For the best experience, open
https://m.samyuktakarnataka.in
on your mobile browser.

ರೈತರು ಬಂದರು ದಾರಿ ಬಿಡಿ

01:29 AM Feb 23, 2024 IST | Samyukta Karnataka
ರೈತರು ಬಂದರು ದಾರಿ ಬಿಡಿ

ನಾಗರಿಕತೆಯ ರೂಪದಲ್ಲಿ ಭಾರತ ಎಷ್ಟೇ ದೊಡ್ಡ ಪ್ರಗತಿಯನ್ನು ಕಂಡಿರಲಿ, ದೇಶವಾಗಿ ಈಗಲೂ ಕೂಡಾ ಅದೊಂದು ಕೃಷಿ ಆಧಾರಿತ ರಾಷ್ಟ್ರ ಎಂಬ ಮಾತನ್ನು ಯಾವ ಆಧಾರದ ಮೇಲೂ ನಿರಾಕರಿಸಲು ಸಾಧ್ಯವಿಲ್ಲ. ಕೃಷಿ ಕ್ಷೇತ್ರದ ಕರ್ಮಚಾರಿಗಳು ಹಾಗೂ ಧರ್ಮಚಾರಿಗಳು ಆಗಿರುವ ರೈತಾಪಿ ಜನರ ಮೂಲಕವೇ ದೇಶದ ಸಂಸ್ಕೃತಿಯ ಸೊಗಡು ಉಳಿಯಲು ಕಾರಣವಾಗಿದೆ ಎಂಬುದರ ಹಿಂದಿರುವ ಸತ್ಯವೆಂದರೆ ರೈತರೇ ಈ ದೇಶದ ಬೆನ್ನೆಲುಬು. ಮಹಾಜ್ಞಾನಿಗಳು, ತತ್ವಜ್ಞಾನಿಗಳು, ವಿಜ್ಞಾನಿಗಳು, ರಾಜಕೀಯ ತಜ್ಞರು ಸೇರಿದಂತೆ ಸಾರ್ವಜನಿಕ ಕ್ಷೇತ್ರದ ವಿವಿಧ ಕ್ಷೇತ್ರಗಳ ಗಣ್ಯರ ಸಾಧನೆಯ ಮಹಾಶಿಖರವನ್ನು ಗೌರವಿಸುತ್ತಲೇ ಅಡಿಪಾಯದಂತಿರುವ ರೈತರ ಸಂರಕ್ಷಣೆ ಹಾಗೂ ಬಲವರ್ಧನೆಗೆ ಯಾವತ್ತಿಗೂ ಕೂಡಾ ಸರ್ಕಾರ ಆದ್ಯತೆಯನ್ನು ವಹಿಸದೇ ಹೋದರೆ ತಿನ್ನುವ ಅನ್ನಕ್ಕೂ ತತ್ವಾರ ಎದುರಾಗುವ ಇಥಿಯೋಪಿಯಾದಂತೆ ದುರ್ಬರ ಪ್ರಸಂಗಕ್ಕೆ ನಾವಾಗಿಯೇ ಅಪಾಯವನ್ನು ಆಹ್ವಾನಿಸಿಕೊಂಡಂತೆ ಆಗುತ್ತದೆ ಎಂಬ ಜಗತ್ತಿನ ಅನುಭವದ ಮಾತನ್ನು ನಿರಾಕರಿಸುವಂತಿಲ್ಲ. ಇಂತಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೇಶದಲ್ಲಿ ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಿರುವ ರೈತರ ಬೇಡಿಕೆಗಳನ್ನು ಮಮಕಾರದಿಂದ ಚರ್ಚಿಸಿ ಸಾಧ್ಯವಾದಷ್ಟು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮನಸ್ಸು ಮಾಡುವುದು ಎಲ್ಲಾ ದೃಷ್ಟಿಯಿಂದಲೂ ಶ್ರೇಯಸ್ಕರ. ರೈತರ ದಂಗೆ ಎಂದು ಸುಲಭವಾಗಿ ಇದನ್ನು ಪರಿಗಣಿಸಿ ನಿಗ್ರಹಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು ಕ್ಷಾತ್ರ ಧರ್ಮದ ಲಕ್ಷಣ. ಆದರೆ, ಸ್ವಭಾವತಃ ರೈತರು ಮುಗ್ದರು. ಬೆವರಿನ ಬೆಲೆ ಎಂಬುದರ ಅನುಭವ ಆಧಾರಿತ ಪ್ರತಿರೂಪವೇ ಅವರು. ಹಕ್ಕುಗಳನ್ನು ಕೇಳಿ ಹೋರಾಟಕ್ಕೆ ಇಳಿದಾಕ್ಷಣ ಅವರನ್ನು ದಂಗೆಕೋರರು ಎಂದು ವರ್ಗೀಕರಿಸುವುದು ನಾಗರಿಕ ಸಮಾಜದ ಲಕ್ಷಣವಾಗಲಾರದು. ಭಾರತದಲ್ಲಿ ಇತ್ತೀಚಿನ ದಿನಮಾನಗಳಲ್ಲಿ ಯಾವುದೇ ಜನಪ್ರಿಯ ಅಥವಾ ಜನಪರ ಹೋರಾಟಗಳು ನಡೆದರೂ ಅದರ ಪರ ಅಥವಾ ವಿರುದ್ಧ ಟೀಕೆ ಟಿಪ್ಪಣಿಗಳು ಮಾರ್ದನಿಗೊಳ್ಳುತ್ತಿರುವ ಹಿಂದಿರುವುದು ರಾಜಕೀಯ ವೈಚಾರಿಕತೆಯ ಮಲಬದ್ಧತೆಯ ರೂಪ.
ರಾಜಕೀಯ ವೈಚಾರಿಕತೆ ಯಾವಾಗಲೂ ತೆರೆದ ಬಾಗಿಲಿನಂತಿರಬೇಕು. ಆದರೆ ಈಗ ಮುಚ್ಚಿದ ಬಾಗಿಲಿನಂತಿರುವ ಇಂತಹ ವೈಚಾರಿಕತೆಗಳಿಂದ ಸಾರ್ವಜನಿಕ ವಲಯದಲ್ಲಿ ದೃಷ್ಟಿದೋಷ ಕಾಣಿಸಿಕೊಂಡು ತಮ್ಮ ಮೂಗಿನ ನೇರಕ್ಕೆ ಒಳಿತು ಕೆಡುಕುಗಳನ್ನು ವಿಂಗಡಿಸುವ ಕುಟಿಲ ಬುದ್ಧಿಜೀವಿಗಳ ಲೆಕ್ಕಾಚಾರ ದೇಶದ ಪ್ರಗತಿಗೆ ಮಾರಕವಾಗಿಬಿಟ್ಟಿದೆ. ಈಗ ರೈತರ ಹೋರಾಟಕ್ಕೂ ಇದೇ ರೀತಿಯ ದುರ್ಗತಿ ಬಂದೊದಗಿದೆ. ರೈತರು ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳನ್ನು ಬೇಷರತ್ತಾಗಿ ಅಂಗೀಕರಿಸಬೇಕು ಎಂದು ಯಾರೊಬ್ಬರೂ ಹೇಳುತ್ತಿಲ್ಲ. ಆದರೆ, ಈ ಬೇಡಿಕೆಗಳ ಈಡೇರಿಕೆಯ ಸಾಧ್ಯಸಾಧ್ಯತೆಗಳನ್ನು ಮುಕ್ತ ಮನಸ್ಸಿನಿಂದ ಚರ್ಚಿಸಿ ಸಮನ್ವಯ ಮಾರ್ಗದಿಂದ ಒಂದು ನಿಲುವಿಗೆ ಬರುವುದು ಈಗಿನ ಪರಿಸ್ಥಿತಿಯಲ್ಲಿ ಆಗಬೇಕಾದ ಕೆಲಸ.
ಆಹಾರ ತಜ್ಞ ಡಾ. ಎಂ.ಎಸ್. ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂಬ ರೈತರ ಬೇಡಿಕೆಯ ಇತ್ಯರ್ಥಕ್ಕೆ ಒಂದು ಉನ್ನತ ಶ್ರೇಣಿಯ ಕೃಷಿ ತಜ್ಞರು ಹಾಗೂ ರೈತರು ಇರುವ ಆಯೋಗವನ್ನು ರಚಿಸಿ ಕಾಲಮಿತಿಯೊಳಗೆ ಶಿಫಾರಸುಗಳನ್ನು ನೀಡುವಂತೆ ಸೂಚಿಸಿ ನಿರ್ಧಾರ ಕೈಗೊಳ್ಳುವುದು ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗದು. ಆಯೋಗಗಳ ರಚನೆಯ ಬಗ್ಗೆ ದೇಶದ ಜನರಿಗೆ ವಿಶ್ವಾಸ ಕಮರಿಹೋಗಲು ಕಾರಣಗಳು ಹಲವಾರು. ಆಯೋಗದ ಶಿಫಾರಸುಗಳು ಕಾಗದದ ಹೂವಿನಂತಾಗಿ ವರದಿಗಳು ಧೂಳು ತಿನ್ನುತ್ತಾ ಕಡತಗಳಲ್ಲಿ ಬಿದ್ದಿರುವುದನ್ನು ಕಂಡ ಜನ ಸಹಜವಾಗಿಯೇ ಆಯೋಗಗಳ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಜಾರಿಗೆ ರಚಿಸಲಾಗುವ ಇನ್ನೊಂದು ಆಯೋಗ ಕೊಡುವ ಶಿಫಾರಸುಗಳು ಪರಿಪೂರ್ಣವಾಗಿ ಜಾರಿಗೆ ಬರುತ್ತವೆ ಎಂಬ ಬದ್ಧತೆಯನ್ನು ಕಾರ್ಯಸೂಚಿಯಲ್ಲಿಯೇ ಸೇರಿಸಿದಾಗ ಬಹುಶಃ ಒಂದು ರೀತಿಯಲ್ಲಿ ವಿಶ್ವಾಸವನ್ನು ಮರುಸೃಷ್ಟಿಸಲು ಸಾಧ್ಯ.
ಈಗಿರುವಂತೆ ಕೇಂದ್ರ ಸರ್ಕಾರ ಕೃಷಿ ಮಂತ್ರಿ ಸೇರಿದಂತೆ ಇನ್ನಿತರ ಹಿರಿಯ ಮಂತ್ರಿಗಳ ಮಟ್ಟದಲ್ಲಿ ಹಲವು ಸುತ್ತುಗಳ ಮಾತುಕತೆಯನ್ನು ನಡೆಸಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಯಾವುದೇ ಪ್ರಗತಿ ಕಂಡಿಲ್ಲ. ಕಳೆದ ಬಾರಿ ರೈತರ ಹೋರಾಟ ದೆಹಲಿಯ ಕೆಂಪುಕೋಟೆಯಲ್ಲಿ ಇಡೀ ದೇಶ ಕಣ್ಣು ತೆರೆಯುವಂತೆ ಮಾಡಿರುವ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯ ಘೋಷಣೆಯ ಮೊದಲೇ ಕೇಂದ್ರ ಸರ್ಕಾರ ನಿರ್ಣಾಯಕವಾದ ರೀತಿಯಲ್ಲಿ ಹೋರಾಟದ ಅಂತ್ಯಕ್ಕೆ ಸರ್ವಸಮ್ಮತ ನಿರ್ಧಾರವಾಗುವಂತೆ ನೋಡಿಕೊಂಡು ಬಿಕ್ಕಟ್ಟಿಗೆ ಮಂಗಳ ಹಾಡುವುದು ಈಗಿನ ಅಗತ್ಯ.