For the best experience, open
https://m.samyuktakarnataka.in
on your mobile browser.

ರೈತರ ಭೂಮಿ ವಕ್ಫ್ ಪಾಲಾಗುವುದಿಲ್ಲ

02:27 PM Oct 27, 2024 IST | Samyukta Karnataka
ರೈತರ ಭೂಮಿ ವಕ್ಫ್ ಪಾಲಾಗುವುದಿಲ್ಲ

ವಿಜಯಪುರ: ವಕ್ಫ್ ಆಸ್ತಿ ಬರೀ 11 ಎಕರೆ, ಮಿಕ್ಕಿದ್ದು ಹೊನವಾಡ ಗ್ರಾಮದ ರೈತರದು. ಅನಗತ್ಯ ಗೊಂದಲ, ಆತಂಕ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಜಯಪುರದ 124 ರೈತರಿಗೆ ನೋಟಿಸ್ ನೀಡಲಾಗಿದೆ. ಚಡಚಣ -3, ಇಂಡಿ ತಹಸೀಲ್ದಾರರು ನೋಟಿಸ್ ನೀಡದೆ ಸರ್ವೇ ನಂಬರ್ 41 ರಲ್ಲಿ ಇಂದೀಕರಣ ಮಾಡಿದ್ದಾರೆ. ಎಸಿ ಅವರು ಈ ಬಗ್ಗೆ ತನಿಖೆ ಮಾಡುತ್ತಾರೆ ಎಂದರು. 1974ರ ಗೆಜೆಟ್‌ನಲ್ಲಿನ ತಪ್ಪನ್ನು 1977ರಲ್ಲಿ ಸರಿ ಮಾಡಿದ ವಕ್ಫ್ ಮಂಡಳಿ ಗೆಜೆಟ್‌ನಲ್ಲಿ ತಪ್ಪಾಗಿ ನಮೂದಿಸಿದ್ದರಿಂದಾಗಿ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ 1,200 ಎಕರೆ ವಕ್ಫ್ ಆಸ್ತಿ ಎನ್ನುವ ಗೊಂದಲ ಸೃಷ್ಟಿಯಾಗಿದೆಯಷ್ಟೆ. ಇಲ್ಲಿ 11 ಎಕರೆ ಮಾತ್ರ ವಕ್ಫ್‌ಗೆ ಸೇರಿದ್ದು, ಇದರಲ್ಲಿ 10 ಎಕರೆ 14 ಗುಂಟೆಯಲ್ಲಿ ಖಬರಸ್ತಾನವಿದೆ. ಉಳಿದ 24 ಗುಂಟೆಯಲ್ಲಿ ಈದ್ಗಾ, ಮಸೀದಿ ಇತ್ಯಾದಿ ಕಟ್ಟಡಗಳಿವೆ. ಉಳಿದ ಜಮೀನೆಲ್ಲ ರೈತರಿಗೆ ಸೇರಿದೆ ಎಂದರು.