ರೈಲುನಿಲ್ದಾಣ ನಾಮಕರಣಕ್ಕೆ ಪ್ರಗತಿಪರ ಸಂಘಟನೆಗಳ ಒತ್ತಾಯ
ಕೊಪ್ಪಳ: ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ವೀರ, ಸಾಂಸ್ಕೃತಿಕ ನಾಯಕ ಗಂಡುಗಲಿ ಕುಮಾರರಾಮ ಅಥವಾ ದೇವನಾಂಪ್ರಿಯ ಸಾಮ್ರಾಟ್ ಅಶೋಕನ ಹೆಸರು ಮರುನಾಮಕರಣ ಮಾಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟವು ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಂಜೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ರೈಲ್ವೆ ನಿಲ್ದಾಣಕ್ಕೆ ಮರುನಾಮಕರಣ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಜಿಲ್ಲೆಯ ಹೆಸರುಗಳಿಗೆ ಕೊಪ್ಪಳದ ಇತಿಹಾಸ ಪರಿಶೀಲಿಸಿ, ಇಬ್ಬರು ಪ್ರಸಿದ್ಧ ಇತಿಹಾಸ ಪುರುಷರ ಹೆಸರನ್ನು ಸೂಚಿಸಲಾಗಿದೆ. ಕೊಪ್ಪಳದಲ್ಲಿ ಅಶೋಕನ ಎರಡು ಶಿಲಾಶಾಸನಗಳಿದ್ದು, ಒಂದು ಗವಿಮಠ ಶಾಸನ, ಇನ್ನೊಂದು ಪಾಲ್ಕಿಗುಂಡು ಶಾಸನ ಎಂದು ಹೆಸರಿಸಲಾಗಿದೆ. ಅಶೋಕನು ಯುದ್ಧ ತಿರಸ್ಕರಿಸಿ, ಬುದ್ಧನಿಗೆ ಶರಣಾಗಿ ಶಾಂತಿಪ್ರಿಯನಾದ. ಇನ್ನೊಬ್ಬರ ವೀರ, ಸಾಂಸ್ಕೃತಿಕ ನಾಯಕ ಗಂಡುಗಲಿ ಕುಮಾರರಾಮ ಪರನಾರಿ ಸಹೋದರ ಎಂದು ಹೆಸರುವಾಸಿಯಾಗಿ, ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣಿಕರ್ತನಾಗಿದ್ದಾನೆ. ಹಾಗಾಗಿ ಕೊಪ್ಪಳ ರೈಲು ನಿಲ್ದಾಣಕ್ಕೆ ಗಂಡುಗಲಿ ಕುಮಾರರಾಮ ಅಥವಾ ಸಾಮ್ರಾಟ ಅಶೋಕ ಎಂದು ಹೆಸರಿಡಬೇಕು ಎಂದು ಸಭೆಯಲ್ಲಿ ಚರ್ಚಿಸಿ, ತೀರ್ಮಾನಿಸಲಾಯಿತು.
ಪ್ರಗತಿಪರ ಸಂಘಟನೆಗಳ ಮುಖಂಡರಾದ ಬಸವರಾಜ ಶೀಲವಂತರ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಪೂಜಾರ, ಅಂದಾನಪ್ಪ ಬೆಣಕಲ್, ಕಾಶಪ್ಪ ಚಲುವಾದಿ, ಸಂಜಯದಾಸ್ ಕೌಜಗೇರಿ, ಕಿರಣ ಬಂಗಾಳಿಗಿಡದ, ನಾಗರಾಜ ನಾಯಕ ಡೊಳ್ಳಿನ್, ಪ್ರಾಣೇಶ ಪೂಜಾರ, ಪ್ರಕಾಶಗೌಡ ಎಸ್.ಯು., ಪತ್ರಕರ್ತ ಶಿವರಾಜ ನುಗಡೋಣಿ, ಶಾಂತಯ್ಯ, ಹನುಮಂತಪ್ಪ ಇದ್ದರು.