ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರೈಲ್ವೆ ಭೂಮಿ `ಕೃಷ್ಣಾರ್ಪಣ'ಕ್ಕೆ ಹೆಜ್ಜೆ

11:26 AM Jan 18, 2024 IST | Samyukta Karnataka

ಶಾಸನ ಸಭೆ ಅಥವಾ ಸಂಸತ್ತಿನ ಸದನ ಸಮಿತಿ ಇಲ್ಲವೇ ವಿಶೇಷ ತನಿಖಾ ಸಮಿತಿ(ಎಸ್‌ಐಟಿ) ಮೂಲಕ ವ್ಯಾಪಕವಾದ ತನಿಖೆ ನಡೆಸಿ ಈ ಅಕ್ರಮ ಪ್ರಕರಣದ ಹಿಂದಿರುವ ಪಟ್ಟಭದ್ರರನ್ನು ಗುರುತಿಸಿ ತಕ್ಕ ಕಾನೂನು ಕ್ರಮ ಜರುಗಿಸುವುದು ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆಯ ಮಾರ್ಗವಾಗಿದೆ.

ದೀಪದ ಕೆಳಗೆ ಕತ್ತಲು ಎನ್ನುವ ಮಾತನ್ನು ಅಣಕಿಸುವ ರೀತಿಯಲ್ಲಿ ನೈರುತ್ಯ ರೈಲ್ವೆ ಕೇಂದ್ರ ಸ್ಥಾನವಾದ ಹುಬ್ಬಳ್ಳಿ ಎಂಟಿಎಸ್ ಕಾಲೋನಿಯ ೧೩ ಎಕರೆ ಭೂಮಿಯನ್ನು ಗುತ್ತಿಗೆ ಕೊಡಲು ಮುಂದಾಗಿರುವ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಗ್ರಾಸ ಒದಗಿಸಿದೆ. ಸಾರ್ವಜನಿಕ ಹಿತಾದೃಷ್ಟಿಯ ಕಾರಣ ಇಲ್ಲವೇ ಪ್ರೇರಣೆ ಇಲ್ಲದೆ ಇರುವ ಈ ಅಪಾರ ಮೌಲ್ಯದ ಭೂಮಿಯನ್ನು ಶರವೇಗದಲ್ಲಿ ೯೯ ವರ್ಷಗಳ ಅವಧಿಗೆ ಗುತ್ತಿಗೆ ಕೊಡಲು ಮುಂದಾಗಿರುವ ಕ್ರಮದ ಹಿಂದಿನ ಕೈವಾಡ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿರುವ ಸಂದರ್ಭದಲ್ಲಿ ಕುಂಬಳಕಾಯಿ ಕಳ್ಳ ಎನ್ನುವ ಗಾದೆಯ ಮಾತು ನಾನಾ ರೀತಿಯಲ್ಲಿ ಚಲಾವಣೆಗೆ ಬರುತ್ತಿರುವುದು ಪರಿಸ್ಥಿತಿಯ ಇನ್ನೊಂದು ಮುಖ. ನೂರಾರು ಕೋಟಿ ರೂಪಾಯಿ ಮೌಲ್ಯದ ಈ ಭೂಮಿಯನ್ನು ಯಾವ ಕಾರಣದ ಮೇಲೆ ಗುತ್ತಿಗೆ ಕೊಡಲು ಹೊರಟಿದ್ದಾರೆ ಎಂಬುದು ನಿಜಕ್ಕೂ ಅರ್ಥವಾಗದ ವಿಚಾರ. ಏಕೆಂದರೆ, ರೈಲ್ವೆ ಸೌಲಭ್ಯದ ವಿಸ್ತರಣಾ ಯೋಜನೆಗಳಿಗೆ ಇಂತಹ ಭೂಮಿಯ ಅಗತ್ಯ ಬಹಳವಿದೆ. ಜೊತೆಗೆ ಜನಸಂದಣಿ ಹೆಚ್ಚಿರುವ ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಪೂರಕ ಸೌಲಭ್ಯಗಳನ್ನು ಸೃಷ್ಟಿಸಲು ಈ ಭೂಮಿ ಬಳಕೆ ಅನುಕೂಲಕ್ಕೆ ಬರುತ್ತವೆ. ಇದಾವುದನ್ನೂ ಪರಿಗಣಿಸದೇ ಏಕಪಕ್ಷೀಯವಾಗಿ ರೈಲ್ವೆ ಇಲಾಖೆ ಕೈಗೊಂಡಿರುವ ಈ ಕ್ರಮ ಜನವಿರೋಧಿ ಅಷ್ಟೇ ಅಲ್ಲ, ಕಾನೂನು ವಿರೋಧಿಯೂ ಕೂಡಾ ಆಗಿದೆ.
ರಹಸ್ಯವಾಗಿ ೯೯ ವರ್ಷಗಳ ಗುತ್ತಿಗೆ ನೀಡುವ ಈ ಪ್ರಕರಣ ಸಂಯುಕ್ತ ಕರ್ನಾಟಕ' ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದ ನಂತರ ಎಚ್ಚೆತ್ತುಕೊಂಡಂತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತನಿಖೆಯ ಕಡೆ ಗಮನಹರಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯೇ. ಆದರೆ ತಿಪ್ಪೆ ಸಾರಿಸುವ ಇಂತಹ ಬೆಳವಣಿಗೆಗಳಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಶಾಸನ ಸಭೆ ಅಥವಾ ಸಂಸತ್ತಿನ ಸದನ ಸಮಿತಿ ಇಲ್ಲವೇ ವಿಶೇಷ ತನಿಖಾ ಸಮಿತಿ(ಎಸ್‌ಐಟಿ) ಮೂಲಕ ವ್ಯಾಪಕವಾದ ತನಿಖೆ ನಡೆಸಿ ಈ ಅಕ್ರಮ ಪ್ರಕರಣದ ಹಿಂದಿರುವ ಪಟ್ಟಭದ್ರರನ್ನು ಗುರುತಿಸಿ ತಕ್ಕ ಕಾನೂನು ಕ್ರಮ ಜರುಗಿಸುವುದು ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆಯ ಮಾರ್ಗವಾಗಿದೆ. ಈ ಹಿಂದೆ ಬೆಂಗಳೂರಿನ ಅಶೋಕ ಹೋಟೆಲ್ ಸೇರಿದಂತೆ ದೇಶದ ವಿವಿಧ ಭಾಗಗಳ ಇದೇ ಬ್ಯ್ರಾಂಡ್ ಹೋಟೆಲ್ ಆಸ್ತಿಯನ್ನು ತರಾತುರಿಯಲ್ಲಿ ಮಾರಾಟ ಮಾಡಿದ್ದನ್ನು ಮರೆಯುವಂತಿಲ್ಲ. ಇಷ್ಟಕ್ಕೂ ಈ ಭೂಮಿಯನ್ನು ಸರ್ಕಾರಿ ಒಡೆತನದ ಸಂಸ್ಥೆಗಳು ಸಾರ್ವಜನಿಕ ಉದ್ದೇಶದ ಯೋಜನೆಗಳಿಗೆ ಬಳಸಿಕೊಳ್ಳಲು ಮುಂದಾಗಿದ್ದರೆ ಅದಕ್ಕೊಂದು ಸಮರ್ಥನೆ ಇರುತ್ತಿತ್ತು. ಆದರೆ ಈಗ ಗುತ್ತಿಗೆ ಕೊಡಲು ಹೊರಟಿರುವುದು ಖಾಸಗಿಯವರಿಗೆ. ಈ ಹಿಂದೆ ಕೇಂದ್ರದಲ್ಲಿ ರೈಲ್ವೆ ಖಾತೆಯ ಸಹಾಯಕ ಸಚಿವರಾಗಿದ್ದ ಸುರೇಶ್ ಅಂಗಡಿ ಅವರು ಎಂಟಿಎಸ್ ಕಾಲೋನಿಯ ಭೂಮಿಯ ಆವರಣದಲ್ಲಿ ರೈಲ್ವೆ ಆಸ್ಪತ್ರೆಯೊಂದನ್ನು ಸ್ಥಾಪಿಸಲು ಮುಂದಾಗಿದ್ದರು. ಇದಕ್ಕೂ ಮೊದಲು ನರಸಿಂಹರಾಯರ ಸಂಪುಟದಲ್ಲಿ ರೈಲ್ವೆ ಮಂತ್ರಿಯಾಗಿದ್ದ ಸುರೇಶ್ ಕಲ್ಮಾಡಿ ಅವರು ಬೆಂಗಳೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಾದೇಶಾದ್ಯಂತ ರೈಲ್ವೆ ಇಲಾಖೆಗೆ ಅಪಾರ ಪ್ರಮಾಣದ ಭೂಮಿ ಇದೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೊಸ ಸೌಲಭ್ಯಗಳೊಂದಿಗೆ ಸುಖ ಪ್ರಯಾಣದ ಸೌಲಭ್ಯವನ್ನು ಜನರಿಗೆ ಒದಗಿಸಲು ಇಂತಹ ರೈಲ್ವೆ ಭೂಮಿಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿ ವೆಚ್ಚವನ್ನು ಸರಿದೂಗಿಸಿಕೊಳ್ಳುವ ಉದ್ದೇಶವಿದೆ' ಎಂಬ ನಿಲುವನ್ನು ಪ್ರಕಟಿಸಿದ್ದರು. ಕಲ್ಮಾಡಿ ಅವರ ಮಾತು ಕಾರ್ಯರೂಪಕ್ಕೆ ಬಂದಿದ್ದರೆ ಇಂತಹ ಭೂಮಿಯಲ್ಲಿ ರೈಲ್ವೆ ಒಡೆತನದಲ್ಲಿಯೇ ವಾಣಿಜ್ಯ ಚಟುವಟಿಕೆಗಳು ನಡೆದು ಪ್ರಯಾಣಿಕರಿಗೆ ಸೌಲಭ್ಯಗಳು ಸುಲಭ ದರದಲ್ಲಿ ದೊರಕಲು ಸಾಧ್ಯವಾಗುತ್ತಿತ್ತು. ಈ ಸಾಧ್ಯತೆಗಳನ್ನೆಲ್ಲಾ ಗಾಳಿಗೆ ತೂರಿ ಖಾಸಗಿಯವರಿಗೆ ಪರಭಾರೆ ಮಾಡಲು ಹೊರಟಿರುವ ಕ್ರಮ ಜೇಬು ತುಂಬಿಸುವ ಕ್ರಮ ಎಂದೇ ಹೇಳಬೇಕಾಗುತ್ತದೆ.
ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗೆಯೇ ಇಲ್ಲಿರುವ ಸೌಲಭ್ಯಗಳು ಕೂಡಾ ಅತ್ಯಾಧುನಿಕ. ಕರ್ನಾಟಕವಲ್ಲದೇ ನೆರೆಯ ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ನಿರ್ಣಾಯಕ ಜಾಗದಲ್ಲಿರುವ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಪ್ರತಿಷ್ಠೆಗೆ ಕಪ್ಪುಚುಕ್ಕೆ ಇಡುವ ರೀತಿಯಲ್ಲಿ ಬೆಲೆಬಾಳುವ ಈ ಭೂಮಿಯನ್ನು ಅನ್ಯರ ಪಾಲು ಮಾಡುತ್ತಿರುವ ಸನ್ನಾಹ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಪ್ಪಿತಸ್ಥರಿಗೆ ಬರೆ ಹಾಕಲು ಮತದಾರರಿಗೆ ಸುವರ್ಣಾವಕಾಶ, ಸಾರ್ವಜನಿಕ ಆಸ್ತಿಯನ್ನು ಸಾರ್ವಜನಿಕ ಉದ್ದೇಶಗಳಿಗೆ ಬಳಸುವಾಗ ಸಾರ್ವತ್ರಿಕವಾಗಿ ಎಲ್ಲರಿಗೂ ತಿಳಿಯುವಂತೆ ಮಾಡುವುದು ಜನತಂತ್ರ ಪದ್ಧತಿಯ ಸೌಂದರ್ಯ. ಆದರೆ ಇಂತಹ ಒಳಮಾರ್ಗದಿಂದ ಗುತ್ತಿಗೆ ಮಾರ್ಗ ಅನುಸರಿಸುತ್ತಿರುವುದು ಜನತಂತ್ರ ಪದ್ಧತಿ ವಿರೋಪಗೊಳಿಸುವ ಪಿತೂರಿಯ ವಿರುದ್ಧ ಜನ ಸಿಡಿದೇಳ ಬೇಕಾದದ್ದು ಅನಿವಾರ್ಯ ಅಗತ್ಯ.

Next Article