For the best experience, open
https://m.samyuktakarnataka.in
on your mobile browser.

ರೈತರ ಭೂಮಿ ವಕ್ಫ್ ವಿವಾದ ತುರ್ತು ಪರಿಹಾರ ಅಗತ್ಯ

02:30 AM Oct 29, 2024 IST | Samyukta Karnataka
ರೈತರ ಭೂಮಿ ವಕ್ಫ್ ವಿವಾದ ತುರ್ತು ಪರಿಹಾರ ಅಗತ್ಯ

ರಾಜ್ಯದ ಕೆಲವು ಜಿಲ್ಲೆಗಳ ರೈತರ ಜಮೀನು ಖಾತೆಗಳಲ್ಲಿ ಏಕಾಏಕಿ ಕರ್ನಾಟಕ ವಕ್ಫ್ ಬೋರ್ಡ್ ಬಂದು ಕುಳಿತಿರುವುದು ರೈತರಲ್ಲಿ ದಿಗ್ಭ್ರಮೆ, ಆತಂಕ, ಆಕ್ರೋಶವನ್ನು ಏಕಕಾಲಕ್ಕೆ ತಂದಿದೆ. ತಾತ ಮುತ್ತಾತನ ಕಾಲದಿಂದ ತಾವು ಉಳುಮೆ ಮಾಡುತ್ತಿದ್ದ ಜಮೀನು ತಮ್ಮದಲ್ಲ, ಕರ್ನಾಟಕ ವಕ್ಫ್ ಬೋರ್ಡ್ ಆಸ್ತಿ ಎಂದಾದರೆ ತಾವೆಲ್ಲಿ ಹೋಗುವುದು ಎಂದು ದಾರಿಕಾಣದಾಗದೇ ಕಂಗಾಲಾಗಿದ್ದಾರೆ.
ಅಕ್ಟೋಬರ್ ತಿಂಗಳ ಆರಂಭದಲ್ಲಿ ಜಮೀನು ಉತಾರ(ಖಾತೆ) ತೆಗೆದಿಟ್ಟುಕೊಂಡವರಿಗೆ ದಿನಾಂಕ ೧೦ರಂದು ತಮ್ಮ ಖಾತೆಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ.
ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ಪ್ರಸ್ತಾವನೆ ತಂದಿರುವುದಕ್ಕೂ ಕರ್ನಾಟಕದಲ್ಲಿ ವಕ್ಫ್ ಹೆಸರಿನಲ್ಲಿ ರೈತರ ಜಮೀನುಗಳನ್ನು ಕಬಳಿಸುವ ಹುನ್ನಾರ ನಡೆದಿರುವುದಕ್ಕೂ ನೇರವಾದ ಸಂಬಂಧವಿದೆ. ಇಲ್ಲಿಯವರೆಗೆ ಸುಮ್ಮನಿದ್ದ ಕರ್ನಾಟಕ ವಕ್ಫ್ ಬೋರ್ಡ್ ಏಕಾಏಕಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ರಾಜ್ಯ ವಕ್ಫ್ ಸಚಿವ ಜಮೀರ್‌ಅಹ್ಮದ್ ಖಾನ್ ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ವಕ್ಫ್ ಅದಾಲತ್ ನಡೆಸುತ್ತಿದ್ದಾರೆ. ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಈ ಕ್ರಮ ಎಂಬುದು ಮೇಲ್ನೋಟಕ್ಕೆ ಸರಿಯಾದ ಕ್ರಮವೇ? ಆದರೆ ಹೋದ ಕಡೆಗಳಲ್ಲೆಲ್ಲ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ವಕ್ಫ್ ಆಸ್ತಿ ಸರ್ವೆ ಮಾಡಲು ಮೌಖಿಕ ಆದೇಶ ನೀಡುತ್ತಾ ಬಂದಿದ್ದಾರೆ.
ಸಚಿವರ ಮೌಖಿಕ ಆದೇಶದಂತೆ ಕೆಲವು ತಹಶೀಲ್ದಾರರು ಯಾವುದೇ ಜಮೀನಿಗೆ ಸಂಬಂಧಿಸಿದಂತೆ ಯಾರಾದರೂ ಮುಸ್ಲಿಂರು ಇದು ವಕ್ಫ್ ಆಸ್ತಿ ಎಂದು ದೂರು ನೀಡಿದರೆ ತಕ್ಷಣ ಯಾವುದೇ ವಿಚಾರಣೆ ನಡೆಸದೇ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಆ ರೈತನ ಜಮೀನು ಖಾತೆಯಲ್ಲಿ ಕರ್ನಾಟಕ ವಕ್ಫ್ ಆಸ್ತಿ ಎಂದು ನಮೂದಿಸಿರುವುದು ವಿವಾದದ ಕೇಂದ್ರಬಿಂದು. ಬ್ರಿಟೀಷರ ಒಡೆದಾಳುವ ನೀತಿಯ ಭಾಗವಾಗಿ ೧೯೨೩ ರಲ್ಲಿ ಮುಸಲ್ಮಾನ ವಕ್ಫ್ ಅಧಿನಿಯಮ ಜಾರಿಗೆ ಬಂದಿತು. ಆಗ ಆ ಅಧಿನಿಯಮದಲ್ಲಿ ಸೆಕ್ಷನ್ ೪೦ ರಂತ ಕರಾಳ ಶಾಸನ ಇರಲಿಲ್ಲ. ಸ್ವಾತಂತ್ರ್ಯಾ ನಂತರ ೧೯೭೪ ರಲ್ಲಿ ವಕ್ಫ್ ಕಾಯ್ದೆಯನ್ನು ಪುನರ್‌ಸ್ಥಾಪಿಸಿದಾಗಲೂ ಈ ಕಲಂ ಇರಲಿಲ್ಲ. ಆದರೆ ೧೯೯೫ ರಲ್ಲಿ ವಕ್ಫ್ ಕಾಯ್ದೆಗೆ ತಂದ ತಿದ್ದುಪಡಿಯಲ್ಲಿ ಸೆಕ್ಷನ್ ೪೦ ರ ಅಡಿ ವಕ್ಫ್ ಬೋರ್ಡ್‌ಗಳಿಗೆ ಯಾವುದೇ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನಿಯಮಿತ ಅಧಿಕಾರವನ್ನು ನೀಡಲಾಯಿತು. ಕಾಯ್ದೆಯಲ್ಲಿನ ಇಂಥ ಅಂಶಗಳೇ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ಕೆಲವೊಂದು ತಿದ್ದುಪಡಿ ಮಾಡುವ ವಿಧೇಯಕವನ್ನು ಮಂಡಿಸಲು ಕಾರಣ. ಪ್ರಸ್ತತ ತಿದ್ದುಪಡಿ ವಿಧೇಯಕ ಜಂಟಿ ಸಂಸದೀಯ ಸಮಿತಿ ಪರಿಶೀಲನೆಯಲ್ಲಿದೆ.
ವಕ್ಫ್ ಕಾಯ್ದೆ ೧೯೯೫ ರ ನಿಬಂಧನೆಗಳ ಸಿಂಧುತ್ವವನ್ನು ಪ್ರಶ್ನಿಸಿ ೨೦೨೩ ರಲ್ಲಿ ಅಶ್ವಿನಿ ಕುಮಾರ ಉಪಾಧ್ಯಾಯ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಹಿಂದು, ಕ್ರೈಸ್ತ, ಬೌದ್ಧ, ಜೈನ್, ಪಾರ್ಸಿ, ಸಿಖ್, ಜುಡಾಯಿಸಂ, ಬಹಾಯಿಸಂ, ಝೋರಾಸ್ಟಿಯನ್ ಧರ್ಮಗಳ ಅನುಯಾಯಿಗಳಿಗಿಲ್ಲದ ಕಾನೂನು ಮುಸ್ಲಿಂರಿಗಷ್ಟೇ ಏಕೆ? ಇದು ಭಾರತದ ಜಾತ್ಯಾತೀತೆ, ಏಕತೆ, ಸಮಗ್ರತೆಗೆ ವಿರುದ್ಧವಾಗಿದೆ ಎಂಬುದು ಅವರ ವಾದವಾಗಿತ್ತು.
ರಾಜ್ಯದ ಪ್ರತಿಪಕ್ಷ ಬಿಜೆಪಿ ಈ ವಿವಾದವನ್ನು ಸಮರ್ಥವಾಗಿ ತನ್ನತ್ತ ಬಳಸಿಕೊಳ್ಳಲು ಆಂತರಿಕ ಸಮಿತಿ ಹಾಗೂ ಹೋರಾಟದ ಪಡೆ ನಿರ್ಮಿಸಿದೆ. ಇಸ್ಲಾಮೀಕರಣದ ಹುನ್ನಾರ ಎಂದು ಬಣ್ಣಿಸುತ್ತಿದ್ದಾರೆ. ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರು ಈಗಷ್ಟೇ ವಿವಾದ ಏನೆಂದು ಅರಿಯಲಾರಂಭಿಸಿದ್ದಾರೆ! ರೈತರಿಗೆ ಅನ್ಯಾಯವಾಗಲು ಬಿಡಲ್ಲ ಎಂದು ಹೇಳುವ ಕೈಗಾರಿಕಾ ಸಚಿವರು ಪರಿಹಾರಕ್ಕಾಗಿ ಟಾಸ್ಕ್‌ಫೋರ್ಸ್ ರಚಿಸುವ ಮಾಹಿತಿ ನೀಡಿದ್ದಾರೆ. ಇನ್ನೂ ಕಂದಾಯ ಸಚಿವರ ವಾದ, ಸಮರ್ಥನೆ ಗೊತ್ತಿಲ್ಲ. ಬೆಂಕಿ ಬಿದ್ದಿದೆ.. ಸರ್ಕಾರ ಬಾವಿ ತೋಡಲು ಸಲಕೆ ಹುಡುಕುತ್ತಿರುವಂತಿದೆ.
ಕರ್ನಾಟಕದಲ್ಲಿ ಭುಗಿಲೆದ್ದಿರುವ ವಕ್ಫ್ ಆಸ್ತಿ ವಿವಾದದಿಂದ ರೈತರು ತಮ್ಮ ಜಮೀನು ಕಳೆದುಕೊಳ್ಳುವಂತಾಗಬಾರದು. ರೈತರ ಹಕ್ಕುಗಳನ್ನು ರಕ್ಷಿಸುವ ಹೊಣೆ ಸರ್ಕಾರದ ಮೇಲಿದೆ. ರೈತರ ಜಮೀನು ಖಾತೆಗಳಿಂದ ವಕ್ಫ್ ತೆರವುಗೊಂಡಾಗಲೇ ರೈತರಿಗೆ ನೆಮ್ಮದಿ. ಇಲ್ಲವಾದಲ್ಲಿ ರೈತರಿಗೆ ಈ ದೀಪಾವಳಿ ಕರಾಳವಾಗಲಿದೆ. ಸರ್ಕಾರದ ಕ್ರಮಗಳು ಸಮಸ್ಯೆಗಳನ್ನು ಬಗೆಹರಿಸಬೇಕೇ ಹೊರತು ವಿವಾದಗಳನ್ನು ಸೃಷ್ಟಿಸುವುದಕ್ಕೆ ಕಾರಣವಾಗಬಾರದು. ಬಡ ರೈತರು ಸರ್ಕಾರದ ಕ್ರಮದಿಂದ ಬಳಲಿ ಬೆಂಡಾಗಬಾರದು. ನ್ಯಾಯಾಲಯದ ಮೆಟ್ಟಿಲು ಹತ್ತುವುದು ರೈತರಿಗೆ ಸಾಧ್ಯವಾಗದ ಮಾತು. ಸರ್ಕಾರ ತನ್ನ ತಪ್ಪನ್ನು ಕೂಡಲೇ ಸರಿಪಡಿಸಿ ಜನರ ಆತಂಕ ನಿವಾರಿಸಬೇಕು.