ರೈಲ್ವೆ ನಿಲ್ದಾಣ, ರೈಲಿನಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆ; ನೈಋತ್ಯ ರೈಲ್ವೆ
ಹುಬ್ಬಳ್ಳಿ: ಈಚೆಗೆ ರೈಲಿನಲ್ಲಿ ನಡೆದ ಕೆಲ ಘಟನಾವಳಿಗಳ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯ ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯ ಎಲ್ಲ ರೈಲ್ವೆ ನಿಲ್ದಾಣ, ಈ ಮಾರ್ಗದಲ್ಲಿ ಸಂಚರಿಸಲಿರುವ ರೈಲಿನಲ್ಲಿ ಪ್ರಯಾಣಿಕರು ಮತತು ಸಿಬ್ಬಂದಿ ಸುರಕ್ಷತೆ, ರಕ್ಷಣೆ ದೃಷ್ಟಿಯಿಂದ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಪ್ರಮುಖ ೮ ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮರಾ ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಲಾಗಿದೆ ಎಂದು ಹುಬ್ಬಳ್ಳಿ ವಿಭಾಗದ ವ್ಯವಸ್ಥಾಪಕರು ತಿಳಿಸಿದ್ದಾರೆ.
ಮಂಗಳವಾರ ರೈಲ್ವೆ ನಿಲ್ದಾಣ ಮತ್ತು ರೈಲಿನಲ್ಲಿ ಪ್ರಯಾಣಿಕರು, ಸಿಬ್ಬಂದಿ, ಅಧಿಕಾರಿಗಳ ಸುರಕ್ಷತೆ, ರಕ್ಷಣೆ ಕುರಿತಂತೆ ಕೈಗೊಂಡ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತ, ರೈಲ್ವೆ ಭದ್ರತಾ ವಿಭಾಗ ಎಸ್ಪಿ ಅವರೊಂದಿಗೆ ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು ನಡೆಸಿದ ಪರಿಶೀಲನಾ ಸಭೆಯಲ್ಲಿ ತಿಳಿಸಿದರು.
ಹುಬ್ಬಳ್ಳಿ ವಿಭಾಗದಲ್ಲಿ ಸಂಚರಿಸುವ ಪ್ರಮುಖ ೨೦ಕ್ಕೂ ಹೆಚ್ಚು ರೈಲುಗಳಿಗೆ ಆರ್ಪಿಎಫ್ ಹಾಗೂ ಸರ್ಕಾರದ ಪೊಲೀಸರು ಭದ್ರತೆ ಒದಗಿಸಲಿದ್ದಾರೆ. ಸುರಕ್ಷತೆ, ಭದ್ರತೆಗೆ ಸಂಬಂಧಿಸಿದಂತೆ ಬರುವ ದೂರುಗಳನ್ನು, ಕರೆಗಳನ್ನು ತಕ್ಷಣ ಸ್ವೀಕರಿಸಿ ಧಾವಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಇನ್ನೂ ೧೨ ರೈಲುಗಳಿಗೆ ಆರ್ಪಿಎಫ್ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಟಿಕೆಟ್ ಚೆಕ್ಕಿಂಗರ್ಸ್ಗಳಿಗೆ ರಕ್ಷಣೆ ಒದಗಿಸಲು ಒತ್ತು ಕೊಡಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಹುಬ್ಬಳ್ಳಿ ವಿಭಾಗ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಬಳ್ಳಾರಿ, ಹೊಸಪೇಟೆ, ವಾಸ್ಕೊಡಗಾಮಾ, ವಿಜಯಪುರ ಸೇರಿದಂತೆ ೮ ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮರಾ ಹೆಚ್ಚು ಅಳವಡಿಸಲಾಗಿದೆ ಎಂದು ಹೇಳಿದರು.