ರೈತರ ನಿದ್ದೆಗೆಡಿಸಿದ ವಿಂಡ್‌ಮಿಲ್ ಕಂಪನಿ ವಾಹನ
ಸೂರ್ಯನಾರಾಯಣ ನರಗುಂದಕರ
ಗದಗ: ಈ ಬಾರಿ ಚೆನ್ನಾಗಿ ಮಳೆಯಾಗಿ ಬಿತ್ತನೆ ಮಾಡಿ ಬದುಕು ಬಂಗಾರ ಮಾಡಿಕೊಳ್ಳಬೇಕೆಂಬ ಕನಸಿನಲ್ಲಿದ್ದ ರೈತರಿಗೆ ವಿಂಡ್‌ಮಿಲ್ ಕಂಪನಿಗಳ ವಾಹನಗಳು ನಿದ್ದೆಗೆಡಿಸಿವೆ.
ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಹೊರವಲಯದಲ್ಲಿನ ರೈತರು ಕಳೆದೊಂದು ತಿಂಗಳಿನಿಂದ ಜಮೀನಿನಲ್ಲಿ ಬೆಳೆ ಇಲ್ಲದಿದ್ದರೂ ಕಾವಲು ಕಾಯುತ್ತಿದ್ದಾರೆ. ರಾತ್ರಿಯಿಡೀ ಜಾಗರಣೆ ಮಾಡುವ ಮೂಲಕ ಗಾಳಿಯಂತ್ರದ ಕಂಪನಿಯ ಯಾವುದೇ ವಾಹನ ತಮ್ಮ ಜಮೀನು ಪ್ರವೇಶಿಸದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.
ಏನಾಗಿದೆ? ಜಿಲ್ಲೆಯಲ್ಲಿ ಭಾರಿ ರಭಸದಿಂದ ಗಾಳಿ ಬೀಸುವುದರಿಂದ ಹಲವು ವಿಂಡ್‌ಮಿಲ್ ಕಂಪನಿಗಳು ಜಿಲ್ಲೆಗೆ ಲಗ್ಗೆಯಿಟ್ಟಿವೆ. ಇವು ಮುಗ್ಧ ರೈತರಿಗೆ ಹಣ ನೀಡುವ ಆಮಿಷವೊಡ್ಡಿ ಅರ್ಧ ಎಕರೆಯಿಂದ ಒಂದು ಎಕರೆವರೆಗಿನ ಜಮೀನನ್ನು ಮೂವತ್ತು ವರ್ಷಗಳ ಲೀಸ್‌ಗೆ ಬರೆಯಿಸಿಕೊಂಡು ಗಾಳಿ ಯಂತ್ರಗಳನ್ನು ಸ್ಥಾಪಿಸಿದ್ದಾರೆ. ರೀನ್ಯೂವ್ ಕಂಪನಿಯು ರೈತರೊಂದಿಗೆ ರಸ್ತೆಗೆ ಒಪ್ಪಂದ ಮಾಡಿಕೊಂಡು ಗಾಳಿ ಯಂತ್ರ ಅಳವಡಿಸುವ ಕಾರ್ಯ ಮುಗಿಸಿದೆ. ಪ್ರಸ್ತುತ ತಾವು ಯಾವುದೇ ಒಪ್ಪಂದ ಮಾಡಿಕೊಳ್ಳದ ಐರಿಷ್ ವಿಂಡ್ ಕಂಪನಿ ತಮ್ಮ ಜಮೀನಿನಲ್ಲಿ ವಾಹನ ಓಡಿಸುತ್ತಿದ್ದಾರೆಂಬುದು ರೈತರ ಆರೋಪ.
ರೈತರಿಂದ ಲೀಸ್ ಪಡೆದಿರುವ ಕಂಪನಿಗಳ ಅಧಿಕಾರಿಗಳು ಜಮೀನಿನತ್ತ ಸುಳಿಯದ್ದರಿಂದ ಪ್ರತಿನಿತ್ಯ ರೈತರು, ಗಾಳಿ ಯಂತ್ರಗಳ ಕಂಪನಿ ಅಧಿಕಾರಿಗಳ ಜಟಾಪಟಿ ನಡೆಯುತ್ತಿದೆ. ಸಿಟ್ಟಿಗೆದ್ದ ರೈತರು ವಿಂಡ್ ಫ್ಯಾನ್ ರೆಕ್ಕೆ ಹೊತ್ತು ತಂದ ಬೃಹತ್ ವಾಹನಗಳನ್ನು ಜಮೀನು ಅಗೆದು ಗುಂಡಿ ತೋಡಿ ತಡೆದಿದ್ದಾರೆ. ರೈತರಿಗೆ ರಕ್ಷಣೆ ನೀಡಬೇಕಾಗಿರುವ ಪೊಲೀಸ್ ಅಧಿಕಾರಿಗಳು ಸಹ ಕಂಪನಿ ಪರವಾಗಿಯೇ ವಕಾಲತ್ತು ವಹಿಸುತ್ತಿರುವದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಐರಿಷ್ ವಿಂಡ್ ಕಂಪನಿ ವಿರುದ್ಧ ರೈತರು ಕೆಂಡಕಾರಿದ್ದಾರೆ. ನಮ್ಮ ಹಾಗೂ ಕಂಪನಿ ನಡುವೆ ಯಾವುದೇ ಒಪ್ಪಂದ ಆಗಿಲ್ಲ. ಅಕ್ರಮವಾಗಿ ಜಮೀನುಗಳಲ್ಲಿ ಬೃಹತ್ ವಾಹನಗಳು ಓಡಾಡುತ್ತಿವೆ ಎಂದು ದೂರಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ.
ಜಿಲ್ಲೆಯ ರೈತರಿಗೆ ಯಾವುದೇ ಸಂದರ್ಭದಲ್ಲಿಯೂ ಅನ್ಯಾಯವಾಗಲು ಬಿಡುವುದಿಲ್ಲ. ದಾಖಲೆಗಳನ್ನು ಪರಿಶೀಲನೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಯಾರ ಪರವಾಗಿಯೂ ವಕಾಲತ್ತು ವಹಿಸುವ ಪ್ರಶ್ನೆಯೇ ಇಲ್ಲ. ಕಂಪನಿಗಳು ಪೊಲೀಸ್ ರಕ್ಷಣೆ ಕೇಳಿದ್ದಾರೆ, ನೀಡಲಾಗಿದೆ. ರೈತರು ಏನೇ ಸಮಸ್ಯೆಗಳಿದ್ದರೆ ನೇರವಾಗಿ ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು.
- ಬಾಬಾಸಾಹೇಬ ನೇಮಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ