ರೈತರಿಗೆ ಬೆಳೆ ಪರಿಹಾರ ನೀಡಲು ಒತ್ತಾಯ
ಶ್ರೀರಂಗಪಟ್ಟಣ: ಬೆಳೆದು ನಿಂತಿರುವ ತೆಂಗು, ಅಡಿಕೆ, ಮಾವು ಸೇರಿದಂತೆ ತೋಟಗಾರಿಕೆ ಬೆಳೆಗಳ ರಕ್ಷಣೆಗೆ ನೀರು ಕೊಡುವುದಿಲ್ಲ ಎಂಬ ಹೇಳಿಕೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಚಲುವರಯಸ್ವಾಮಿ ರವರು ಮೊದಲು ರೈತರಿಗೆ ಪ್ರತೀ ಎಕರೆಗೆ 50 ಸಾವಿರ, ರೂ.ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ಭೂಮಿತಾಯಿ ಹೋರಾಟ ಸಮಿತಿಯ ಮುಖ್ಯಸ್ಥ ಹಾಗೂ ರೈತ ಮುಖಂಡ ಕೆ.ಎಸ್ .ನಂಜುಂಡೇಗೌಡ ಆಗ್ರಹಿಸಿದ್ದಾರೆ.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚೆಗೆ ಕೆಆರ್ ಎಸ್ ನಲ್ಲಿ ಸಭೆ ನಡೆಸಿದ ಬಳಿಕ ರೈತರು ಭತ್ತ ನಾಟಿ ಮಡುವುದು ಬೇಡ. ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆಯಿರುವ ಕಾರಣ ನಾಲೆಗಳಿಗೆ ನೀರು ಹರಿಸಲಾಗದು ಎಂಬ ಹೇಳಿಕೆ ನೀಡಿದ್ದಾರೆ.
ಹಲವಾರು ವರ್ಷಗಳಿಂದ ಬೆಳೆದುಕೊಂಡು ಬಂದಿರುವ ಕಬ್ಬಿನ ಕೂಳೆಯ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳಿಗೆ ಕಟ್ ಪದ್ಧತಿಯಲ್ಲಿ ನೀರು ಹರಿಸಬೇಕು. ಜೊತೆಗೆ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರಿಗೆ ಪ್ರತೀ ಎಕರೆ ಪ್ರದೇಶಕ್ಕೆ ಸರ್ಕಾರ 50 ಸಾವಿರ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ತಮಿಳುನಾಡು ಕೇಳುವ ಮುನ್ನವೇ ನೀರು ಹರಿಸಿ ರಾಜ್ಯದ ರೈತರ ಮೇಲೆ ಚಪ್ಪಡಿ ಎಳೆದಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಇದೀಗ ರೈತರ ಬೆಳೆಗಳ ಸಂರಕ್ಷಣೆಗೆ ಕಟ್ ಪದ್ಧತಿಯಲ್ಲಿ ನೀರು ಹರಿಸಲಾಗದು ಎನ್ನುತ್ತಿದೆ.
ಸರ್ಕಾರ ಕಾವೇರಿ ಸಲಹಾ ಸಮಿತಿ ಹಾಗೂ ನಿರ್ವಹಣಾ ಮಂಡಳಿಗೆ ಸಮರ್ಪಕವಾಗಿ ಮಳೆಯ ಪ್ರಮಾಣ ಹಾಗೂ ಕನ್ನಂಬಾಡಿ ಅಣೆಕಟ್ಟೆಯಲ್ಲಿನ ನೀರಿನ ಸಂಗ್ರಹದ ಬಗ್ಗೆ ಮನವರಿಕೆ ಮಾಡುವಲ್ಲಿ ವಿಫಲವಾಗಿದೆ. ಸೂಕ್ತ ದಾಖಲೆಯೊಂದಿಗೆ ಇಲ್ಲಿನ ವಾಸ್ತವವನ್ನು ಮನವರಿಕೆ ಮಾಡಿಕೊಟ್ಟಿಯೂ ನಿರ್ವಹಣಾ ಮಂಡಳಿಯಿಂದ ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಅನ್ಯಾಯವಾಗುತ್ತಿದ್ದರೆ ಸಭೆಯಲ್ಲಿ ನೀರು ಬಿಡಲಾಗದು ಎಂದು ಎದ್ದು ಬರುವ ಶಕ್ತಿ ತೋರಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.