಬೈಲ್ ಬ್ಯಾಂಕ್ ಮುಖಾಂತರ ವ್ಯವಹಾರ ಮಾಡಿಲ್ಲ ಮತ್ತು ಇವರು ಈ ಸೌಲಭ್ಯವನ್ನು ಹೊಂದಿರುವುದಿಲ್ಲ. ಆದರೂ ಈ ರೀತಿ ವಂಚನೆ ಹೇಗೆ ಆಗಿದೆ ಎಂಬುದು ತಿಳಿಯದಾಗಿದೆ.
ಬಹು ವರ್ಷಗಳಿಂದ ಈ ಬ್ಯಾಂಕಿನ ಜೊತೆಗೆ ವ್ಯವಹರಿಸುತ್ತಿದ್ದು, ಈ ಬ್ಯಾಂಕಿನಲ್ಲಿ ಹತ್ತು ಸಾವಿರ ರೂ.ಗಳನ್ನು ಪಡೆಯಬೇಕಾದರೆ ಮಶೀನ್ ಮೂಲಕ ಗ್ರಾಹಕರ ಹೆಬ್ಬಟ್ಟು ಪಡೆದು ಕೊಡುತ್ತಾರೆ. ಇಲ್ಲವೇ ಹಣ ಪಡೆಯುವ ಫಾರಂ ತುಂಬಿಸಿಕೊಂಡು ಗ್ರಾಹಕರ ಸಹಿ ಮಾಡಿಸಿ ಆ ಸಹಿ ಸರಿ ಇದೆ ಇಲ್ಲವೋ ಎಂದು ಪರಿಶೀಲಿಸಿ ಹಣವನ್ನು ನೀಡುತ್ತಾರೆ.
ಆದರೆ ಇವರ ಖಾತೆಯಿಂದ ಗೊತ್ತಾಗದಂತೆ ನ. ೨೩ರಂದು ೧೦ ಸಾವಿರ, ನ. ೨೪ರಂದು ೧೦ ಸಾವಿರ ಹಾಗೂ ನ. ೨೫ರಂದು ೯೯೦೦ ರೂ. ಸೇರಿ ಒಟ್ಟು ೨೯,೯೦೦ ಹಣವನ್ನು ಪಡೆದು ವಂಚಕರು ವಂಚಿಸಿದ್ದಾರೆ. ಕೆಲ ದಿನಗಳ ನಂತರ ರೈತ ರುದ್ರಪ್ಪ ಅವರು ಬ್ಯಾಂಕ್‌ಗೆ ಆಗಮಿಸಿ ತನ್ನ ಖಾತೆಯಿಂದ ಹಣ ಪಡೆಯಲು ಹೋದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಇದರಿಂದ ಆಘಾತಕ್ಕೊಳಗಾದ ರೈತ ರುದ್ರಪ್ಪ ಬ್ಯಾಂಕಿನ ಮ್ಯಾನೇಜರ್ ಎಸ್.ಡಿ. ಜೋಶಿ ಅವರಿಗೆ ತನಗಾದ ವಂಚನೆಯನ್ನು ತಿಳಿಸಿದ್ದಾರೆ.
ಕೂಡಲೇ ರೈತನ ಇನ್ನುಳಿದ ಹಣ ಹೋಗದಂತೆ ಆತನ ಬ್ಯಾಂಕ್ ಖಾತೆಯನ್ನು ಮ್ಯಾನೇಜರ್ ಸೀಜ್ ಮಾಡಿದ್ದಾರೆ. ಈ ವಂಚನೆಯ ಕುರಿತು ರೈತ ರುದ್ರಪ್ಪ ಅವರು ನ. ೨೭ರಂದು ಧಾರವಾಡದ ಸೈಬರ್ ಪೊಲೀಸ್ ಸ್ಟೇಶನ್‌ನಲ್ಲಿ ದೂರು ಸಲ್ಲಿಸಿದ್ದು, ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ. ಕೆ.ವಿ.ಜಿ ಬ್ಯಾಂಕ್‌ನ ಧಾರವಾಡದ ಮುಖ್ಯ ಕಚೇರಿಗೂ ಈ ವಂಚನೆ ಕುರಿತು ದೂರು ಸಲ್ಲಿಸಲಾಗಿದೆ.